AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಮಹಿಳಾ ಕ್ರಿಕೆಟರ್ಸ್​ಗೆ ಪಿಂಚಣಿ ಘೋಷಿಸಿದ ಕೆಎಸ್​ಸಿಎ

KSCA Pension for Karnataka Women Cricketers: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘವು (ಕೆಎಸ್‌ಸಿಎ) ರಾಜ್ಯವನ್ನು ಪ್ರತಿನಿಧಿಸಿದ ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಾಸಿಕ ಪಿಂಚಣಿ ಘೋಷಿಸಿದೆ. 55 ವರ್ಷ ಮೇಲ್ಪಟ್ಟ, ಬಿಸಿಸಿಐ ಪಿಂಚಣಿ ಪಡೆಯದ ಮಹಿಳಾ ಆಟಗಾರ್ತಿಯರು ಇದಕ್ಕೆ ಅರ್ಹರು. ಆಟಗಾರ್ತಿಯರ ಕೊಡುಗೆಗಳನ್ನು ಗುರುತಿಸುವುದು ಮತ್ತು ಯುವ ಆಟಗಾರ್ತಿಯರಿಗೆ ಸ್ಫೂರ್ತಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದು ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಕರ್ನಾಟಕದ ಮಹಿಳಾ ಕ್ರಿಕೆಟರ್ಸ್​ಗೆ ಪಿಂಚಣಿ ಘೋಷಿಸಿದ ಕೆಎಸ್​ಸಿಎ
Ksca
ಪೃಥ್ವಿಶಂಕರ
|

Updated on:Apr 01, 2026 | 9:36 PM

Share

ಅಸಾಧ್ಯವಾದುದ್ದನ್ನು ಸಾಧ್ಯವಾಗಿಸಿ, ಎಲ್ಲಾ ಆಡೆತಡೆಗಳನ್ನು ನಿವಾರಿಸಿ 2026 ರ ಐಪಿಎಲ್ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ಇದೀಗ ರಾಜ್ಯದ ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಪಿಂಚಣಿ (Karnataka’s Former Women Cricketers Get KSCA Pension) ಸೌಲಭ್ಯವನ್ನು ಘೋಷಿಸಿದೆ. ಸೀನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಾಸಿಕ ಪಿಂಚಣಿ ನೀಡಲು ಕೆಎಸ್‌ಸಿಎ ನಿರ್ಧರಿಸಿದೆ.

ಪಿಂಚಣಿಗೆ ಯಾರು ಅರ್ಹರು?

ಈ ಪಿಂಚಣಿ ಸೌಲಭ್ಯವನ್ನು 55 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಆಟಗಾರ್ತಿಯರು ಪಡೆದುಕೊಳ್ಳಬಹುದಾಗಿದೆ. ಆದರೆ ಕರ್ನಾಟಕದ ಮಹಿಳಾ ಆಟಗಾರ್ತಿಯರು ಈಗಾಗಲೇ ಬಿಸಿಸಿಐನಿಂದ ಪಿಂಚಣಿ ಪಡೆಯುತಿದ್ದರೆ, ಅವರು ಈ ಪ್ರಯೋಜನಕ್ಕೆ ಅರ್ಹರಾಗಿರುವುದಿಲ್ಲ. ಆದಾಗ್ಯೂ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹ ಆಟಗಾರ್ತಿಯರು ರಾಜ್ಯಕ್ಕಾಗಿ ತಮ್ಮ ಪ್ರಾತಿನಿಧ್ಯ ಮತ್ತು ಆಡಿದ ಪಂದ್ಯಗಳ ಸಂಖ್ಯೆಯನ್ನು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ರಾಜ್ಯದಲ್ಲಿ ಮಾಜಿ ಮಹಿಳಾ ಆಟಗಾರ್ತಿಯರು ನೀಡಿದ ಕೊಡುಗೆಗಳನ್ನು ಗುರುತಿಸುವುದು ಮತ್ತು ಗೌರವಿಸುವುದು ಈ ನಿರ್ಧಾರದ ಹಿಂದಿರುವ ಉದ್ದೇಶ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದ್ದಾರೆ. ಕರ್ನಾಟಕ ಕ್ರಿಕೆಟ್ ಸಂಘದ ಈ ನಿರ್ಧಾರವು ರಾಜ್ಯದ ಯುವ ಮಹಿಳಾ ಆಟಗಾರ್ತಿಯರಿಗೆ ಸ್ಫೂರ್ತಿ ನೀಡುತ್ತದೆ. ರಾಜೇಶ್ವರಿ ಗಾಯಕ್ವಾಡ್ ಮತ್ತು ಶ್ರೇಯಾಂಕ ಪಾಟೀಲ್ ಸೇರಿದಂತೆ ಕರ್ನಾಟಕವು ಟೀಂ ಇಂಡಿಯಾಕ್ಕೆ ಹಲವಾರು ಆಟಗಾರ್ತಿಯರನ್ನು ನೀಡಿದ್ದು, ರಾಜ್ಯದಿಂದ ದೇಶವನ್ನು ಪ್ರತಿನಿಧಿಸುವವರ ಸಂಖ್ಯೆ ಹೆಚ್ಚಾಗಲಿ ಎಂಬುದು ಕೆಎಸ್​ಸಿಎ ಉದ್ದೇಶವಾಗಿದೆ.

ಬಿಸಿಸಿಐನಿಂದಲೂ ಸಿಗಲಿದೆ ಪಿಂಚಣಿ

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ, ಈಗಾಗಲೆ ಮಹಿಳಾ ಆಟಗಾರ್ತಿಯರಿಗೂ ಪಿಂಚಣಿ ನೀಡುತ್ತಿದೆ. ಅದರಂತೆ ತಂಡದ ಪರ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಆಟಗಾರ್ತಿಯರಿಗೆ ಮಾಸಿಕವಾಗಿ 52,500 ರೂ. ಪಿಂಚಣಿ ಸಿಗುತ್ತದೆ. ಹಾಗೆಯೇ 2003 ಕ್ಕಿಂತ ಮೊದಲು ನಿವೃತ್ತರಾದ ಪ್ರಥಮ ದರ್ಜೆ ಕ್ರಿಕೆಟರ್ಸ್​ಗೆ ತಿಂಗಳಿಗೆ 45,000 ರೂ. ಸಿಗಲಿದೆ. 25 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಮತ್ತು 1993 ಕ್ಕಿಂತ ಮೊದಲು ನಿವೃತ್ತರಾದ ಹಿರಿಯ ಟೆಸ್ಟ್ ಆಟಗಾರ್ತಿಯರು ತಿಂಗಳಿಗೆ 70,000 ರೂ. ಪಿಂಚಣಿ ಪಡೆಯುತ್ತಾರೆ.

Published On - 9:31 pm, Wed, 1 April 26

Follow Us