Hockey India league: 3640 ಕೋಟಿ ರೂ: ಹಾಕಿ ಇಂಡಿಯಾ ಲೀಗ್​ ಮತ್ತೆ ಶುರು

Hockey India league: ಹಾಕಿ ಇಂಡಿಯಾ ಲೀಗ್​ಗೆ ಮತ್ತೆ ಚಾಲನೆ ಸಿಗಲಿದೆ. ಭಾರತೀಯ ಹಾಕಿ ಸಂಸ್ಥೆ ಆಯೋಜಿಸುವ ಈ ಲೀಗ್​ನ ಪಂದ್ಯಗಳು ರೂರ್ಕೆಲಾ ಮತ್ತು ರಾಂಚಿಯಲ್ಲಿ ನಡೆಯಲಿವೆ. ಅಲ್ಲದೆ ಈ ಟೂರ್ನಿಯಲ್ಲಿ ಪುರುಷರ 8 ತಂಡಗಳು ಹಾಗೂ ಮಹಿಳೆಯರ 6 ತಂಡಗಳು ಕಣಕ್ಕಿಳಿಯಲಿವೆ.

Hockey India league: 3640 ಕೋಟಿ ರೂ: ಹಾಕಿ ಇಂಡಿಯಾ ಲೀಗ್​ ಮತ್ತೆ ಶುರು
Hockey India
Follow us
|

Updated on: Oct 05, 2024 | 12:52 PM

ಭಾರತದಲ್ಲಿ ಹಾಕಿ ಕ್ರೀಡೆ ಬಗ್ಗೆ ಹೊಸ ಕ್ರೇಝ್ ಶುರುವಾಗಿದೆ. ಇಂತಹದೊಂದು ಸಂಚಲನ ಸೃಷ್ಟಿಸಿದ್ದು ಪುರುಷರ ಹಾಕಿ ತಂಡ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದ ಭಾರತೀಯ ತಂಡ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ನಲ್ಲೂ ಕಂಚಿನ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲದೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನೂ ಗೆಲ್ಲುವ ಮೂಲಕ ಪರಾಕ್ರಮ ಮೆರೆದಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಗೆಲುವುಗಳೊಂದಿಗೆ ಯುವ ಸಮೂಹವನ್ನು ಸೆಳೆದಿರುವ ಹಾಕಿ ಕ್ರೀಡೆಯನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ಯಲು ಭಾರತೀಯ ಹಾಕಿ ಫೆಡರೇಷನ್ ಮುಂದಾಗಿದೆ.

ಇದಕ್ಕಾಗಿ 11 ವರ್ಷಗಳ ಹಿಂದೆ ಶುರುವಾಗಿದ್ದ ಹಾಕಿ ಇಂಡಿಯಾ ಲೀಗ್ ಪುನರಾಂಭಿಸಲು ಯೋಜನೆ ರೂಪಿಸಿದೆ. 2013 ರಿಂದ 2018 ರವರೆಗೆ ದೇಶೀಯ ಅಂಗಳದಲ್ಲಿ ಹಾಕಿ ಇಂಡಿಯಾ ಲೀಗ್​ ಅನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ಯಶಸ್ಸಿನತ್ತ ಸಾಗಿದ್ದ ಈ ಲೀಗ್​ಗೆ ಆ ಬಳಿಕ ಆರ್ಥಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ 6ನೇ ಸೀಸನ್ ಬಳಿಕ ಹಾಕಿ ಲೀಗ್​ ಅನ್ನು ಆಯೋಜಿಸಲಾಗಿರಲಿಲ್ಲ. ಇದೀಗ ಫ್ರಾಂಚೈಸಿ ಆಧಾರಿತ ಲೀಗ್​ಗೆ ಮತ್ತೆ ಚಾಲನೆ ನೀಡಲು ಹಾಕಿ ಇಂಡಿಯಾ ಫೆಡರೇಷನ್ ನಿರ್ಧರಿಸಿದೆ.

