Rilee Rossouw: ಪಿಎಸ್​ಎಲ್​ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ರಿಲೀ ರೋಸೌವ್

PSL 2023: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ರಿಲೀ ರೋಸೌವ್ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ.

Rilee Rossouw: ಪಿಎಸ್​ಎಲ್​ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ರಿಲೀ ರೋಸೌವ್
Rilee Rossouw
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 11, 2023 | 5:09 PM

PSL 2023: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿ ಸೌತ್ ಆಫ್ರಿಕಾ ಬ್ಯಾಟರ್ ರಿಲೀ ರೋಸೌವ್ (Rilee Rossouw) ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ತಮ್ಮದೇ ದಾಖಲೆಯನ್ನು ಮುರಿಯುವ ಮೂಲಕ ಎಂಬುದೇ ಇಲ್ಲಿ ವಿಶೇಷ. ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಹಾಗೂ ಮುಲ್ತಾನ್ ಸುಲ್ತಾನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಝಲ್ಮಿ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್​ ಆರಂಭಿಸಿದ ಬಾಬರ್ ಆಝಂ ಹಾಗೂ ಸೈಮ್ ಅಯ್ಯುಬ್ ಪೇಶಾವರ್ ಝಲ್ಮಿ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 134 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಮುರಿಯುವಲ್ಲಿ ಕೊನೆಗೂ ಉಸಾಮ ಮಿರ್ ಯಶಸ್ವಿಯಾದರು.

38 ಎಸೆತಗಳಲ್ಲಿ 58 ರನ್​ ಬಾರಿಸಿದ್ದ ಸೈಮ್ ಅಯ್ಯುಬ್ ಮೊದಲಿಗರಾಗಿ ಔಟಾದರೆ, ಇದರ ಬೆನ್ನಲ್ಲೇ 39 ಎಸೆತಗಳಲ್ಲಿ 73 ರನ್​ಗಳಿಸಿದ್ದ ಬಾಬರ್ ಆಝಂ ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಮೊಹಮ್ಮದ್ ಹ್ಯಾರಿಸ್ (35) ಹಾಗೂ ಕ್ಯಾಡ್​ಮೋರ್ (38) ಅವರ ಉಪಯುಕ್ತ ಕಾಣಿಕೆಯೊಂದಿಗೆ ಪೇಶಾವರ್ ಝಲ್ಮಿ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 242 ರನ್​ ಕಲೆಹಾಕಿತು.

ಇದನ್ನೂ ಓದಿ
Image
Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
Image
Rishabh Pant: ಅಪಘಾತದ ಬಳಿಕ ಜೀವನ ಹೇಗಿದೆ? ಮುಕ್ತವಾಗಿ ಮಾತನಾಡಿದ ರಿಷಭ್ ಪಂತ್
Image
IPL 2023: ಐಪಿಎಲ್​ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
Image
IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

243 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಮುಲ್ತಾನ್ ಸುಲ್ತಾನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರರಾದ ಶಾನ್ ಮಸೂದ್ (5) ಹಾಗೂ ಮೊಹಮ್ಮದ್ ರಿಜ್ವಾನ್ (7) ಬೇಗನೆ ನಿರ್ಗಮಿಸಿದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಲೀ ರೋಸೌವ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಎಡಗೈ ದಾಂಡಿಗ ಮೈದಾನದ ಮೂಲೆ ಮೂಲೆಗೆ ಸಿಕ್ಸ್​-ಫೋರ್​ಗಳನ್ನು ಬಾರಿಸಿದರು. ಪರಿಣಾಮ ಕೇವಲ 41 ಎಸೆತಗಳಲ್ಲಿ ರಿಲೀ ರೋಸೌವ್ ಬ್ಯಾಟ್​ನಿಂದ ಸ್ಪೋಟಕ ಶತಕ ಮೂಡಿಬಂತು. ಇದು ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಮೂಡಿಬಂದ ಅತ್ಯಂತ ವೇಗದ ಶತಕವಾಗಿದೆ.

