IPL 2025: ರಿಕಿ ಪಾಂಟಿಂಗ್ ಭಾರತೀಯ ಆಟಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ..!
IPL 2025 Punjab Kings: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2025) ಈವರೆಗೆ 9 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ತಂಡವು 5 ಜಯದೊಂದಿಗೆ ಒಟ್ಟು 11 ಅಂಕಗಳನ್ನು ಕಲೆಹಾಕಿದೆ. ಈ ಅಂಕಗಳೊಂದಿಗೆ ಶ್ರೇಯಸ್ ಅಯ್ಯರ್ ಪಡೆ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನ ಅಲಂಕರಿಸಿದೆ.

IPL 2025: ಪಂಜಾಬ್ ಕಿಂಗ್ಸ್ (PBKS) ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ (Ricky Ponting) ಭಾರತೀಯ ಆಟಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ. ಇಂತಹದೊಂದು ಗಂಭೀರ ಆರೋಪ ಮಾಡಿರುವುದು ಟೀಮ್ ಇಂಡಿಯಾದ ಮಾಜಿ ಆಟಗಾರ ಮನೋಜ್ ತಿವಾರಿ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಇನ್ ಫಾರ್ಮ್ ಆಟಗಾರರನ್ನು ನಿರ್ಲಕ್ಷಿಸಿ ಪಾಂಟಿಂಗ್ ವಿದೇಶಿ ಆಟಗಾರರನ್ನು ಬ್ಯಾಟಿಂಗ್ಗೆ ಕಳುಹಿಸಿದ್ದರು. ಈ ಕಾರ್ಯತಂತ್ರಗಳ ಬಗ್ಗೆ ಮನೋಜ್ ತಿವಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ.
ಮನೋಜ್ ತಿವಾರಿ ಹೇಳಿದ್ದೇನು?
ಈ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯುವ ಸಾಧ್ಯತೆಯಿಲ್ಲ. ಏಕೆಂದರೆ ಅವರ ಕಾರ್ಯತಂತ್ರವೇ ಆಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಇನ್ ಫಾರ್ಮ್ನಲ್ಲಿರುವ ಆಟಗಾರರ ಬದಲು, ಕಳಪೆ ಫಾರ್ಮ್ನಲ್ಲಿರುವ ಬ್ಯಾಟರ್ಗಳನ್ನು ಕಣಕ್ಕಿಳಿಸಿದ್ದಾರೆ.
ಇನ್-ಫಾರ್ಮ್ ಬ್ಯಾಟ್ಸ್‌ಮನ್‌ಗಳಾದ ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಅವರನ್ನು ಬ್ಯಾಟಿಂಗ್ಗೆ ಕಳುಹಿಸಲೇ ಇಲ್ಲ. ಬದಲಾಗಿ ತಮ್ಮ ವಿದೇಶಿ ಆಟಗಾರರ ಮೇಲೆ ನಂಬಿಕೆ ಇಟ್ಟಿದ್ದರು. ಇದರಿಂದ ಅವರು ಭಾರತೀಯ ಆಟಗಾರರನ್ನು ನಂಬುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರು ಹೀಗೆಯೇ ಮುಂದುವರೆದರೆ, ಪಂಜಾಬ್ ಕಿಂಗ್ಸ್ ಟಾಪ್-2 ನಲ್ಲಿ ಕಾಣಿಸಿಕೊಂಡರೂ ಅವರು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಮ್ಯಾಕ್ಸ್ವೆಲ್ಗೆ ಮತ್ತೆ ಮತ್ತೆ ಅವಕಾಶ:
ರಿಕಿ ಪಾಂಟಿಂಗ್ ಅವರ ಕಾರ್ಯತಂತ್ರವನ್ನು ಪ್ರಶ್ನಿಸಿರುವ ಮನೋಜ್ ತಿವಾರಿ, ಗ್ಲೆನ್ ಮ್ಯಾಕ್ಸ್ವೆಲ್ಗೆ ಸತತ ಅವಕಾಶ ನೀಡುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮ್ಯಾಕ್ಸ್‌ವೆಲ್ ನಿರಂತರ ವೈಫಲ್ಯ ಅನುಭವಿಸುತ್ತಿದ್ದರೂ ಅವರಿಗೆ ಚಾನ್ಸ್ ನೀಡಲಾಗುತ್ತಿದೆ. ಇದೇ ವೇಳೆ ಭಾರತೀಯ ಆಟಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ.
ಪಾಂಟಿಂಗ್ ತನಗೆ ಬೇಕಾದ ಆಟಗಾರರೊಂದಿಗೆ ಕಾರ್ಯ ತಂತ್ರ ರೂಪಿಸಿದರೆ, ಅದಕ್ಕೆ ಪಂಜಾಬ್ ಕಿಂಗ್ಸ್ ತಂಡವು ಬೆಲೆ ತೆರಲಿದೆ. ಇದರಿಂದ ಟ್ರೋಫಿ ಗೆಲ್ಲುವ ಅವಕಾಶವೇ ಕೈ ತಪ್ಪುವ ಸಾಧ್ಯತೆಯಿದೆ ಮನೋಜ್ ತಿವಾರಿ ಎಚ್ಚರಿಸಿದ್ದಾರೆ.
ಇನ್ನು ಕೆಕೆಆರ್ ವಿರುದ್ಧದ ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 8 ಎಸೆತಗಳಲ್ಲಿ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಆ ಬಳಿಕ ಮಾರ್ಕೊ ಯಾನ್ಸೆನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಇದಾದ ಬಳಿಕ ಬ್ಯಾಟ್ ಬೀಸಿದ್ದ ಜೋಶ್ ಇಂಗ್ಲಿಸ್. ಇದಾಗ್ಯೂ ಉತ್ತಮ ಫಾರ್ಮ್ನಲ್ಲಿರುವ ನೆಹಾಲ್ ವಧೇರಾ ಹಾಗೂ ಶಶಾಂಕ್ ಸಿಂಗ್ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿರಲಿಲ್ಲ.
ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?
ಇದನ್ನೇ ಪ್ರಸ್ತಾಪಿಸಿ ಮನೋಜ್ ತಿವಾರಿ ಪಂಜಾಬ್ ಕಿಂಗ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಭಾರತೀಯ ಆಟಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.




