ಪಾಕ್ ಬ್ಯಾಟರ್ಗಳ ಸಿಡಿಲಬ್ಬರಕ್ಕೆ ವಿಶ್ವ ದಾಖಲೆಯೇ ಧೂಳೀಪಟ
New Zealand vs Pakistan: ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೂರನೇ ಮ್ಯಾಚ್ನಲ್ಲಿ ಪಾಕ್ ಪಡೆ ಜಯ ಸಾಧಿಸಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕಿವೀಸ್ ಪಡೆ ಜಯ ಸಾಧಿಸಿದರೆ, ಮೂರನೇ ಮ್ಯಾಚ್ನಲ್ಲಿ ಅಮೋಘ ಗೆಲುವು ದಾಖಲಿಸುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿದೆ.

ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ (Pakistan) ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಸಹ ಅತೀ ಕಡಿಮೆ ಓವರ್ಗಳಲ್ಲಿ 200+ ರನ್ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ವಿಶೇಷ. ಆಕ್ಲೆಂಡ್ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಕೇವಲ 16 ಓವರ್ಗಳಲ್ಲಿ 200+ ರನ್ಗಳ ಚೇಸ್ ಮಾಡಿ ಗೆದ್ದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ಮಾರ್ಕ್ ಚಾಪ್ಮನ್ 44 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 94 ರನ್ ಬಾರಿಸಿದ್ದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡವು 19.5 ಓವರ್ಗಳಲ್ಲಿ 204 ರನ್ಗಳಿಸಿ ಆಲೌಟ್ ಆಯಿತು.
205 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ಪರ ಆರಂಭಿಕ ಆಟಗಾರ ಹಸನ್ ನವಾಝ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಹಸನ್ 7 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 105 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡ ಕೇವಲ 16 ಓವರ್ಗಳಲ್ಲಿ 207 ರನ್ ಬಾರಿಸಿ 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 200+ ರನ್ಗಳ ಟಾರ್ಗೆಟ್ ಅನ್ನು ಅತೀ ಕಡಿಮೆ ಓವರ್ಗಳಲ್ಲಿ ಚೇಸ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು.
2007 ರಲ್ಲಿ ವೆಸ್ಟ್ ಇಂಡೀಸ್ ನೀಡಿದ 206 ರನ್ಗಳ ಟಾರ್ಗೆಟ್ ಅನ್ನು ಸೌತ್ ಆಫ್ರಿಕಾ ತಂಡವು ಕೇವಲ 17.4 ಓವರ್ಗಳಲ್ಲಿ ಚೇಸ್ ಮಾಡಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಪಾಕಿಸ್ತಾನ್ ಬ್ಯಾಟರ್ಗಳು ಯಶಸ್ವಿಯಾಗಿದ್ದಾರೆ. ನ್ಯೂಝಿಲೆಂಡ್ ವಿರುದ್ಧ 16 ಓವರ್ಗಳಲ್ಲಿ 207 ರನ್ ಚಚ್ಚಿ ಜಯ ಸಾಧಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಟೀಮ್ ಇಂಡಿಯಾ 200+ ರನ್ಗಳ ಗುರಿಯನ್ನು ಅತೀ ಕಡಿಮೆ ಓವರ್ಗಳಲ್ಲಿ ಚೇಸ್ ಮಾಡಿದ್ದು 2019 ರಲ್ಲಿ. ಅಂದು ವೆಸ್ಟ್ ಇಂಡೀಸ್ ನೀಡಿದ 209 ರನ್ಗಳ ಗುರಿಯನ್ನು ಭಾರತೀಯ ಬ್ಯಾಟರ್ಗಳು 18.4 ಓವರ್ಗಳಲ್ಲಿ ಬೆನ್ನಟ್ಟಿ ಗೆದ್ದು ಬೀಗಿದ್ದರು.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಇದೀಗ ಸೌತ್ ಆಫ್ರಿಕಾ, ಭಾರತ ಸೇರಿದಂತೆ ಎಲ್ಲಾ ತಂಡಗಳ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕುವಲ್ಲಿ ಪಾಕಿಸ್ತಾನ್ ಬ್ಯಾಟರ್ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಓವರ್ಗಳಲ್ಲಿ 200+ ಸ್ಕೋರ್ ಬೆನ್ನತ್ತಿ ಗೆದ್ದ ವಿಶ್ವ ದಾಖಲೆಯನ್ನು ಪಾಕ್ ಪಡೆ ತನ್ನದಾಗಿಸಿಕೊಂಡಿದೆ.