AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ವಿಷಯದಲ್ಲಿ ತಾಳ್ಮೆ ಇರಲಿ, 22 ವರ್ಷದವರೆಗೆ ಕಾಯಿರಿ: ಕಪಿಲ್ ದೇವ್

Vaibhav Sooryavanshi: ಜೂನ್ 26 ರಿಂದ ಶುರುವಾಗಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಈ ಸರಣಿಗೂ ಮುನ್ನ ಯುವ ದಾಂಡಿಗನಿಗೆ ಕಪಿಲ್ ದೇವ್ ಕೆಲ ಕಿವಿಮಾತುಗಳನ್ನು ಹೇಳಿದ್ದಾರೆ. ಅದರ ಸಂಪೂರ್ಣ ವಿವರ ಈ ಕೆಳಗಿನಂತಿದೆ...

ವೈಭವ್ ವಿಷಯದಲ್ಲಿ ತಾಳ್ಮೆ ಇರಲಿ, 22 ವರ್ಷದವರೆಗೆ ಕಾಯಿರಿ: ಕಪಿಲ್ ದೇವ್
Vaibhav Sooryavanshi
ಝಾಹಿರ್ ಯೂಸುಫ್
|

Updated on: Jun 25, 2026 | 8:28 AM

Share

ಕ್ರಿಕೆಟ್​ ಲೋಕದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಪಾದಾರ್ಪಣೆಯೊಂದಿಗೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ವೈಭವ್ ಸೂರ್ಯವಂಶಿ ಪಾಲಾಗಲಿದೆ. ಇಂತಹದೊಂದು ವಿಶೇಷ ದಾಖಲೆ ಬರೆಯಲಿರುವ ವೈಭವ್ ಸೂರ್ಯವಂಶಿ ಮೇಲೆ ಅತಿಯಾದ ನಿರೀಕ್ಷೆಗಳನ್ನು ಹೇರಬೇಡಿ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮನವಿ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಉದಯೋನ್ಮುಖ ಬ್ಯಾಟಿಂಗ್ ಪ್ರತಿಭೆಯ ಅಸಾಧಾರಣ ಆಟವನ್ನು ಶ್ಲಾಘಿಸಿರುವ ಕಪಿಲ್ ದೇವ್, ವೈಭವ್ ಸೂರ್ಯವಂಶಿ ಮೇಲೆ ಈಗಲೇ ಅತಿಯಾದ ನಿರೀಕ್ಷೆಗಳ ಭಾರವನ್ನು ಹೇರಬೇಡಿ. ಯಾವುದೇ ಹೋಲಿಕೆಗಳನ್ನು ಕೂಡ ಮಾಡಬೇಡಿ. ಒಂದು ವೇಳೆ ಹುಡಗ ವಿಫಲನಾದರೆ ಒತ್ತಡಕ್ಕೆ ಒಳಗಾಗುತ್ತಾನೆ. ಹೀಗಾಗಿ ಯಾರೂ ಸಹ ಅತಿಯಾದ ನಿರೀಕ್ಷೆಗಳನ್ನು ಹೇರಬೇಡಿ ಎಂದು ಕಪಿಲ್ ದೇವ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

20 ರಿಂದ 22 ವರ್ಷದವರೆಗೆ ಕಾಯಿರಿ:

