ಜಸ್ಟ್ 30 ಇನಿಂಗ್ಸ್… ಕ್ರಿಸ್ ಗೇಲ್ ದಾಖಲೆ ಮುರಿದ ಸಾಯಿ ಸುದರ್ಶನ್
Sai Sudharsan Records: ಐಪಿಎಲ್ನ 23ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಯುವ ಎಡಗೈ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಅರ್ಧಶತಕದೊಂದಿಗೆ ಸಾಯಿ ಸುದರ್ಶನ್ ಐಪಿಎಲ್ನಲ್ಲಿ ವಿಶೇಷ ದಾಖಲೆಯನ್ನು ಸಹ ಬರೆದಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ (Sai Sudharsan) ಹೊಸ ಇತಿಹಾಸ ಬರೆಯುವತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಕೇವಲ 30 ಇನಿಂಗ್ಸ್ಗಳಲ್ಲಿ 1307 ರನ್ ಪೇರಿಸಿದ್ದಾರೆ. ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ 53 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 82 ರನ್ ಬಾರಿಸಿದ್ದರು.
ಈ 82 ರನ್ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ 30 ಇನಿಂಗ್ಸ್ಗಳ ಬಳಿಕ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಾಯಿ ಸುದರ್ಶನ್ ತಮ್ಮದಾಗಿಸಿಕೊಂಡರು. ಅಲ್ಲದೆ ಮೂವತ್ತು ಇನಿಂಗ್ಸ್ಗಳ ಬಳಿಕ ಅತೀ ಹೆಚ್ಚು ರನ್ ಬಾರಿಸಿದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಸಹ ಬರೆದಿದ್ದಾರೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ತಂಡದ ಮಾಜಿ ಆಟಗಾರ ಶಾನ್ ಮಾರ್ಷ್. ಐಪಿಎಲ್ನ ಮೊದಲ 30 ಇನಿಂಗ್ಸ್ಗಳಲ್ಲಿ ಶಾನ್ ಮಾರ್ಷ್ ಒಟ್ಟು 1338 ರನ್ ಕಲೆಹಾಕಿದ್ದರು. ಇದೀಗ ಈ ಪಟ್ಟಿಯಲ್ಲಿ ಸಾಯಿ ಸುದರ್ಶನ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಅದು ಕೂಡ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ ಮೊದಲ ಮೂವತ್ತು ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಗೇಲ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. 30 ಇನಿಂಗ್ಸ್ಗಳಲ್ಲಿ 1141 ರನ್ ಬಾರಿಸಿ ಗೇಲ್ ಈ ಸಾಧನೆ ಮಾಡಿದ್ದರು.
ಇದೀಗ 30 ಇನಿಂಗ್ಸ್ಗಳ ಮುಕ್ತಾಯದ ವೇಳೆಗೆ ಸಾಯಿ ಸುದರ್ಶನ್ ಒಟ್ಟು 1307 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೊದಲ 30 ಇನಿಂಗ್ಸ್ಗಳಲ್ಲಿ 1300+ ರನ್ ಕಲೆಹಾಕಿದ 2ನೇ ಬ್ಯಾಟರ್ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಯುವ ಎಡಗೈ ದಾಂಡಿಗ ತನ್ನದಾಗಿಸಿಕೊಂಡಿದ್ದಾರೆ.
ಸಾಯಿ ಸುದರ್ಶನ್ ಐಪಿಎಲ್ ವೃತ್ತಿಜೀವನ:
2022 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ಸಾಯಿ ಸುದರ್ಶನ್ ಈವರೆಗೆ 30 ಇನಿಂಗ್ಸ್ ಆಡಿದ್ದು, ಈ ವೇಳೆ 923 ಎಸೆತಗಳನ್ನು ಎದುರಿಸಿದ್ದಾರೆ. ಈ ಎಸೆತಗಳಲ್ಲಿ 1307 ರನ್ ಕಲೆಹಾಕಿ ಮಿಂಚಿದ್ದಾರೆ. ಅಲ್ಲದೆ ಇದರ ನಡುವೆ 1 ಶತಕ ಹಾಗೂ 9 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
ಇದನ್ನೂ ಓದಿ: IPL 2025: ಸಿಕ್ಸ್ ಹೊಡೆಸಿಕೊಳ್ಳದೇ ಒಂದೇ ಎಸೆತದಲ್ಲಿ ರನ್ ನೀಡಿದ ಶಾರ್ದೂಲ್ ಠಾಕೂರ್
ಈ ಮೂಲಕ ಐಪಿಎಲ್ನ ಆರಂಭಿಕ ಹಂತದಲ್ಲೇ ರನ್ ರಾಶಿ ಪೇರಿಸಿರುವ ಸಾಯಿ ಸುದರ್ಶನ್ ಮುಂಬರುವ ದಿನಗಳಲ್ಲಿ ಇದೇ ಫಾರ್ಮ್ ಮುಂದುವರೆಸಿದರೆ ಐಪಿಎಲ್ನಲ್ಲಿ ರನ್ ಸರದಾರನಾಗಿ ಕಾಣಿಸಿಕೊಳ್ಳಲಿದ್ದಾರೆ.
Published On - 8:32 am, Thu, 10 April 25