ಇದಕ್ಕೂ ಮುನ್ನ ಪಿಎಸ್​ಎಲ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆ ಕೂಡ ರಿಲೀ ರೋಸೌವ್ ಹೆಸರಿನಲ್ಲಿಯೇ ಇತ್ತು. 2020ರ ಸೀಸನ್​ನಲ್ಲಿ ರೋಸೌವ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 43 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ 41 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ತಮ್ಮದೇ ದಾಖಲೆ ಮುರಿದಿರುವುದು ವಿಶೇಷ.

ಇದನ್ನೂ ಓದಿ: IPL 2023: ಮುಂಬೈ ಇಂಡಿಯನ್ಸ್​ಗೆ ಡಬಲ್ ಶಾಕ್: ತಂಡದಿಂದ ಇಬ್ಬರು ಆಟಗಾರರು ಔಟ್

ಇನ್ನು ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್​ ಹಾಗೂ 12 ಫೋರ್​ನೊಂದಿಗೆ ರಿಲೀ ರೋಸೌವ್ 121 ರನ್​ ಬಾರಿಸಿ ಔಟಾದರು. ಇದರ ನಡುವೆ ಕೀರನ್ ಪೊಲಾರ್ಡ್ 25 ಎಸೆತಗಳಲ್ಲಿ 52 ರನ್ ಬಾರಿಸಿದ್ದರು. ಪರಿಣಾಮ ಮುಲ್ತಾನ್ ಸುಲ್ತಾನ್ಸ್ ತಂಡವು 19.1 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 244 ರನ್​ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು. ವಿಶೇಷ ಎಂದರೆ ಇದು ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಮೂಡಿಬಂದ ಗರಿಷ್ಠ ಮೊತ್ತದ ಚೇಸಿಂಗ್ ಗೆಲುವಾಗಿದೆ.

ಅಂದಹಾಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ರಿಲೀ ರೋಸೌವ್ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ.

ಪೇಶಾವರ್ ಝಲ್ಮಿ: ಸೈಮ್ ಅಯ್ಯುಬ್ , ಬಾಬರ್ ಆಜಮ್ (ನಾಯಕ) , ರೋವ್ಮನ್ ಪೊವೆಲ್ , ಟಾಮ್ ಕೊಹ್ಲರ್-ಕ್ಯಾಡ್​ಮೋರ್ , ಮೊಹಮ್ಮದ್ ಹ್ಯಾರಿಸ್ , ಹಸೀಬುಲ್ಲಾ ಖಾನ್ (ವಿಕೆಟ್ ಕೀಪರ್) , ಉಸ್ಮಾನ್ ಖಾದಿರ್ , ವಹಾಬ್ ರಿಯಾಜ್ , ಅಜ್ಮತುಲ್ಲಾ ಒಮರ್ಜಾಯ್ , ಮುಜೀಬ್ ಉರ್ ರಹಮಾನ್ , ಅರ್ಷದ್ ಇಕ್ಬಾಲ್.

ಮುಲ್ತಾನ್ ಸುಲ್ತಾನ್ಸ್​: ಶಾನ್ ಮಸೂದ್ , ಮೊಹಮ್ಮದ್ ರಿಜ್ವಾನ್ (ನಾಯಕ) , ರಿಲೀ ರೋಸೌವ್ , ಟಿಮ್ ಡೇವಿಡ್ , ಖುಶ್ದಿಲ್ ಶಾ , ಕೀರಾನ್ ಪೊಲಾರ್ಡ್ , ಅನ್ವರ್ ಅಲಿ , ಉಸಾಮಾ ಮಿರ್ , ಅಬ್ಬಾಸ್ ಅಫ್ರಿದಿ , ಶೆಲ್ಡನ್ ಕಾಟ್ರೆಲ್ , ಇಹ್ಸಾನುಲ್ಲಾ.