ವೈಭವ್ ಸೂರ್ಯವಂಶಿ ಅವರಲ್ಲಿ ಅದ್ಭುತವಾದ ಪ್ರತಿಭೆ ಇದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕ್ರಿಕೆಟ್‌ನಲ್ಲಿ ದೀರ್ಘಕಾಲ ಉಳಿಯುವುದು ಕೇವಲ ಆರಂಭಿಕ ಫಾರ್ಮ್ ಮೇಲೆ ನಿರ್ಧಾರವಾಗುವುದಿಲ್ಲ. ವೈಭವ್ ಅವರಿಗೆ ಈಗ ಕೇವಲ 15 ವರ್ಷ. ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ಅವರು 20 ರಿಂದ 22 ವರ್ಷ ತಲುಪಿದ ಬಳಿಕ ಅವರ ಆಟದ ಬಗ್ಗೆ ನಾವು ಒಂದು ನಿರ್ಧಾರಕ್ಕೆ ಬರಬಹುದು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು 16ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಮೂಡಿಸಿದ್ದ ನಿರೀಕ್ಷೆಗಳನ್ನೇ ವೈಭವ್ ಸೂರ್ಯವಂಶಿ ಕೂಡ ಮೂಡಿಸುತ್ತಿದ್ದಾರೆ. ಆದರೆ ಸಚಿನ್ ಅವರಂತೆ ಸುದೀರ್ಘ ಕಾಲ ದೇಶಕ್ಕಾಗಿ ಆಡಲು ವೈಭವ್‌ಗೆ ಸೂಕ್ತ ಸಮಯ ಮತ್ತು ಮುಕ್ತ ವಾತಾವರಣದ ಅಗತ್ಯವಿದೆ ಎಂದು ಇದೇ ವೇಳೆ ಕಪಿಲ್ ದೇವ್ ಹೇಳಿದ್ದಾರೆ.

ಕ್ಲಬ್ ಕ್ರಿಕೆಟ್ ಅಥವಾ ವಯೋಮಿತಿಯ ಕ್ರಿಕೆಟ್‌ಗೆ ಹೋಲಿಸಿದರೆ ಹಿರಿಯರ ರಾಷ್ಟ್ರೀಯ ತಂಡದಲ್ಲಿ ಆಡುವುದು ಸಂಪೂರ್ಣ ಭಿನ್ನವಾಗಿರುತ್ತದೆ. ಆದ್ದರಿಂದ ಅವರು ಮೈದಾನಕ್ಕಿಳಿದ ತಕ್ಷಣವೇ ಅದ್ಭುತಗಳನ್ನು ಮಾಡುತ್ತಾರೆ ಎಂದು ನಿರೀಕ್ಷಿಸಬಾರದು. ಈಗ ಅತಿಯಾಗಿ ಹೊಗಳುವವರೇ ಆಟಗಾರ ಫಾರ್ಮ್ ಕಳೆದುಕೊಂಡಾಗ ತಕ್ಷಣವೇ ಟೀಕಿಸಲು ಶುರು ಮಾಡುತ್ತಾರೆ. ಇಂತಹ ಹೈಪ್‌ಗಳಿಂದ ವೈಭವ್ ಸೂರ್ಯವಂಶಿಯನ್ನು ದೂರ ಇಡುವುದು ಉತ್ತಮ.

ಕಪಿಲ್ ದೇವ್ ಕಿವಿಮಾತು:

ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಕೇವಲ ಪ್ರತಿಭೆಯಷ್ಟೇ ಸಾಲದು. ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವಾಗ ನಡೆದುಕೊಳ್ಳುವ ರೀತಿ, ಶಿಸ್ತು ಮತ್ತು ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ ಎಂದು ಕಪಿಲ್ ದೇವ್, ವೈಭವ್ ಸೂರ್ಯವಂಶಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ಆಟಗಾರರಲ್ಲಿ ಕ್ಷಮೆಯಾಚಿಸಿದ ಬೆನ್ ಸ್ಟೋಕ್ಸ್..!

ಒಟ್ಟಾರೆಯಾಗಿ, ಇಂತಹ ಅಪರೂಪದ ಪ್ರತಿಭೆಯನ್ನು ಅತಿಯಾದ ಪ್ರಚಾರ ಮತ್ತು ಒತ್ತಡದಿಂದ ರಕ್ಷಿಸಿ, ಅವರು ಸ್ವಾಭಾವಿಕವಾಗಿ ಬೆಳೆಯಲು ಬಿಡುವುದೇ ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು ಎಂಬುದು ಕಪಿಲ್ ದೇವ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

Follow Us