ಔಟ್ ಆಗದಿದ್ದರೂ ಅಂದು ವಿನೋದ್ ಕಾಂಬ್ಳಿ ಅತ್ತಿದ್ದೇಕೆ?
Vinod Kambli Birthday: ಜನವರಿ 18, ಟೀಮ್ ಇಂಡಿಯಾ ಆಟಗಾರ ವಿನೋದ್ ಕಾಂಬ್ಳಿ ಅವರ ಜನ್ಮದಿನ. 1972 ರಲ್ಲಿ ಜನಿಸಿದ ಅವರು 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತದ ಪರ 121 ಪಂದ್ಯಗಳನ್ನಾಡಿರುವ ಕಾಂಬ್ಳಿ ಟೆಸ್ಟ್ನಲ್ಲಿ 2 ದ್ವಿಶತಕ ಹಾಗೂ 4 ಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದರೆ, ಏಕದಿನದಲ್ಲಿ 2 ಶತಕ ಹಾಗೂ 14 ಅರ್ಧಶತಕಗಳೊಂದಿಗೆ 2477 ರನ್ ಬಾರಿಸಿದ್ದಾರೆ. ಇದರಲ್ಲಿ ಅವರು ಎಂದೆಂದಿಗೂ ಮರೆಯದ ಅಜೇಯ 10 ರನ್ಗಳು ಕೂಡ ಸೇರಿವೆ. ಆ ಹತ್ತು ರನ್ಗಳ ಕಹಾನಿ ಇಲ್ಲಿದೆ.
ಅದು 1996, ಏಕದಿನ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಕೊಲ್ಕತ್ತಾ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಶ್ರೀಲಂಕಾ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಮೊಹಮ್ಮದ್ ಅಝರುದ್ದೀನ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರೀಕ್ಷೆ ಹುಸಿಯಾಗಲಿಲ್ಲ. ಪಂದ್ಯ ಶುರುವಾಗಿ 5 ಓವರ್ ಆಗುವಷ್ಟರಲ್ಲಿ ಶ್ರೀಲಂಕಾದ ಟಾಪ್-3 ಬ್ಯಾಟರ್ಗಳನ್ನು ಟೀಮ್ ಇಂಡಿಯಾ ವೇಗಿ ಜಾವಗಲ್ ಶ್ರೀನಾಥ್ ಕಳುಹಿಸಿದ್ದರು. ಅದರಲ್ಲೂ ಡೇಂಜರಸ್ ಸನತ್ ಜಯಸೂರ್ಯ ಅವರನ್ನು ಮೈಸೂರು ಎಕ್ಸ್ಪ್ರೆಸ್ ಕೇವಲ 1 ರನ್ಗೆ ಔಟ್ ಮಾಡಿದ್ದರು.
ಶ್ರೀಲಂಕಾ ತಂಡದ ಸ್ಕೋರ್ 35 ರನ್ ಆಗುವಷ್ಟರಲ್ಲಿ 3 ವಿಕೆಟ್ ಪತನವಾಗಿತ್ತು. ಅತ್ತ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪ್ರೇಕ್ಷಕರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಅರವಿಂದ ಡಿಸಿಲ್ವಾ ಹಾಗೂ ರೋಶನ್ ಮಹಾನಾಮ ಶ್ರೀಲಂಕಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಟೀಮ್ ಇಂಡಿಯಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಡಿಸಿಲ್ವಾ 47 ಎಸೆತಗಳಲ್ಲಿ 14 ಫೋರ್ಗಳೊಂದಿಗೆ 66 ರನ್ ಬಾರಿಸಿದರು. ಮಹಾನಾಮ 58 ರನ್ಗಳಿಸಿ ರಿಟೈರ್ಟ್ ಹರ್ಟ್ಗೆ ಹೊರ ನಡೆದರು. ಆ ಬಳಿಕ ಬಂದ ನಾಯಕ ಅರ್ಜುನ್ ರಣತುಂಬ 35 ರನ್ಗಳ ಕೊಡುಗೆ ನೀಡಿದರೆ, ಹಶನ್ ತಿಲಕರತ್ನೆ 32 ರನ್ ಬಾರಿಸಿದರು. ಈ ಉಪಯುಕ್ತ ಕಾಣಿಕೆಗಳೊಂದಿಗೆ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು.
ಟೀಮ್ ಇಂಡಿಯಾಗೆ 252 ರನ್ಗಳ ಗುರಿ:
252 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಸಚಿನ್ ತೆಂಡೂಲ್ಕರ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ನವಜೋತ್ ಸಿಂಗ್ ಸಿಧು ಕೇವಲ 3 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ಸಂಜಯ್ ಮಂಜ್ರೇಕರ್ ಸಚಿನ್ಗೆ ಸಾಥ್ ನೀಡಿದರು.
