MS Dhoni: ಧೋನಿಯನ್ನು ಇನ್ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ರಾ ರುತುರಾಜ್?: ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆ
Ruturaj Gaikwad: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಮತ್ತು ಖಾಯಂ ನಾಯಕ ರುತುರಾಜ್ ಗಾಯಕ್ವಾಡ್ ಅವರು ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು (ಏ. 12): ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಪ್ರದರ್ಶನವು ಐಪಿಎಲ್ 2025ನೇ ಋತುವಿನಲ್ಲಿ ಇಲ್ಲಿಯವರೆಗೆ ತೀರಾ ಕಳಪೆಯಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯವನ್ನು ಗೆದ್ದ ನಂತರ, ಸಿಎಸ್‌ಕೆ ಇದುವರೆಗೆ ಮತ್ತೆ ಗೆಲುವಿನ ರುಚಿ ನೋಡಿಲ್ಲ. ಕಳೆದ ಶುಕ್ರವಾರ ಚೆನ್ನೈ ತಂಡ ಕೋಲ್ಕತ್ತಾ ಕೈಟ್ ರೈಡರ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಇದು ಈ ಋತುವಿನಲ್ಲಿ ಚೆನ್ನೈ ತಂಡದ ಸತತ ಐದನೇ ಸೋಲು. ಸಿಎಸ್‌ಕೆ ಎರಡು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಏತನ್ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಮತ್ತು ಖಾಯಂ ನಾಯಕ ರುತುರಾಜ್ ಗಾಯಕ್ವಾಡ್ ಅವರು ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರುತುರಾಜ್ ಗಾಯಕ್ವಾಡ್ ಮಾಹಿಯನ್ನು ಅನ್ ಫಾಲೋ ಮಾಡಿದ್ದಾರಾ?:
ಸಾಮಾಜಿಕ ಮಾಧ್ಯಮದಲ್ಲಿರುವ ಕೆಲವು ಅಭಿಮಾನಿಗಳು ರುತುರಾಜ್ ಗಾಯಕ್ವಾಡ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಎಂಎಸ್ ಧೋನಿಯನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದಾಗ್ಯೂ, ಗಾಯಕ್ವಾಡ್ ಇನ್ಸ್ಟಾಗ್ರಾಮ್ ಧೋನಿಯನ್ನು ಎಂದಿಗೂ ಫಾಲೋ ಮಾಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಗಾಯಕ್ವಾಡ್ ಮಾಹಿಯನ್ನು ಅನ್‌ಫಾಲೋ ಮಾಡುರುವುದಕ್ಕೆ ಕೂಡ ಯಾವುದೇ ಪುರಾವೆಗಳಿಲ್ಲ. ಇತ್ತೀಚೆಗೆ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಇಡೀ ಐಪಿಎಲ್ ಋತುವಿನಿಂದ ಹೊರಗುಳಿದ ಕಾರಣ ಈ ಚರ್ಚೆ ಹುಟ್ಟುಕೊಂಡಿದೆ. ಅವರಿಗೆ ಮೊಣಕೈಗೆ ಗಾಯವಾಗಿತ್ತು. ಗಾಯಕ್ವಾಡ್ ಅವರನ್ನು ತಂಡದಿಂದ ಹೊರಗಿಟ್ಟ ನಂತರ, ಚೆನ್ನೈ ತಂಡವು ಈ ಋತುವಿಗೆ ಎಂಎಸ್ ಧೋನಿ ಅವರನ್ನು ಮತ್ತೆ ನಾಯಕನನ್ನಾಗಿ ನೇಮಿಸಿದೆ.
IPL 2025: ಧೋನಿ ನಾಯಕತ್ವದಲ್ಲಿ ಇನ್ನಷ್ಟು ಹಳ್ಳ ಹಿಡಿದ ಸಿಎಸ್‌ಕೆ ಪ್ರದರ್ಶನ; ಸತತ 5ನೇ ಸೋಲು
ಐಪಿಎಲ್ 2022 ರ ಆರಂಭದ ಮೊದಲು, ಎಂಎಸ್ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಹಸ್ತಾಂತರಿಸಿದ್ದರು. ಆದಾಗ್ಯೂ, ಆ ಋತುವಿನಲ್ಲಿ ತಂಡದ ಕಳಪೆ ಪ್ರದರ್ಶನ ಮುಂದುವರಿದ ಕಾರಣ, ಮಾಹಿ ಅವರನ್ನು ಮತ್ತೆ ತಂಡದ ನಾಯಕರನ್ನಾಗಿ ಮಾಡಲಾಯಿತು. ನಂತರ ಐಪಿಎಲ್ 2024 ಪ್ರಾರಂಭವಾಗುವ ಮೊದಲು, ಧೋನಿ ರುತುರಾಜ್ ಗಾಯಕ್ವಾಡ್‌ಗೆ ನಾಯಕತ್ವವನ್ನು ನೀಡಿದರು. ಈಗ ರುತುರಾಜ್ ಗಾಯದಿಂದ ಹೊರಬಿದ್ದ ಪರಿಣಾಮ ಮತ್ತೆ ಧೋನಿ ಕ್ಯಾಪ್ಟನ್ ಆಗಿದ್ದಾರೆ. ಆದರೆ, ತಂಡದ ಪ್ರದರ್ಶನ ಬದಲಾಗಿಲ್ಲ. ಅದೇ ಸೋಲಿನ ಹಾದಿ ಸಿಎಸ್‌ಕೆ ಮುಂದುವರೆಸಿದೆ.
ಚೆನ್ನೈ ವಿರುದ್ಧ ಕೆಕೆಆರ್‌ಗೆ 8 ವಿಕೆಟ್‌ಗಳ ಗೆಲುವು:
ಏಪ್ರಿಲ್ 11 ರಂದು ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ ಕೇವಲ 103 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಕೋಲ್ಕತ್ತಾ ತಂಡವು ಕೇವಲ 10.1 ಓವರ್‌ಗಳಲ್ಲಿ 104 ರನ್‌ಗಳ ಗುರಿಯನ್ನು ಎಂಟು ವಿಕೆಟ್‌ಗಳು ಬಾಕಿ ಇರುವಾಗಲೇ ಬೆನ್ನಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