VIDEO: ಅಭಿಮಾನಿಯನ್ನು ಎಳೆದುಕೊಂಡು ಹೋದರೂ ಕರುಣೆ ತೋರದ ವಿರಾಟ್ ಕೊಹ್ಲಿ
IPL 2025 RCB vs RR: ಐಪಿಎಲ್ 2025ರ 28ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 173 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17.3 ಓವರ್ಗಳಲ್ಲಿ 175 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು (Virat Kohli) ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕ್ಕುವುದು ಗೊತ್ತೇ ಇದೆ. ಅದರಲ್ಲೂ ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ಕೊಹ್ಲಿಯನ್ನು ಭೇಟಿಯಾಗಲು ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ್ದರು. ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದ ವೇಳೆ ಮೈದಾನಕ್ಕೆ ಆಗಮಿಸಿದ ಅಭಿಮಾನಿಯು ಕೊಹ್ಲಿಯ ಕಾಲಿಗೆ ನಮಸ್ಕರಿಸಿದ್ದರು. ಇದೀಗ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲೂ ಕೊಹ್ಲಿಯನ್ನು ಭೇಟಿಯಾಗಲು ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿದ್ದಾರೆ. ಆದರೆ ಈ ಬಾರಿ ಕೊಹ್ಲಿ ತನ್ನ ಅಭಿಮಾನಿಯನ್ನು ನಿರ್ಲಕ್ಷಿಸಿರುವುದೇ ಆಶ್ಚರ್ಯ.
ಸಾಮಾನ್ಯವಾಗಿ ವಿರಾಟ್ ಕೊಹ್ಲಿ ತನ್ನ ಅಭಿಮಾನಿಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಡುತ್ತಾರೆ. ಆದರೆ ಈ ಬಾರಿ ಅಭಿಮಾನಿಯು ತನ್ನ ಭೇಟಿಯಾಗಲು ಬರುತ್ತಿದ್ದಾರೆ ಎಂಬುದನ್ನು ತಿಳಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ರಾಹುಲ್ ದ್ರಾವಿಡ್ ಅವರೊಂದಿಗೆ ವಿರಾಟ್ ಕೊಹ್ಲಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಮೈದಾನಕ್ಕೆ ನುಗ್ಗಿದ ಅಭಿಮಾನಿಯು ನೇರವಾಗಿ ಕೊಹ್ಲಿಯತ್ತ ಓಡಿ ಬರಲು ಯತ್ನಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಅಡಗಿಕೊಳ್ಳುತ್ತಾ ಆತನಿಂದ ತಪ್ಪಿಸಿಕೊಂಡಿದ್ದಾರೆ.
ಅಷ್ಟರಲ್ಲಾಗಲೇ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿಗಳು ಯುವಕನ್ನು ವಶಕ್ಕೆ ಪಡೆದು ಎಳೆದುಕೊಂಡು ಹೋದರು. ಇದಾಗ್ಯೂ ಅಭಿಮಾನಿಯತ್ತ ವಿರಾಟ್ ಕೊಹ್ಲಿ ತಿರುಗಿ ಕೂಡ ನೋಡಿಲ್ಲ ಎಂಬುದೇ ಅಚ್ಚರಿ. ಇದೀಗ ಕಿಂಗ್ ಕೊಹ್ಲಿಯ ಅಭಿಮಾನಿಯ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಅಭಿಮಾನಿ ಮೇಲೆ ಸ್ವಲ್ಪ ಕರುಣೆ ತೋರಬಹುದಿತ್ತು ಎಂದು ಅಭಿಪ್ರಾಯಗಳು ಕೇಳಿ ಬಂದಿವೆ.
ವಿರಾಟ್ ಕೊಹ್ಲಿ ಫ್ಯಾನ್ ವಿಡಿಯೋ:
ರಾಯಲ್ಸ್ ವಿರುದ್ಧ ಆರ್ಸಿಬಿ ರಾಯಲ್:
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಫಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
174 ರನ್ಗಳ ಗುರಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫಿಲ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. 33 ಎಸೆತಗಳನ್ನು ಎದುರಿಸಿದ ಸಾಲ್ಟ್ 6 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 65 ರನ್ ಬಾರಿಸಿದರು.
ಇದನ್ನೂ ಓದಿ: ಭಾರತೀಯರು ನಿಮ್ಮನ್ನು… ಪಾಕ್ ಪತ್ರಕರ್ತನ ಪ್ರಶ್ನೆಗೆ ಡೇವಿಡ್ ವಾರ್ನರ್ ಖಡಕ್ ಉತ್ತರ
ಆ ಬಳಿಕ ಇನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸಿದರೆ, ದೇವದತ್ ಪಡಿಕ್ಕಲ್ ಅಜೇಯ 40 ರನ್ಗಳಿಸಿದರು. ಈ ಮೂಲಕ ಆರ್ಸಿಬಿ ತಂಡವು 17.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.