ವೈಭವ್ ಸೂರ್ಯವಂಶಿ ನಿರ್ದೋಷಿ; ಶ್ರೀಲಂಕಾದ ಇಬ್ಬರು ಕ್ರಿಕೆಟಿಗರಿಗೆ ದಂಡ ವಿಧಿಸಿದ ರೆಫರಿ
Dambulla Cricket Controversy: ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ಭಾರತ A vs ಶ್ರೀಲಂಕಾ A ಪಂದ್ಯದ ವಾಗ್ವಾದಕ್ಕೆ ಮ್ಯಾಚ್ ರೆಫರಿ ಇಬ್ಬರು ಲಂಕಾ ಆಟಗಾರರಿಗೆ ದಂಡ ವಿಧಿಸಿದ್ದಾರೆ. ಶ್ರೀಲಂಕಾದ ವಿಷೇನ್ ಹಲಂಬಗೆ ಹಾಗೂ ನಿರೋಷನ್ ಡಿಕ್ವೆಲ್ಲಾ ಶಿಕ್ಷೆಗೆ ಒಳಗಾದವರು. ಭಾರತದ ವೈಭವ್ ಸೂರ್ಯವಂಶಿ ಘಟನೆಯಲ್ಲಿ ಭಾಗಿಯಾಗಿದ್ದರೂ, ಅವರಿಗೆ ಶಿಕ್ಷೆಯಾದ ಬಗ್ಗೆ ವರದಿಯಾಗಿಲ್ಲ. ಬಿಸಿಸಿಐ ಕಾರ್ಯದರ್ಶಿ ವೈಭವ್‌ಗೆ ಆಟದತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದಿದ್ದ ಭಾರತ ಎ ಹಾಗೂ ಶ್ರೀಲಂಕಾ ಎ ( India A vs Sri Lanka A) ತಂಡಗಳ ನಡುವಿನ ಪಂದ್ಯದಲ್ಲಿ ಉಂಟಾಗಿದ್ದ ವಿವಾದದ ಪರಿಣಾಮವಾಗಿ ಇಬ್ಬರು ಆಟಗಾರರಿಗೆ ಮ್ಯಾಚ್ ರೆಫರಿ ಶಿಕ್ಷೆ ವಿಧಿಸಿದ್ದಾರೆ. ಅಚ್ಚರಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಯಾರಿಗೆ ಶಿಕ್ಷೆಯಾಗಬೇಕೆಂಬ ಮಾತುಗಳು ಕೇಳಿಬಂದಿದ್ದವೋ ಅವರಿಗೆ ಯಾವುದೇ ಶಿಕ್ಷೆಯನ್ನು ವಿಧಿಸಲಾಗಿಲ್ಲ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪಂದ್ಯದ ಕೊನೆಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಹಾಗೂ ಭಾರತದ ವೈಭವ್ ಸೂರ್ಯವಂಶಿ (Vaibhav Sooryavanshi) ನಡುವೆ ವಾಗ್ವಾದ ನಡೆದಿತ್ತು. ಇದೀಗ ಈ ವಾಗ್ವಾದಕ್ಕೆ ಪ್ರಮುಖ ಕಾರಣೀಕೃತರಾಗಿದ್ದ ಶ್ರೀಲಂಕಾದ ವಿಷೇನ್ ಹಲಂಬಗೆ (Vishen Halambage) ಹಾಗೂ ನಿರೋಷನ್ ಡಿಕ್ವೆಲ್ಲಾ ಅವರಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಶ್ರೀಲಂಕಾದ ಇಬ್ಬರಿಗೆ ಶಿಕ್ಷೆ
ಪಂದ್ಯ ಮುಗಿದ ಒಂದು ದಿನದ ಬಳಿಕ ಇಡೀ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿರುವ ಪಂದ್ಯದ ರೆಫರಿ ಪ್ರದೀಪ್ ಜಯಪ್ರಕಾಶ್‌ದರನ್, ಶ್ರೀಲಂಕಾ ಎ ತಂಡದ ಭಾಗವಾಗಿರುವ ವಿಷೇನ್ ಹಲಂಬಗೆಗೆ ದಂಡ ವಿಧಿಸಿದ್ದಾರೆ. ಇದರರ್ಥ ಇಡೀ ಘಟನೆಯಲ್ಲಿ ವಿಷೇನ್ ಹಲಂಬಗೆ ತಪ್ಪಿತಸ್ಥನೆಂದು