AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LSG vs KKR: ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೂಪರ್ ಓವರ್​ನಲ್ಲಿ ಸೋತ ಲಕ್ನೋ

IPL 2026 KKR vs LSG: ಐಪಿಎಲ್ 2026 ರ 38ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ರೋಚಕ ಕಾದಾಟ ನಡೆಸಿದವು. ಇದು ಈ ಆವೃತ್ತಿಯ ಮೊದಲ ಸೂಪರ್ ಓವರ್ ಆಗಿತ್ತು. ಕೆಕೆಆರ್ 155 ರನ್ ಗಳಿಸಿತು, ಲಕ್ನೋ ಅದನ್ನು ಟೈ ಮಾಡಿತು. ಸೂಪರ್ ಓವರ್‌ನಲ್ಲಿ ಲಕ್ನೋ 1 ರನ್ ಗಳಿಸಿದರೆ, ಕೆಕೆಆರ್ ಸುಲಭವಾಗಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತು. ಇದು ಕೆಕೆಆರ್ ಪಾಲಿಗೆ ಸ್ಮರಣೀಯ ಗೆಲುವಾಗಿತ್ತು.

LSG vs KKR: ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೂಪರ್ ಓವರ್​ನಲ್ಲಿ ಸೋತ ಲಕ್ನೋ
Lsg Vs Kkr
ಪೃಥ್ವಿಶಂಕರ
|

Updated on:Apr 27, 2026 | 12:04 AM

Share

ಐಪಿಎಲ್ 2026 (IPL2026) ಟೂರ್ನಮೆಂಟ್‌ನ 38 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ನಡುವೆ ನಡೆಯಿತು. ಈ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಸೂಪರ್​ ಓವರ್​​ಗೆ ಸಾಕ್ಷಿಯಾದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಕೆಕೆಆರ್ ತಂಡ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್ 155 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಕೂಡ ವೇಗಿ ಮೊಹಮ್ಮದ್ ಶಮಿ 20ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಹೀಗಾಗಿ ಪಂದ್ಯ ಸೂಪರ್​ ಓವರ್​ಗೆ ಹೋಯಿತು. ಇಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಕೇವಲ 1 ರನ್ ಕಲೆಹಾಕಿ ಕೆಕೆಆರ್ ಗೆಲುವಿನ 2 ರನ್ ಗುರಿ ನೀಡಿತು. ಈ ಗುರಿಯನ್ನು ಕೆಕೆಆರ್ ತಂಡ ಸುಲಭವಾಗಿ ಬೆನ್ನಟ್ಟಿತು.

ರಿಂಕು ಸಿಂಗ್ ಏಕಾಂಗಿ ಹೋರಾಟ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ತಂಡ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಲಕ್ನೋ ಪರ ಮೊಹ್ಸಿನ್ ಖಾನ್ ಅದ್ಭುತ ಪ್ರದರ್ಶನ ನೀಡಿ, ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದರು. ಇಲ್ಲಿಂದ ತಂಡದ ಪರ ಏಕಾಂಗಿ ಹೋರಾಟ ನೀಡಿದ ರಿಂಕು ಸಿಂಗ್, 51 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 83 ರನ್ ಗಳಿಸಿದರು.

ಮಾತ್ರವಲ್ಲದೆ ರಿಂಕು 27 ಎಸೆತಗಳಲ್ಲಿ ಸುನಿಲ್ ನರೈನ್ ಅವರೊಂದಿಗೆ ಎಂಟನೇ ವಿಕೆಟ್‌ಗೆ 50 ರನ್‌ಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಇನ್ನಿಂಗ್ಸ್‌ನಿಂದಾಗಿ, ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್‌ಗಳ ಗೌರವಾನ್ವಿತ ಮೊತ್ತವನ್ನು ಗಳಿಸಿತು. ಇದು ಐಪಿಎಲ್‌ನಲ್ಲಿ ರಿಂಕು ಸಿಂಗ್ ಅವರ ಇದುವರೆಗಿನ ಅತ್ಯಧಿಕ ಇನ್ನಿಂಗ್ಸ್ ಆಗಿತ್ತು.