ಪರಿಣಾಮ 2ನೇ ವಿಕೆಟ್ಗೆ 90 ರನ್ಗಳ ಜೊತೆಯಾಟ ಮೂಡಿಬಂತು. ಇದರ ನಡುವೆ ಸಚಿನ್ ತೆಂಡೂಲ್ಕರ್ 88 ಎಸೆತಗಳಲ್ಲಿ 9 ಫೋರ್ಗಳೊಂದಿಗೆ 65 ರನ್ ಬಾರಿಸಿದ್ದರು. ಆದರೆ ತಂಡದ ಸ್ಕೋರ್ 98 ರನ್ ಆಗಿದ್ದ ವೇಳೆ ಸಚಿನ್ (65) ಸನತ್ ಜಯಸೂರ್ಯ ಎಸೆತದಲ್ಲಿ ಸ್ಟಂಪ್ ಔಟ್ ಆದರು.
ಮಾಸ್ಟರ್ ಬ್ಲಾಸ್ಟರ್ ಔಟ್ ಆಗುತ್ತಿದ್ದಂತೆ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನೀರವ ಮೌನ. ಪಂದ್ಯ ಕೈ ತಪ್ಪುವ ಭೀತಿ ಅಲ್ಲಿಂದಲೇ ಶುರುವಾಗಿತ್ತು. ಇದಾಗ್ಯೂ ದಾಂಡಿಗರ ದಂಡೇ ಹೊಂದಿದ್ದ ಟೀಮ್ ಇಂಡಿಯಾ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸವನ್ನು ಪ್ರೇಕ್ಷಕರು ಗಟ್ಟಿ ಮಾಡಿಕೊಂಡರು.
ಆದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ಅಝರುದ್ದೀನ್ (0) ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ಸಂಜಯ್ ಮಂಜ್ರೇಕರ್ (25) ಕ್ಲೀನ್ ಬೌಲ್ಡ್ ಆದರು. ಇನ್ನು ಮುಂಬಡ್ತಿ ಪಡೆದು ಕಣಕ್ಕಿಳಿದ ಜಾವಗಲ್ ಶ್ರೀನಾಥ್ 6 ರನ್ಗಳಿಸಿ ರನೌಟ್ ಆದರೆ, ಅಜಯ್ ಜಡೇಜಾ (0) ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆದರು. ವಿಕೆಟ್ ಕೀಪರ್ ಬ್ಯಾಟರ್ ನಯನ್ ಮೊಂಗಿಯಾ (1) ಬಂದ ವೇಗದಲ್ಲೇ ಹಿಂತಿರುಗಿದರು.
ಇದಾಗ್ಯೂ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿನೋದ್ ಕಾಂಬ್ಳಿ ಒಂದೆಡೆ ಕ್ರೀಸ್ ಕಚ್ಚಿ ನಿಂತಿದ್ದರು. ಆದರೆ 98 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ 30 ರನ್ ಪೇರಿಸುವಷ್ಟರಲ್ಲಿ ಮತ್ತೆ 6 ವಿಕೆಟ್ ಕಳೆದುಕೊಂಡಿತ್ತು. ಇದರಿಂದ ಭಾರತೀಯ ಪ್ರೇಕ್ಷಕರು ರೊಚ್ಚಿದ್ದರು.
ಟೀಮ್ ಇಂಡಿಯಾ ಸೋಲಿನ ಅರಿವಾಗುತ್ತಿದ್ದಂತೆ ಪ್ರೇಕ್ಷಕರು ಮೈದಾನಕ್ಕೆ ಬಾಟಲ್ಗಳನ್ನು ಎಸೆದು ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೆ ಸ್ಟೇಡಿಯಂನಲ್ಲಿ ಬೆಂಕಿ ಹಾಕಿದರು. ಇಡೀ ಕ್ರೀಡಾಂಗಣದಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ರೊಚ್ಚಿಗೆದ್ದಿರುವ ಪ್ರೇಕ್ಷಕರೊಂದಿಗೆ ಪಂದ್ಯವನ್ನು ಮುಂದುವರೆಸುವುದು ಅಸಾಧ್ಯ ಎಂದು ಕಂಡುಕೊಂಡ ಮ್ಯಾಚ್ ರೆಫರಿ, ಪಂದ್ಯವನ್ನು ರದ್ದು ಮಾಡಿ ಶ್ರೀಲಂಕಾ ತಂಡವನ್ನು ವಿಜಯಿ ಎಂದು ಘೋಷಿಸಿತು.
