Minnu Mani: ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಕೇರಳ ಬುಡಕಟ್ಟು ಸಮುದಾಯದ ಆಟಗಾರ್ತಿಯನ್ನು ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್: ಯಾರಿವರು ಗೊತ್ತೆ?
WPl Auction 2023: 23 ವರ್ಷ ಪ್ರಾಯದ ಆಲ್ರೌಂಡರ್ ಮಿನ್ನು ಮನಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 30 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿತು. ಮೂಲತಃ ಕೇರಳದ ವಯಾನಾಡಿನವರಾದ ಇವರು ಕುರಿಚ್ಯ ಬುಡಕಟ್ಟು ಸಮುದಾಯಕ್ಕೆ ಸೇರಿದವರು.
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ನಲ್ಲಿ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಹರಾಜು ಪ್ರಕ್ರಿಯೆಯಲ್ಲಿ ಹಣ ಮಳೆಯೇ ಸುರಿಯಿತು. ಒಟ್ಟು 409 ಆಟಗಾರ್ತಿಯರ ಪೈಕಿ 87 ಪ್ಲೇಯರ್ಸ್ ಸೋಲ್ಡ್ ಔಟ್ ಆದರು. ಐದು ಫ್ರಾಂಚೈಸಿ 59.50 ಕೋಟಿ ರೂಪಾಯಿಯನ್ನು ಖರ್ಚು ಮಾಡಿತು. ಆಕ್ಷನ್ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದು ಭಾರತ ಮಹಿಳಾ ತಂಡ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana). ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇವರನ್ನು ಬರೋಬ್ಬರಿ 3.4 ಕೋಟಿ ಕೊಟ್ಟು ಖರೀದಿ ಮಾಡಿತು. ಇದರ ನಡುವೆ ಅಚ್ಚರಿ ಎಂಬಂತೆ ಈಗಷ್ಟೆ ಕ್ರಿಕೆಟ್ ಲೋಕಕ್ಕೆ ಕಾಲಿಡುತ್ತಿರುವ ಕೆಲ ಆಟಗಾರ್ತಿಯರನ್ನು ಫ್ರಾಂಚೈಸಿಗಳು ಖರೀದಿಸಿದವು. ಇದರಲ್ಲಿ ಕೇರಳದ ಬುಡಕಟ್ಟು ಸಮುದಾಯದ ಆಟಗಾರ್ತಿ ಮಿನ್ನು ಮನಿ (Minnu Mani) ಕೂಡ ಒಬ್ಬರು.
23 ವರ್ಷ ಪ್ರಾಯದ ಆಲ್ರೌಂಡರ್ ಮಿನ್ನು ಮನಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 30 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿತು. ಮೂಲತಃ ಕೇರಳದ ವಯಾನಾಡಿನವರಾದ ಇವರು ಕುರಿಚ್ಯ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ವಿಶೇಷ ಎಂದರೆ ಮಹಿಳಾ ಪ್ರೀಮಿಯರ್ ಲೀಗ್ 2023 ಹರಾಜಿನಲ್ಲಿ ಸೇಲ್ ಆದ ಏಕೈಕ ಕೇರಳದ ಆಟಗಾರ್ತಿ ಇವರಾಗಿದ್ದಾರೆ.
