ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲೇ 3 ವಿಕೆಟ್ ಉರುಳಿಸಿದ ಪ್ರಫುಲ್ ಹಿಂಗೆ ಯಾರು?
IPL 2026, Who is Praful Hinge:ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ, ತಮ್ಮ ಮೊದಲ ಓವರ್‌ನಲ್ಲೇ ಮೂವರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಕ್ರಿಕೆಟ್ ಲೋಕದ ಗಮನ ಸೆಳೆದ ಯುವ ವೇಗಿ, ಐಪಿಎಲ್‌ನಲ್ಲಿ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಇವರ ಅದ್ಭುತ ಪ್ರದರ್ಶನ ಇಡೀ ಭಾರತೀಯ ಕ್ರಿಕೆಟ್‌ನಲ್ಲಿ ಮನೆ ಮಾತಾಗಿದೆ.

ಪ್ರತಿಭಾನ್ವೀತ ಆಟಗಾರರಿಗೆ ಐಪಿಎಲ್ (IPL) ಒಂದು ಸುವರ್ಣ ವೇದಿಕೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಈ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ (SRH) ತಂಡ ರನ್ಗಳ ಶಿಖರ ಕಟ್ಟಿದರೂ ಕಳಪೆ ಬೌಲಿಂಗ್ನಿಂದಾಗಿ ಪಂದ್ಯಗಳನ್ನು ಸೋಲಬೇಕಾಯಿತು. ಹೀಗಾಗಿ ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೆ ಸನ್‌ರೈಸರ್ಸ್ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು. ಆ ಬದಲಾವಣೆಯ ಭಾಗವಾಗಿ ತಂಡವನ್ನು ಕೂಡಿಕೊಂಡಿದ್ದ ಪ್ರಫುಲ್ ಹಿಂಗೆ (Praful Hinge) ಎಂಬ ಯುವ ವೇಗಿ ಯಾರೂ ಊಹಿಸದಂತಹ ಪ್ರದರ್ಶನವನ್ನು ತಮ್ಮ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲೇ ನೀಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ ಎಂಬ 24 ವರ್ಷದ ಯುವ ವೇಗಿ ತನಗೆ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ಬೌಲ್ ಮಾಡಿದ ಇನ್ನಿಂಗ್ಸ್ನ ಮೊದಲ ಓವರ್‌ನಲ್ಲೇ ಮೂವರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ವೇಗಿ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಪಂದ್ಯ ಆರಂಭಕ್ಕೂ ಮುನ್ನ ಪ್ರಫುಲ್ ಹಿಂಗೆ ಎಂದರೆ ಯಾರಿಗೂ ತಿಳಿದಿರಲಿಲ್ಲ. ಆದರೆ ಚೊಚ್ಚಲ ಪಂದ್ಯದಲ್ಲೇ ವಿಸ್ಮಯ ಸೃಷ್ಟಿಸಿದ ಪ್ರಫುಲ್ ಒಂದು ರಾತ್ರಿಯಲ್ಲೇ ಭಾರತ ಕ್ರಿಕೆಟ್ನ ಮನೆಮಾತಾಗಿದ್ದಾರೆ.
ಪ್ರಫುಲ್ ಹಿಂಗೆ ಯಾರು?
ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಡುವ ಪ್ರಫುಲ್ ನಾಗ್ಪುರದವರು. ಅವರ ತಂದೆ ವಿದ್ಯುತ್ ಮಂಡಳಿಯ ಉದ್ಯೋಗಿಯಾಗಿದ್ದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಆರಂಭದಲ್ಲಿ ಪ್ರಫುಲ್ ಅವರ ಕ್ರಿಕೆಟ್ ಆಡುವ ಬಯಕೆಗೆ ಅವರ ತಂದೆಯಿಂದ ಯಾವುದೇ ಸಹಕಾರ ಸಿಕ್ಕಿರಲಿಲ್ಲ. ಆದರೆ ಬೇಸಿಗೆ ಶಿಬಿರದಲ್ಲಿ ಮಗನ ಪ್ರತಿಭೆಯನ್ನು ನೋಡಿದ ನಂತರ, ಅವರು ತಮ್ಮ ಮನಸ್ಸನ್ನು ಬದಲಾಯಿಸಿದರು. ಇದಾದ ಬಳಿಕ ಪ್ರಫುಲ್ ಅವರ ಬದುಕು ಬದಲಿಸುವಲ್ಲಿ ವಿದರ್ಭ ಅಕಾಡೆಮಿ ಮತ್ತು ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖ ಪಾತ್ರವಹಿಸಿದವು.