10 ವರ್ಷ 3640 ಕೋಟಿ ರೂ:

ಹಾಕಿ ಇಂಡಿಯಾ ಫೆಡರೇಷನ್ 3640 ಕೋಟಿ ರೂ. ಯೋಜನೆಯೊಂದಿಗೆ ಮುಂದಿನ 10 ವರ್ಷಗಳ ಕಾಲ ಹಾಕಿ ಇಂಡಿಯಾ ಲೀಗ್ ಆಯೋಜಿಸಲು ಪ್ಲ್ಯಾನ್ ರೂಪಿಸಿದೆ. ಈ ಮೂಲಕ ಕಳೆದ ಬಾರಿಯಂತೆ ಈ ಸಲ ಟೂರ್ನಿ ಅರ್ಧದಲ್ಲೇ ಅಂತ್ಯವಾಗುವುದಿಲ್ಲ ಎಂದು ಫ್ರಾಂಚೈಸಿಗಳಿಗೆ ಖಾತ್ರಿಪಡಿಸಿದೆ. ಅಲ್ಲದೆ ಹೊಸ ಪ್ರಾಯೋಜಕತ್ವವನ್ನು ಸೆಳೆಯಲು ಮುಂದಾಗಿದೆ.

8+6 ತಂಡಗಳು:

ಈ ಬಾರಿಯ ಹಾಕಿ ಇಂಡಿಯಾ ಲೀಗ್​ನಲ್ಲಿ ಪುರುಷರ 8 ತಂಡಗಳನ್ನು ಕಣಕ್ಕಿಳಿಯಲಿದೆ. ಇದರೊಂದಿಗೆ 6 ಮಹಿಳಾ ತಂಡಗಳು ಸಹ ಎಚ್‌ಐಎಲ್‌ ಟೂರ್ನಿಯಲ್ಲಿ ಭಾಗವಹಿಸಲಿದೆ. ಈ ಮೂಲಕ ಹಾಕಿ ಪ್ರಿಯರಿಗೆ ಪೈಪೋಟಿಯ ಭರ್ಜರಿ ರಸದೌತಣ ನೀಡಲು ಹಾಕಿ ಇಂಡಿಯಾ ಫೆಡರೇಷನ್ ಯೋಜನೆ ರೂಪಿಸಿದೆ.

ಹಾಕಿ ಇಂಡಿಯಾ ಲೀಗ್ ಯಾವಾಗ ಆರಂಭ?

ಹಾಕಿ ಇಂಡಿಯಾ ಲೀಗ್​ನ ಹೊಸ ಸೀಸನ್ ಡಿಸೆಂಬರ್ 28 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಫೆಬ್ರವರಿ 5 ರಂದು ನಡೆಯಲಿದೆ. ಹಾಗೆಯೇ ಮಹಿಳಾ ಟೂರ್ನಿಯ ಫೈನಲ್ ಮ್ಯಾಚ್ 26 ಜನವರಿ 2025 ರಂದು ಜರುಗಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಅನ್​ಕ್ಯಾಪ್ಡ್ ಪಟ್ಟಿಯಿಂದ ಮೂವರು ಹೊರಕ್ಕೆ..!

ಹರಾಜು ಪ್ರಕ್ರಿಯೆ ಯಾವಾಗ?

ಮೇಲೆ ತಿಳಿಸಿದಂತೆ ಈ ಬಾರಿಯ ಹಾಕಿ ಇಂಡಿಯಾ ಲೀಗ್​ನಲ್ಲಿ 8 ಪುರುಷರ ತಂಡಗಳು, 6 ಮಹಿಳಾ ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ 24 ಆಟಗಾರರು ಇರಲಿದ್ದಾರೆ. ಈ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 25 ರಂದು ನಡೆಯಲಿದೆ.

ಯಾವೆಲ್ಲಾ ತಂಡಗಳು ಕಣಕ್ಕೆ?

  • ದೆಹಲಿ ಎಸ್‌ಜಿ ಪೈಪರ್ಸ್ (ಪುರುಷ ಮತ್ತು ಮಹಿಳಾ ತಂಡಗಳು)
  • ಹೈದರಾಬಾದ್ ತೂಫಾನ್ಸ್
  • ಒಡಿಶಾ ಟೀಮ್ (ಪುರುಷ ಮತ್ತು ಮಹಿಳಾ ತಂಡಗಳು)
  • ಪಂಜಾಬ್ ಟೀಮ್
  • ಲಕ್ನೋ ಟೀಮ್
  • ರಾಂಚಿ ಟೀಮ್
  • ಕೊಲ್ಕತ್ತಾ ಟೀಮ್ (ಪುರುಷ ಮತ್ತು ಮಹಿಳಾ ತಂಡಗಳು)
  • ಚೆನ್ನೈ ಟೀಮ್
  • ಹರ್ಯಾಣ (ಮಹಿಳಾ ತಂಡ)
  • (ಎರಡು ಮಹಿಳಾ ತಂಡಗಳು ಸೇರ್ಪಡೆಯಾಗಲಿದೆ)