ದಿನಗೂಲಿ ಕಾರ್ಮಿಕನ ಮಗಳಾಗಿರುವ ಮಿನ್ನು ಅವರು, ಅಂಚಿನಲ್ಲಿರುವ ತಮ್ಮ ಸಮುದಾಯದ ಹುಡುಗಿಯರನ್ನು ಪ್ರೇರೇಪಿಸುವ ಉದ್ದೇಶ ಹೊಂದಿದ್ದಾರಂತೆ. ಮೂಲಗಳ ಪ್ರಕಾರ, ಇವರು ಚಿಕ್ಕಂದಿನಿಂದಲೆ ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿ ಹುಡುಗರ ಜೊತೆಗೂಡಿ ಗ್ರಾಮದಲ್ಲಿ ಕ್ರಿಕೆಟ್ ಆಡುತ್ತಿದ್ದರಂತೆ. ನಂತರ, ಇವರ ಪ್ರತಿಭೆಯನ್ನು ಗುರುತಿಸಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎಲ್ಸಮ್ಮ ಬೇಬಿ ಹೆಚ್ಚಿನ ಪ್ರೋತ್ಸಾಹ ನೀಡಿದರು. ಎಲ್ಸಮ್ಮ ಅವರ ಮಗಳು ಅನುಮೋಲ್ ಬೇಬಿ ಕೇರಳದ ರಾಜ್ಯ ಮಟ್ಟದ ಆಟಗಾರ್ತಿ ಆಗಿದ್ದರು. ಹೀಗಾಗಿ ಅನುಮೋಲ್ ಅವರು ಮಿನ್ನು ಅವರ ಮೊದಲ ತರಬೇತುದಾರರಾದರು.
WPL 2023: RCB ತಂಡಕ್ಕೆ ಕನ್ನಡತಿ ಆಯ್ಕೆ
ಎಲ್ಸಮ್ಮ ಅವರು ಮಿನ್ನುವನ್ನು ತಿರುವನಂತಪುರದಲ್ಲಿ ಅಭ್ಯಾಸಕೆಂದು ಕಳುಹಿಸಿದರು. ಇಲ್ಲಿ ಸಾಕಷ್ಟು ಪ್ರ್ಯಾಕ್ಟೀಸ್ ನಡೆಸಿದ ಬಳಿಕ ಇವರನ್ನು ಕೇರಳ ಕ್ರಿಕೆಟ್ ಅಸೋಸಿಯೇಷನ್ ತನ್ನ ತರಬೇತಿ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿತು. ಮಿನ್ನು ಬಲಗೈ ಆಫ್ ಸ್ಪಿನ್ನರ್ ಮತ್ತು ಎಡಗೈ ಬ್ಯಾಟರ್ ಆಗಿದ್ದಾರೆ. ಅವರು ಭಾರತ ಎ ತಂಡದ ಭಾಗವಾಗಿರುವ ಕೇರಳದ ಮೊದಲ ಮಹಿಳಾ ಕ್ರಿಕೆಟರ್ ಕೂಡ ಹೌದು. ಇಷ್ಟೇ ಅಲ್ಲದೆ ಮಿನ್ನು ಅವರು ಕೇರಳ ಕ್ರಿಕೆಟ್ ಅಸೋಸಿಯೇಷನ್‌ನ ವರ್ಷದ ಜೂನಿಯರ್ ಕ್ರಿಕೆಟಿಗ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಮಿನ್ನು ಮನಿ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗುತ್ತಿದ್ದಂತೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ತನ್ನ ಅಧಿಕೃತ ಸಾಮಾಜಿಕ ತಾಣದಲ್ಲಿ ಶುಭಕೋರಿದೆ. “ನಾವು ಮಿನ್ನು ಮನಿ ಅವರಿಗೆ ಶುಭ ಹಾರೈಸುತ್ತೇವೆ. ಇವರು ಇತರೆ ಹುಡುಗಿಯರಿಗೂ ಉತ್ಸಾಹವನ್ನು ತುಂಬಿ ಆಯಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸ್ಫೂರ್ತಿಯಾಗಲಿ. ಮಹಿಳಾ ಅಕಾಡೆಮಿಗಳು ಮತ್ತು ಮಹಿಳಾ ಕ್ರಿಕೆಟ್ ಬೆಳವಣಿಗೆಗಳ ಮೇಲೆ ಅಸೋಸಿಯೇಷನ್ ವಿಶೇಷ ಗಮನ ಹರಿಸುತ್ತಿದೆ. ಇದು ನಿರಂತರವಾಗಿ ನಡೆಯುತ್ತಿರುತ್ತದೆ,” ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ ಬರೆದುಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Tue, 14 February 23