ಆದರೆ ಅತ್ತ ವಿನೋದ್ ಕಾಂಬ್ಳಿ ನಾಟೌಟ್ ಆಗಿ ಉಳಿದಿದ್ದರು. ಇದಾಗ್ಯೂ ಭಾರತೀಯ ಪ್ರೇಕ್ಷಕರು ಕಾಂಬ್ಳಿಯ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ನಂಬಿಕೆಯಿಡಲಿಲ್ಲ. ಟೀಮ್ ಇಂಡಿಯಾ 128 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದರಿಂದ ಅದಾಗಲೇ ಸೋಲು ಕಟ್ಟಿಟ್ಟ ಬುತ್ತಿ ಎಂದು ಷರಾ ಬರೆದಿದ್ದರು.
ಇತ್ತ ಪಂದ್ಯವನ್ನು ರದ್ದು ಮಾಡಿ, ಶ್ರೀಲಂಕಾ ತಂಡವನ್ನು ವಿಜಯಿ ಎಂದು ಘೋಷಿಸುತ್ತಿದ್ದಂತೆ, 10 ರನ್ಗಳಿಸಿ ಅಜೇಯರಾಗಿ ಉಳಿದಿದ್ದ ವಿನೋದ್ ಕಾಂಬ್ಳಿ ಕಣ್ಣೀರಿಡಲಾರಂಭಿಸಿದರು. ಅಲ್ಲದೆ ಕಣ್ಣೀರಿನೊಂದಿಗೆ ಪೆವಿಲಿಯನ್ಗೆ ಭಾರದ ಹೆಜ್ಜೆ ಹಾಕಿದರು.
ಹೀಗೆ ಅಳುತ್ತಾ ಅಂದು ಕಾಂಬ್ಳಿ ಮೈದಾನ ತೊರೆಯಲು ಮುಖ್ಯ ಕಾರಣ, ಅವರ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ಭಾರತೀಯ ಪ್ರೇಕ್ಷಕರು ನಂಬಿಕೆಯಿಡದಿರುವುದು. ಹಾಗೆಯೇ ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರು ಆಗಿದ್ದು. ಅಂದು ಕಣ್ಣೀರಿಡುತ್ತಾ ಭಾರದ ಹೆಜ್ಜೆ ಹಾಕಿದ ವಿನೋದ್ ಕಾಂಬ್ಳಿ ಆ ಬಳಿಕ ತಮ್ಮ ಕೆರಿಯರ್ನಲ್ಲೂ ಅವನತಿಯತ್ತ ಸಾಗಿದ್ದು ಮಾತ್ರ ದುರಂತ.
1996ರ ವಿಶ್ವಕಪ್ ಸೆಮಿಫೈನಲ್ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ಸಚಿನ್ ತೆಂಡೂಲ್ಕರ್ , ನವಜೋತ್ ಸಿಂಗ್ ಸಿಧು , ಸಂಜಯ್ ಮಂಜ್ರೇಕರ್ , ಮೊಹಮ್ಮದ್ ಅಝರುದ್ದೀನ್ (ನಾಯಕ) , ವಿನೋದ್ ಕಾಂಬ್ಳಿ , ಜಾವಗಲ್ ಶ್ರೀನಾಥ್ , ಅಜಯ್ ಜಡೇಜಾ , ನಯನ್ ಮೊಂಗಿಯಾ (ವಿಕೆಟ್ ಕೀಪರ್) , ಆಶಿಶ್ ಕಪೂರ್ , ಅನಿಲ್ ಕುಂಬ್ಳೆ , ವೆಂಕಟೇಶ್ ಪ್ರಸಾದ್.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ಶ್ರೀಲಂಕಾ ಪ್ಲೇಯಿಂಗ್ 11: ಸನತ್ ಜಯಸೂರ್ಯ , ರೋಮೇಶ್ ಕಲುವಿತರಣ (ವಿಕೆಟ್ ಕೀಪರ್) , ಅಸಂಕ ಗುರುಸಿಂಹ , ಅರವಿಂದ ಡಿ ಸಿಲ್ವಾ , ರೋಶನ್ ಮಹನಾಮ , ಅರ್ಜುನ ರಣತುಂಗ (ನಾಯಕ) , ಹಶನ್ ತಿಲಕರತ್ನೆ , ಕುಮಾರ್ ಧರ್ಮಸೇನ , ಚಾಮಿಂಡ ವಾಸ್ , ಪ್ರಮೋದ ವಿಕ್ರಮಸಿಂಗ್ , ಮುತ್ತಯ್ಯ ಮುರಳೀಧರನ್.