ಸಾಭೀತಾಗಿದೆ. ಇವರ ಜೊತೆಗೆ ಲಂಕಾ ತಂಡದ ಹಿರಿಯ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರಿಗೂ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ. ಆದರೆ ಡಿಕ್ವೆಲ್ಲಾಗೆ ವಿಧಿಸಿರುವ ಶಿಕ್ಷೆಗೂ, ವೈಭವ್ ಸೂರ್ಯವಂಶಿ ಜೊತೆಗಿನ ಜಗಳಕ್ಕೂ ಯಾವುದೇ ಸಂಬಂಧವಿಲ್ಲ. ಅಂದರೆ ಬೇರೆ ಪ್ರಕರಣದಲ್ಲಿ ಡಿಕ್ವೆಲ್ಲಾಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಪ್ರತಿಕ್ರಿಯಿಸಿದ ಬಿಸಿಸಿಐ
ಇನ್ನು ಉಭಯ ಆಟಗಾರರ ನಡುವಿನ ವಾಗ್ವಾದದ ಸಮಯದಲ್ಲಿ ಎದುರಾಳಿ ತಂಡದ ಆಟಗಾರನನ್ನು ತಳ್ಳಿದ್ದ ವೈಭವ್ ಸೂರ್ಯವಂಶಿಗೆ ಶಿಕ್ಷೆಯಾಗಿದೆಯೇ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಘಟನೆ ನಡೆದ ಬಳಿಕ ವೈಭವ್‌ಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿತ್ತು. ಆದರೆ ಇದುವರೆಗೆ ಆ ರೀತಿಯ ಯಾವುದೇ ಕ್ರಮವನ್ನು ಬಿಸಿಸಿಐ ತೆಗೆದುಕೊಂಡಿಲ್ಲ. ಏತನ್ಮಧ್ಯೆ, ವೈಭವ್ ಸೂರ್ಯವಂಶಿ ಅವರ ವಾಗ್ವಾದದ ವಿಷಯಕ್ಕೆ ಸಂಬಂಧಿಸಿದ್ದಂತೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯಿಸಿದ್ದು, ವೈಭವ್‌ಗೆ ಇತರ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು ಸರಣಿಯತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.
‘ಇದು ಐಪಿಎಲ್ ಅಲ್ಲ, ಮನೆಗೆ ಹೋಗು’; ವೈಭವ್ ಕೆರಳುವಂತೆ ಮಾಡಿದ್ದೇ ಲಂಕಾ ಕ್ರಿಕೆಟಿಗ..!
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸೈಕಿಯಾ, ‘ಭಾರತ ಎ ತಂಡವು ಪ್ರಮುಖ ಪಂದ್ಯಾವಳಿಯನ್ನು ಆಡುತ್ತಿದೆ, ಇದರಲ್ಲಿ ಭಾರತದ ಹಿರಿಯ ತಂಡಕ್ಕೆ ಸ್ಥಾನ ಪಡೆಯುವ ಎಲ್ಲಾ ಉದಯೋನ್ಮುಖ ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಆಟಗಾರರು ಪ್ರಮುಖ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ, ಆದ್ದರಿಂದ ಅವರು ಇತರ ಸಮಸ್ಯೆಗಳಿಂದ ವಿಚಲಿತರಾಗುವ ಬದಲು ತಮ್ಮ ಆಟದತ್ತ ಗಮನ ಹರಿಸಬೇಕು’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Tue, 16 June 26