ಮತ್ತೆ ಕೈಕೊಟ್ಟ ಲಕ್ನೋ ಬ್ಯಾಟಿಂಗ್ ವಿಭಾಗ

ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಟಾಪ್ ಆರ್ಡರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ನಾಯಕ ರಿಷಭ್ ಪಂತ್ 42 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಐಡೆನ್ ಮಾರ್ಕ್ರಾಮ್ 31 ರನ್ ಮತ್ತು ಆಯುಷ್ ಬಡೋನಿ 24 ರನ್ ಗಳಿಸಿದರು. ಆದಾಗ್ಯೂ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಉತ್ತಮವಾಗಿ ಬೌಲಿಂಗ್ ಮಾಡಿ ಪಂದ್ಯವನ್ನು ಕೆಕೆಆರ್ ಪರವಾಗಿ ತಿರುಗಿಸಿದರು. ಅಂತಿಮ ಓವರ್‌ನಲ್ಲಿ ಲಕ್ನೋಗೆ ಗೆಲ್ಲಲು 17 ರನ್‌ಗಳು ಬೇಕಾಗಿದ್ದವು.

ಕೊನೆಯ ಓವರ್ ರೋಚಕತೆ

ಕಾರ್ತಿಕ್ ತ್ಯಾಗಿ ಬೌಲ್ ಮಾಡಿದ ಈ ಓವರ್​ನಲ್ಲಿ ಲಕ್ನೋ ತಂಡಕ್ಕೆ ಗೆಲ್ಲುವ ಅವಕಾಶವಿತ್ತು. ಏಕೆಂದರೆ ತ್ಯಾಗಿ ಈ ಓವರ್​ನಲ್ಲಿ ಎರಡು ನೋ ಬಾಲ್​​ಗಳನ್ನು ಬೌಲ್ ಮಾಡಿದರು. ಆದರೆ ಇದರ ಪ್ರಯೋಜನವನ್ನು ಲಕ್ನೋ ಬ್ಯಾಟರ್ ಬಳಸಿಕೊಳ್ಳಲಿಲ್ಲ. ಆದಾಗ್ಯೂ ಓವರ್​​ನ ಕೊನೆಯ ಎಸೆತದಲ್ಲಿ ಶಮಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಟೈ ಮಾಡಿದರು.

IPL 2026: ತವರಿನ ಹೊರಗೆ ಸೇಡಿನ ಸಮರಕ್ಕೆ ಸಜ್ಜಾದ ಆರ್​​ಸಿಬಿ; ಎದುರಾಳಿ ಯಾರು?

ಸೂಪರ್ ಓವರ್‌ನಲ್ಲಿ ಗೆದ್ದ ಕೆಕೆಆರ್‌

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ, ಸುನಿಲ್ ನರೈನ್ ಅವರ ಮಾರಕ ಬೌಲಿಂಗ್‌ ಮುಂದೆ ಮಂಡಿಯೂರಿತು. ನರೈನ್ 0.3 ಓವರ್‌ಗಳಲ್ಲಿ ಕೇವಲ 1 ರನ್‌ಗೆ ಎರಡು ವಿಕೆಟ್ ಪಡೆದರು. ರಿಷಭ್ ಪಂತ್ 1 ರನ್ ಗಳಿಸಿ ಅಜೇಯರಾಗುಳಿದರು. ಹೀಗಾಗಿ, ಲಕ್ನೋ ಸೂಪರ್ ಓವರ್​ನಲ್ಲಿ ಕೇವಲ 1 ರನ್ ಕಲೆಹಾಕಿ, ಕೋಲ್ಕತ್ತಾ ತಂಡಕ್ಕೆ 2 ರನ್‌ಗಳ ಸಣ್ಣ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರಿನ್ಸ್ ಯಾದವ್ ಬೌಲ್ ಮಾಡಿದ ಮೊದಲ ಎಸೆತದಲ್ಲೇ ರಿಂಕು ಸಿಂಗ್ ಬೌಂಡರಿ ಬಾರಿಸಿ ತಂಡಕ್ಕೆ ನಿರ್ಣಾಯಕ ಗೆಲುವು ತಂದುಕೊಟ್ಟರು.

Published On - 11:48 pm, Sun, 26 April 26

Follow Us