ವೇತನ ಕಡಿತ… ಟೀಮ್ ಇಂಡಿಯಾ ಆಟಗಾರರಿಗೆ ಬಿಸಿ ಮುಟ್ಟಿಸಲು ಮುಂದಾದ ಬಿಸಿಸಿಐ
Team India: ಟೀಮ್ ಇಂಡಿಯಾ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ನಿಗದಿತ ಸಂಭಾವನೆ ನೀಡಲಾಗುತ್ತದೆ. ಆದರೆ ಇದನ್ನು ಪುನರ್ಪರಿಶೀಲಿಸಲು ಇದೀಗ ಬಿಸಿಸಿಐ ಮುಂದಾಗಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಪ್ರದರ್ಶನಕ್ಕೆ ತಕ್ಕಂತೆ ವೇತನ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ಮೂಲಕ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಮುಟ್ಟಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ.
ನ್ಯೂಝಿಲೆಂಡ್ ವಿರುದ್ಧ ಹೀನಾಯ ಸೋಲು, ಆಸ್ಟ್ರೇಲಿಯಾ ವಿರುದ್ಧದ ಶೋಚನೀಯ ಸೋಲುಗಳ ಬಳಿಕ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಚರ್ಚಿಸಲೆಂದೇ ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಬಿಸಿಸಿಐ ಪರಿಶೀಲನಾ ಸಭೆ ನಡೆಸಿದೆ. ಈ ಸಭೆಯಲ್ಲಿ ಆಟಗಾರರ ವೇತನ ಕಡಿತದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಟೀಮ್ ಇಂಡಿಯಾ ಆಟಗಾರರಿಗೆ ಅವರ ಪ್ರದರ್ಶನಕ್ಕೆ ಅನುಗುಣವಾಗಿ ಸಂಭಾವನೆ ನೀಡುವ ಬಗ್ಗೆ ಬಿಸಿಸಿಐ ಅಧಿಕಾರಿಗಳು ಚರ್ಚಿಸಿದ್ದಾರೆ. ಅಂದರೆ ಚೆನ್ನಾಗಿ ಆಡಿದರೆ ಮಾತ್ರ ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಇಲ್ಲದಿದ್ದರೆ ವೇತನ ಕಡಿತವಾಗಲಿದೆ.
ಆಟಗಾರರನ್ನು ಜವಾಬ್ದಾರಿಯುತ ಸ್ಥಾನದಲ್ಲಿರಿಸಲು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಬಿಸಿಸಿಐ ಚರ್ಚೆ ನಡೆಸಿದ್ದು, ಈ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಭಾರತ ತಂಡದ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಚಿಂತಿಸಲಾಗಿದೆ.
ಆಡಿ ದುಡ್ಡು ಮಾಡಿ:
ಪರಿಶೀಲನಾ ಸಭೆಯಲ್ಲಿ ನೀಡಿದ ಸಲಹೆಗಳ ಪ್ರಕಾರ, ಆಟಗಾರನ ಪ್ರದರ್ಶನವು ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೆ, ಆತನ ಗಳಿಕೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಆಟಗಾರರ ಜವಾಬ್ದಾರಿ ಹೆಚ್ಚಾಗಲಿದೆ.
ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ… 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ
ಒಂದು ವೇಳೆ ಸತತ ವಿಫಲರಾದರೆ, ಹಣ ಕಡಿತದ ಜೊತೆಗೆ ತಂಡದಿಂದಲೂ ಹೊರಗಿಡಬಹುದು. ಇದರ ಹೊರತಾಗಿ ಸಂಪೂರ್ಣ ಸಂಭಾವನೆ ನೀಡಿ ವರ್ಷ ಪೂರ್ತಿ ಕಳಪೆ ಪ್ರದರ್ಶನ ನೀಡುವುದರಲ್ಲಿ ಅರ್ಥವಿಲ್ಲ ಎಂಬ ಅಭಿಪ್ರಾಯವನ್ನು ಬಿಸಿಸಿಐ ಅಧಿಕಾರಿಗಳು ಮುಂದಿಟ್ಟಿದ್ದಾರೆ.
ಟೀಮ್ ಇಂಡಿಯಾ ಆಟಗಾರರ ಸಂಭಾವನೆ:
- ಟೆಸ್ಟ್ ಸಂಭಾವನೆ: ಪಂದ್ಯಕ್ಕೆ 15 ಲಕ್ಷ ರೂ.
- ಪ್ಲೇಯಿಂಗ್ ಇಲೆವೆನ್ನ ಭಾಗವಾಗದಿರುವ ಆಟಗಾರರಿಗೆ 7.5 ಲಕ್ಷ ರೂ.
- ಏಕದಿನ ಸಂಭಾವನೆ: ಪಂದ್ಯಕ್ಕೆ 6 ಲಕ್ಷ ರೂ.
- ಪ್ಲೇಯಿಂಗ್ ಇಲೆವೆನ್ನ ಭಾಗವಾಗದಿರುವ ಆಟಗಾರರಿಗೆ 3 ಲಕ್ಷ ರೂ.
- ಟಿ20 ಸಂಭಾವನೆ: ಪಂದ್ಯಕ್ಕೆ 3 ಲಕ್ಷ ರೂ.
- ಪ್ಲೇಯಿಂಗ್ ಇಲೆವೆನ್ನ ಭಾಗವಾಗದಿರುವ ಆಟಗಾರರಿಗೆ 1.5 ಲಕ್ಷ ರೂ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಒಂದು ವರ್ಷದಲ್ಲಿ 50% ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 30 ಲಕ್ಷ ರೂಪಾಯಿಗಳ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಅಂದರೆ ಕಳೆದ ವರ್ಷ ನಡೆದ 16 ಟೆಸ್ಟ್ ಪಂದ್ಯಗಳಲ್ಲಿ ಎಂಟಕ್ಕಿಂತ ಹೆಚ್ಚು ಟೆಸ್ಟ್ ಮ್ಯಾಚ್ ಆಡಿರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 45 ಲಕ್ಷ ರೂ. ನೀಡಲಿದ್ದಾರೆ.
ಇಷ್ಟೆಲ್ಲಾ ಪ್ರೋತ್ಸಾಹ ಮೊತ್ತವನ್ನು ನೀಡಿದರೂ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಆಟಗಾರರ ಅಸಡ್ಡೆಗೆ ಬ್ರೇಕ್ ಹಾಕಲು ಚರ್ಚೆ ನಡೆದಿದೆ.
ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ… 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ
ಒಂದು ವೇಳೆ ಬಿಸಿಸಿಐ ಪ್ರದರ್ಶನಕ್ಕೆ ತಕ್ಕಂತೆ ಸಂಭಾವನೆ ನಿಯಮ ಜಾರಿಗೆ ತಂದರೆ, ಪ್ಲೇಯಿಂಗ್ ಇಲೆವೆನ್ನ ಭಾಗವಾಗಲಿರುವ ಆಟಗಾರರ ಸಂಭಾವನೆಯಲ್ಲಿ ಏರಿಳಿತವಾಗುವುದು ಖಚಿತ. ಈ ಮೂಲಕ ಕಳಪೆ ಪ್ರದರ್ಶನ ನೀಡುವ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬಿಸಿ ಮುಟ್ಟಿಸಲಿದೆಯಾ ಕಾದು ನೋಡಬೇಕಿದೆ.