WPL 2027 ಹರಾಜು: ಯಾವ ತಂಡದ ಬಳಿ ಎಷ್ಟು ಹಣ ಬಾಕಿ ಇದೆ? ಇಲ್ಲಿದೆ ಸಂಪೂರ್ಣ ಲೆಕ್ಕ
ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು ಅಕ್ಟೋಬರ್ 28, 2026ರಂದು ಕೊಚ್ಚಿಯಲ್ಲಿ ನಡೆಯಲಿದೆ. 27 ಖಾಲಿ ಸ್ಥಾನಗಳಿಗೆ 146 ಆಟಗಾರ್ತಿಯರು ನೋಂದಾಯಿಸಿಕೊಂಡಿದ್ದಾರೆ. ಯುಪಿ ವಾರಿಯರ್ಸ್ ಅತಿ ಹೆಚ್ಚು ಹಣ ಉಳಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ ಭಾರತೀಯ ಆಟಗಾರ್ತಿಯರಿಗೆ ಆದ್ಯತೆ ನೀಡಲಿದೆ. ತಂಡಗಳ ಬಜೆಟ್, ಉಳಿದಿರುವ ಆಟಗಾರ್ತಿಯರ ಸ್ಲಾಟ್‌ಗಳು ಮತ್ತು ಪ್ರಮುಖ ಆಟಗಾರ್ತಿಯರ ವಿವರಗಳನ್ನು ಇಲ್ಲಿ ತಿಳಿಯಿರಿ.

ಮಹಿಳಾ ಪ್ರೀಮಿಯರ್ ಲೀಗ್ನ ಮಿನಿ ಹರಾಜು ಇದೇ ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ. ಹೊಸ ಸೀಸನ್‌ಗೆ ತಂಡವನ್ನು ಬಲಪಡಿಸಿಕೊಳ್ಳಲು ಐದು ಫ್ರಾಂಚೈಸಿಗಳು ಸಿದ್ಧವಾಗಿವೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಯಾವ ತಂಡ ಯಾರನ್ನು ಖರೀದಿಸಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸೆಪ್ಟೆಂಬರ್ 28, 2026ರಂದು ಆಟಗಾರ್ತಿಯರ ರಿಟೆನ್ಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಐದು ತಂಡಗಳು ಒಟ್ಟು 63 ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಇವರಲ್ಲಿ 23 ವಿದೇಶಿ ಆಟಗಾರ್ತಿಯರೂ ಸೇರಿದ್ದಾರೆ. ಇದೀಗ ಹರಾಜಿನಲ್ಲಿ ಒಟ್ಟು 27 ಸ್ಲಾಟ್‌ಗಳು ಖಾಲಿ ಉಳಿದಿವೆ. ಈ ಪೈಕಿ 20 ಭಾರತೀಯ ಆಟಗಾರ್ತಿಯರಿಗೆ ಹಾಗೂ 7 ವಿದೇಶಿ ಆಟಗಾರ್ತಿಯರಿಗೆ ಅವಕಾಶವಿದೆ.
ಈ ಬಾರಿಯ ಹರಾಜಿಗೆ ಅತಿ ಹೆಚ್ಚು ಹಣವನ್ನು ಉಳಿಸಿಕೊಂಡಿರುವುದು ಯುಪಿ ವಾರಿಯರ್ಸ್ ತಂಡ. ಇತ್ತ ಗುಜರಾತ್ ಜೈಂಟ್ಸ್ ತಂಡದಲ್ಲಿ ಭರ್ತಿ ಮಾಡಬೇಕಿರುವ ಸ್ಥಾನಗಳು ಕಡಿಮೆ ಇವೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಆರು ಭಾರತೀಯ ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
ಯಾವ ತಂಡದ ಬಳಿ ಎಷ್ಟು ಹಣ ಬಾಕಿ ಇದೆ?