2014 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪ್ರಫುಲ್ ಅಂದಿನಿಂದ ತಂಡದ ಭಾಗವಾಗಿದ್ದಾರೆ. ಅವರು ಇಲ್ಲಿಯವರೆಗೆ 10 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 6 ಲಿಸ್ಟ್ ಎ ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮೊದಲು, ಅವರು ವೃತ್ತಿಪರ ಮಟ್ಟದಲ್ಲಿ ಯಾವುದೇ ಟಿ20 ಪಂದ್ಯಗಳನ್ನು ಆಡಿರಲಿಲ್ಲ. ಹಾಗೆಯೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಭಾಗವಹಿಸಿರಲಿಲ್ಲ. ಆದಾಗ್ಯೂ, ರಣಜಿ ಟ್ರೋಫಿಯಲ್ಲಿ ಅವರ ಪ್ರದರ್ಶನವನ್ನು ನೋಡಿದ ನಂತರ ವಿದರ್ಭದವರೇ ಆಗಿರುವ ಎಸ್‌ಆರ್‌ಎಚ್ ಬೌಲಿಂಗ್ ಕೋಚ್ ವರುಣ್ ಆರನ್, ಪ್ರಫುಲ್ ಅವರನ್ನು ಟ್ರಯಲ್ಸ್‌ಗೆ ಆಹ್ವಾನಿಸಿದರು. ಟ್ರಯಲ್ಸ್ನಲ್ಲಿ ಪ್ರಫುಲ್ ಅವರ ಪ್ರತಿಭೆಗೆ ಮರುಳಾಗಿದ್ದ ಸನ್‌ರೈಸರ್ಸ್ ಆಡಳಿತ ಮಂಡಳಿ ಹರಾಜಿನಲ್ಲಿ ಅವರನ್ನು 30 ಲಕ್ಷ ರೂ ಮೂಲ ಬೆಲೆಗೆ ಖರೀದಿ ಮಾಡಿತ್ತು.
ಇದು ಅಂತಿಂಥ ದಾಖಲೆಯಲ್ಲ; ವೈಭವ್ ಸೇರಿದಂತೆ ಮೂವರು ಆಟಗಾರರು ಸೊನ್ನೆಗೆ ಔಟ್..!
3 ಓವರ್ಗಳಲ್ಲಿ 4 ವಿಕೆಟ್
ಇನ್ನು ಈ ಪಂದ್ಯದಲ್ಲಿ ಪ್ರಫುಲ್ ಹಿಂಗೆ ದಾಳಿಗೆ ನಲುಗಿದ ನಾಲ್ವರು ಬ್ಯಾಟ್ಸ್ಮನ್ಗಳಲ್ಲಿ ವೈಭವ್ ಸೂರ್ಯವಂಶಿ, ಧೃವ್ ಜುರೇಲ್, ಲ್ಹುವಾನ್-ಡ್ರೆ ಪ್ರಿಟೋರಿಯಸ್ ಹಾಗೂ ರಾಜಸ್ಥಾನ್ ತಂಡದ ನಾಯಕ ರಿಯಾನ್ ಪರಾಗ್ ಸೇರಿದ್ದಾರೆ. ಈ ನಾಲ್ಕು ವಿಕೆಟ್ಗಳಲ್ಲಿ ಮೊದಲ ಮೂರು ವಿಕೆಟ್ಗಳು ಒಂದೇ ಓವರ್ನಲ್ಲಿ ಉರುಳಿದವು. ಅದರಲ್ಲೂ ಈ ಮೂವರು ಆಟಗಾರರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಪ್ರಫುಲ್ ತಮ್ಮ ಖೋಟಾದ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ರಿಯಾನ್ ಪರಾಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಆದರಿಲ್ಲಿ ಪರಾಗ್ 4 ರನ್ ಬಾರಿಸಿ ತನ್ನ ರನ್ ಖಾತೆ ತೆರೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 pm, Mon, 13 April 26




