4 ಪಂದ್ಯ ಮುಗಿದರೂ ಗೆಲುವಿನ ಖಾತೆ ತೆರೆಯದ ದ್ರಾವಿಡ್ ತಂಡ
ಯುರೋಪ್‌ನ ಚೊಚ್ಚಲ ಟಿ20 ಲೀಗ್ ETPL ನಲ್ಲಿ ರಾಹುಲ್ ದ್ರಾವಿಡ್ ಮಾಲೀಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡ ಸತತ ಸೋಲು ಅನುಭವಿಸಿದೆ. ಆರ್. ಅಶ್ವಿನ್ ನಾಯಕತ್ವದ ಈ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದೇ ನಿರಾಸೆ ಮೂಡಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯದಿಂದಾಗಿ ದ್ರಾವಿಡ್ ತಂಡ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಯುರೋಪ್‌ನಲ್ಲಿ ಆರಂಭವಾಗಿರುವ ಚೊಚ್ಚಲ ಟಿ20 ಲೀಗ್ ಇಟಿಪಿಎಲ್‌ನಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಮಾಲೀಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡ ಕೂಡ ಆಡುತ್ತಿದೆ. 6 ತಂಡಗಳ ನಡುವೆ ನಡೆಯುತ್ತಿರುವ ಈ ಲೀಗ್ನಲ್ಲಿ ದ್ರಾವಿಡ್ ತಂಡ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಆದರೆ ಈ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದಿಲ್ಲ. ಆಡಿದ ಈ ಎಲ್ಲಾ ಪಂದ್ಯಗಳಲ್ಲೂ ಡಬ್ಲಿನ್ ಗಾರ್ಡಿಯನ್ಸ್ ತಂಡ ಹೀನಾಯ ಸೋಲು ಅನುಭವಿಸಿದೆ. ಕೆಲವು ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕ ಕೈಕೊಟ್ಟರೆ, ಉಳಿದ ಪಂದ್ಯಗಳಲ್ಲಿ ಬೌಲಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡುತ್ತಿ. ಹೀಗಾಗಿಯೇ ದ್ರಾವಿಡ್ ತಂಡಕ್ಕೆ ಇದುವರೆಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ರೋಟರ್ಡ್ಯಾಮ್ ಡಾಕರ್ಸ್ಗೆ ಗೆಲುವು
ಟೀಂ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ನಾಯಕತ್ವದಲ್ಲಿ ಆಡುತ್ತಿರುವ ಡಬ್ಲಿನ್ ಗಾರ್ಡಿಯನ್ಸ್ ತಂಡ ಇಂದು ತನ್ನ ನಾಲ್ಕನೇ ಪಂದ್ಯದಲ್ಲಿ ಟೇಬಲ್ ಟಾಪರ್ ಫಾಫ್ ಡುಪ್ಲೆಸಿಸ್ ನಾಯಕತ್ವದ ರೋಟರ್ಡ್ಯಾಮ್ ಡಾಕರ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡಬ್ಲಿನ್ ಗಾರ್ಡಿಯನ್ಸ್ 178 ರನ್ ಕಲೆಹಾಕಿತು. ಹೀಗಾಗಿ ಈ ಪಂದ್ಯದಲ್ಲಾದರೂ ತಂಡಕ್ಕೆ ಗೆಲುವು ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರೋಟರ್ಡ್ಯಾಮ್ ಡಾಕರ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಸಿಡಿಲಬ್ಬರದ ಬ್ಯಾಟಿಂಗ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ರೋಟರ್ಡ್ಯಾಮ್ ಡಾಕರ್ಸ್ ಗೆಲುವಿನ ದಡ ಮುಟ್ಟಿತು.
ಜೇಮ್ಸ್ ವಿನ್ಸ್ 95 ರನ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ಆರಂಭಿಕ ಜೇಮ್ಸ್ ವಿನ್ಸ್ ಅಬ್ಬರದ ಆರಂಭ ಒದಗಿಸಿಕೊಟ್ಟರು. ಜೇಮ್ಸ್ ವಿನ್ಸ್ ಅಜೇಯ 95 ರನ್ ಬಾರಿಸುವ ಮೂಲಕ ತಂಡವನ್ನು ಈ ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ವಿನ್ಸ್ ತಮ್ಮ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ವಿನ್ಸ್ ಹೊರತುಪಡಿಸಿ ಸಂಜಯ್ ಕೃಷ್ಣಮೂರ್ತಿ ಹಾಗೂ ವಿಜಯ್ ಶಂಕರ್ ಕೂಡ ತಲಾ 26 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು. ಅಂತಿಮವಾಗಿ ಡಬ್ಲಿನ್ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 178 ರನ್ ಕಲೆಹಾಕಿತು.
ಡುಪ್ಲೆಸಿಸ್ 51 ಎಸೆತಗಳಲ್ಲಿ 79 ರನ್
ಈ ಗುರಿ ಬೆನ್ನಟ್ಟಿದ ರೋಟರ್ಡ್ಯಾಮ್ ಡಾಕರ್ಸ್ ತಂಡಕ್ಕೂ ಸ್ಫೋಟಕ ಆರಂಭ ಸಿಕ್ಕಿತು. ಆರಂಭಿಕ ಮೈಕೆಲ್ ಲೆವಿಟ್ 14 ಎಸೆತಗಳಲ್ಲಿ 35 ರನ್ ಬಾರಿಸಿದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ 51 ಎಸೆತಗಳಲ್ಲಿ 79 ರನ್ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ 34 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 18.4 ಓವರ್ಗಳಲ್ಲಿ ಗೆಲುವಿನತ್ತ ಮುನ್ನಡೆಸಿದರು.