|
ತಂಡ |
ಖರ್ಚು ಮಾಡಿದ ಹಣ |
ಉಳಿದಿರುವ ಹಣ |
ಖಾಲಿ ಸ್ಥಾನಗಳು |
ಭಾರತೀಯ ಆಟಗಾರ್ತಿಯರು |
ವಿದೇಶಿ ಆಟಗಾರ್ತಿಯರು |
|
ಆರ್‌ಸಿಬಿ |
13.85 ಕೋಟಿ |
1.15 ಕೋಟಿ |
5 |
3 |
2 |
|
ಮುಂಬೈ |
14.10 ಕೋಟಿ |
90 ಲಕ್ಷ |
6 |
6 |
0 |
|
ಡೆಲ್ಲಿ |
13.90 ಕೋಟಿ |
1.10 ಕೋಟಿ |
5 |
4 |
1 |
|
ಗುಜರಾತ್ |
13.75 ಕೋಟಿ |
1.25 ಕೋಟಿ |
3 |
2 |
1 |
|
ಯುಪಿ |
11.25 ಕೋಟಿ |
3.75 ಕೋಟಿ |
8 |
5 |
3 |
ಹರಾಜಿಗೆ ನೋಂದಣಿ ಮಾಡಿಕೊಂಡ ಆಟಗಾರ್ತಿಯರೆಷ್ಟು?
ಈ ಬಾರಿಯ ಹರಾಜಿಗೆ ಒಟ್ಟು 146 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 119 ಭಾರತೀಯ ಆಟಗಾರ್ತಿಯರು ಹಾಗೂ 27 ವಿದೇಶಿ ಆಟಗಾರ್ತಿಯರಿದ್ದಾರೆ. ಭಾರತೀಯ ಆಟಗಾರ್ತಿಯರಲ್ಲಿ 22 ಮಂದಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದರೆ, 97 ಮಂದಿ ಅನ್‌ಕ್ಯಾಪ್ಡ್ ಆಟಗಾರ್ತಿಯರಾಗಿದ್ದಾರೆ.
ಇನ್ನು ವಿದೇಶಿ ಆಟಗಾರ್ತಿಯರಲ್ಲಿ 14 ಮಂದಿ ಅಂತಾರಾಷ್ಟ್ರೀಯ ಅನುಭವ ಹೊಂದಿದ್ದು, 13 ಮಂದಿ ಅನ್‌ಕ್ಯಾಪ್ಡ್ ಆಟಗಾರ್ತಿಯರಾಗಿದ್ದಾರೆ. ಜೊತೆಗೆ ಅಸೋಸಿಯೇಟ್ ರಾಷ್ಟ್ರಗಳನ್ನು ಪ್ರತಿನಿಧಿಸುವ ಆರು ವಿದೇಶಿ ಆಟಗಾರ್ತಿಯರೂ ಹರಾಜಿಗೆ ಹೆಸರು ನೀಡಿದ್ದಾರೆ.
ಅತಿ ಹೆಚ್ಚು ಮೂಲ ಬೆಲೆ ಹೊಂದಿರುವ ಆಟಗಾರ್ತಿಯರು ಯಾರು?
ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಮತ್ತು ಆಸ್ಟ್ರೇಲಿಯಾದ ಸೋಫಿ ಮೊಲಿನ್ಯೂಕ್ಸ್ ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೂಲ ಬೆಲೆ ಹೊಂದಿರುವ ಆಟಗಾರ್ತಿಯರಾಗಿದ್ದಾರೆ. ಇವರ ಮೂಲ ಬೆಲೆ ತಲಾ 50 ಲಕ್ಷ ರೂ. ಭಾರತದ ಜಿ. ಕಮಲಿನಿ, ಕಿರಣ್ ನವ್ಗಿರೆ, ಆಸ್ಟ್ರೇಲಿಯಾದ ಹೀದರ್ ಗ್ರಹಾಂ ಮತ್ತು ಜೆಸ್ ಜೊನಾಸೆನ್ ಅವರು 40 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದಾರೆ.
