2 ವರ್ಷಗಳ ಒಪ್ಪಂದ: ಸಚಿನ್ ವಿಶ್ವ ದಾಖಲೆ ಮುರಿಯಲು ರೂಟ್ಗೆ ರಹದಾರಿ
ಇಂಗ್ಲೆಂಡ್ ಕ್ರಿಕೆಟ್‌ನ ಬ್ಯಾಟಿಂಗ್ ದಂತಕಥೆ ಜೋ ರೂಟ್, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೊತೆಗೆ ಸೆಪ್ಟೆಂಬರ್ 30, 2028ರವರೆಗೆ ಎರಡು ವರ್ಷಗಳ ಹೊಸ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಮಹತ್ವದ ಒಪ್ಪಂದದ ಮೂಲಕ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಟೆಸ್ಟ್ ರನ್‌ಗಳ ವಿಶ್ವ ದಾಖಲೆಯನ್ನು ಮುರಿಯಲು ರಹದಾರಿ ನಿರ್ಮಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರ ನೂತನ ವಾರ್ಷಿಕ ಕೇಂದ್ರ ಒಪ್ಪಂದದ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಅನುಭವಿ ದಾಂಡಿಗ ಜೋ ರೂಟ್ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಎರಡು ವರ್ಷಗಳ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ ರೂಟ್ ಸೆಪ್ಟೆಂಬರ್ 30, 2028 ರವರೆಗೆ ಇಂಗ್ಲೆಂಡ್ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ಮುಂದುವರಿಯಲಿದ್ದಾರೆ.
ಈ ಸುದೀರ್ಘಾವಧಿಯ ಒಪ್ಪಂದದ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಒಂದು ರೋಚಕ ಚರ್ಚೆ ಮುಂಚೂಣಿಗೆ ಬಂದಿದೆ. ಅದೇನೆಂದರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಟೆಸ್ಟ್ ರನ್‌ಗಳ ವಿಶ್ವ ದಾಖಲೆಯನ್ನು ಜೋ ರೂಟ್ ಮುರಿಯಲಿದ್ದಾರೆಯೇ? ಎಂಬುದು.
ವಿಶ್ವ ದಾಖಲೆಗೆ ಬೇಕಿದೆ ಕೇವಲ 1,644 ರನ್!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ 200 ಪಂದ್ಯಗಳಿಂದ 15,921 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿರುವ ಜೋ ರೂಟ್ ಸಚಿನ್ ದಾಖಲೆಯನ್ನು ಮೀರಿ ನಿಲ್ಲಲು ಇನ್ನು ಕೇವಲ 1,644 ರನ್‌ಗಳ ದೂರದಲ್ಲಿದ್ದಾರೆ.
ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು (69) ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ (68) ಅವರ ದಾಖಲೆಯನ್ನು ಜೋ ರೂಟ್ ಮುರಿದಿದ್ದರು. ಇದೀಗ ಇಸಿಬಿ ನೀಡಿರುವ 2 ವರ್ಷಗಳ ಸುದೀರ್ಘಾವಧಿ ಒಪ್ಪಂದವು, ಅವರು ಯಾವುದೇ ಆತಂಕವಿಲ್ಲದೆ ಆಟದ ಕಡೆ ಗಮನಹರಿಸಿ ಸಚಿನ್ ಅವರ ಸಾರ್ವಕಾಲಿಕ ಟೆಸ್ಟ್ ರನ್‌ಗಳ ಮಹಾನ್ ದಾಖಲೆಯನ್ನೂ ಸಹ ಧೂಳೀಪಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
39 ಆಟಗಾರರ ಒಪ್ಪಂದ:
ಇಸಿಬಿ ಈ ಬಾರಿ ಒಟ್ಟು 30 ಆಟಗಾರರಿಗೆ ಪೂರ್ಣ ಪ್ರಮಾಣದ ಕೇಂದ್ರ ಒಪ್ಪಂದ ಮತ್ತು 9 ಆಟಗಾರರಿಗೆ ಅಭಿವೃದ್ಧಿ ಒಪ್ಪಂದಗಳನ್ನು ಒಳಗೊಂಡಂತೆ ದಾಖಲೆಯ 39 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜೋ ರೂಟ್ ಅವರೊಂದಿಗೆ ವೈಟ್-ಬಾಲ್ ನಾಯಕ ಹ್ಯಾರಿ ಬ್ರೂಕ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಮತ್ತು ಜೇಕಬ್ ಬೆಥೆಲ್ ಸೇರಿದಂತೆ ಒಟ್ಟು 11 ಆಟಗಾರರು 2028ರ ವರೆಗಿನ ದೀರ್ಘಾವಧಿ ಒಪ್ಪಂದಕ್ಕೆ ಪಾತ್ರರಾಗಿದ್ದಾರೆ.
ದೊಡ್ಡ ಹೆಸರುಗಳು ಔಟ್:
ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಾಜಿ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಮಾರ್ಕ್ ವುಡ್ ಅವರು ಈ ಒಪ್ಪಂದದ ಪಟ್ಟಿಯಿಂದ ಹೊರಗುಳಿದಿದ್ದಾರೆ. ಆರಂಭಿಕ ಆಟಗಾರ ಝಾಕ್ ಕ್ರಾಲಿ ಅವರ ಒಪ್ಪಂದವನ್ನು ನವೀಕರಿಸಲಾಗಿಲ್ಲ.
ಇದನ್ನೂ ಓದಿ: ಭರ್ಜರಿ ಸೆಂಚುರಿ ಸಿಡಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ ಜಡೇಜಾ
ಮಾಜಿ ನಾಯಕ ಮೈಕಲ್ ವಾನ್ ಸೇರಿದಂತೆ ಹಲವು ಕ್ರಿಕೆಟ್ ಪಂಡಿತರು, ಜೋ ರೂಟ್ ಅವರು ದೈಹಿಕವಾಗಿ ಫಿಟ್ ಆಗಿ ಮುಂದುವರಿದರೆ ಮುಂದಿನ ಎರಡು ಅಥವಾ ಎರಡುವರೆ ವರ್ಷಗಳ ಅವಧಿಯಲ್ಲಿ ಸಚಿನ್ ಅವರ ಟೆಸ್ಟ್ ರನ್ ದಾಖಲೆಯನ್ನು ಧೂಳೀಪಟ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಇದೀಗ ಈ ಐತಿಹಾಸಿಕ ರನ್ ಬೆನ್ನಟ್ಟುವಿಕೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.