ಇನ್ನು 30 ಆಟಗಾರ್ತಿಯರು 30 ಲಕ್ಷ ರೂ. ಮೂಲ ಬೆಲೆಯ ವಿಭಾಗದಲ್ಲಿದ್ದರೆ, ನಾಲ್ವರು 20 ಲಕ್ಷ ರೂ. ವಿಭಾಗದಲ್ಲಿದ್ದಾರೆ. ಅತಿ ಹೆಚ್ಚು ಅಂದರೆ 106 ಆಟಗಾರ್ತಿಯರು 10 ಲಕ್ಷ ರೂ. ಮೂಲ ಬೆಲೆಯ ವಿಭಾಗದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಯಾವ ತಂಡಕ್ಕೆ ಎಷ್ಟು ಆಟಗಾರ್ತಿಯರ ಅಗತ್ಯವಿದೆ?
ಯುಪಿ ವಾರಿಯರ್ಸ್: ಈ ತಂಡದ ಬಳಿ ಅತಿ ಹೆಚ್ಚು 3.75 ಕೋಟಿ ರೂ. ಹಣ ಉಳಿದಿದೆ. ಒಟ್ಟು ಎಂಟು ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಮೂವರು ವಿದೇಶಿ ಆಟಗಾರ್ತಿಯರನ್ನು ಖರೀದಿಸಬಹುದು.
ಗುಜರಾತ್ ಜೈಂಟ್ಸ್: ಈ ತಂಡದ ಬಳಿ 1.25 ಕೋಟಿ ರೂ. ಉಳಿದಿದೆ. ಒಟ್ಟು ಮೂರು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಬೇಕಿದೆ. ಇದರಲ್ಲಿ ಇಬ್ಬರು ಭಾರತೀಯರು ಹಾಗೂ ಒಬ್ಬ ವಿದೇಶಿ ಆಟಗಾರ್ತಿಗೆ ಅವಕಾಶವಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್‌ಸಿಬಿ ಬಳಿ 1.15 ಕೋಟಿ ರೂ. ಉಳಿದಿದ್ದು, ಐದು ಸ್ಥಾನಗಳನ್ನು ತುಂಬಬೇಕಿದೆ. ಮೂವರು ಭಾರತೀಯರು ಹಾಗೂ ಇಬ್ಬರು ವಿದೇಶಿ ಆಟಗಾರ್ತಿಯರನ್ನು ಖರೀದಿಸಬಹುದು.
ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿ ತಂಡದ ಬಳಿ 1.10 ಕೋಟಿ ರೂ. ಉಳಿದಿದೆ. ಐದು ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ನಾಲ್ವರು ಭಾರತೀಯರು ಹಾಗೂ ಒಬ್ಬ ವಿದೇಶಿ ಆಟಗಾರ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಮುಂಬೈ ಇಂಡಿಯನ್ಸ್: ಮುಂಬೈ ತಂಡದ ಬಳಿ 90 ಲಕ್ಷ ರೂ. ಮಾತ್ರ ಉಳಿದಿದೆ. ಆದರೆ ಆರು ಭಾರತೀಯ ಆಟಗಾರ್ತಿಯರನ್ನು ಖರೀದಿಸಬೇಕಿದೆ. ವಿದೇಶಿ ಆಟಗಾರ್ತಿಯರಿಗೆ ಯಾವುದೇ ಸ್ಥಾನ ಖಾಲಿ ಇಲ್ಲ.
ಹರಾಜು ಯಾವಾಗ, ಎಲ್ಲಿ ನಡೆಯಲಿದೆ?
- ದಿನಾಂಕ: ಅಕ್ಟೋಬರ್ 28, 2026
- ಸ್ಥಳ: ಕೊಚ್ಚಿ
- ಸಮಯ: ಸಂಜೆ 5:30ಕ್ಕೆ (ಭಾರತೀಯ ಕಾಲಮಾನ)
- ಹರಾಜಿಗೆ ನೋಂದಾಯಿಸಿಕೊಂಡ ಆಟಗಾರ್ತಿಯರು: 146
- ತಂಡಗಳಿಗೆ ಲಭ್ಯವಿರುವ ಖಾಲಿ ಸ್ಥಾನಗಳು: 27
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Sun, 25 October 26




