AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತರೂ ಅಮೆರಿಕ ತಂಡಕ್ಕೆ 152 ಕೋಟಿ ರೂ. ಬಹುಮಾನ!

FIFA World Cup 2026: ವಿಶ್ವದ ಅತಿ ದೊಡ್ಡ ಟೂರ್ನಿ ಫಿಫಾ ವಿಶ್ವಕಪ್‌ನಲ್ಲ ಸೋತರೂ ಕೋಟಿ ಕೋಟಿ ಹಣ ಗಳಿಸಲು ಸಾಧ್ಯವೇ? ಹೌದು ಎನ್ನುತ್ತದೆ ಅಮೆರಿಕ ಫುಟ್‌ಬಾಲ್ ತಂಡದ ಇತ್ತೀಚಿನ ಸಾಧನೆ! 2026ರ ಫಿಫಾ ವಿಶ್ವಕಪ್‌ನ ರೌಂಡ್ ಆಫ್ 16 ಪಂದ್ಯದಲ್ಲಿ ಬೆಲ್ಜಿಯಂ ಎದುರು ಸೋತು ಟೂರ್ನಿಯಿಂದ ಹೊರಬಿದ್ದರೂ, ಅಮೆರಿಕ ತಂಡ ಬರೋಬ್ಬರಿ 152 ಕೋಟಿ ರೂಪಾಯಿ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಸೋತರೂ ಅಮೆರಿಕ ತಂಡಕ್ಕೆ 152 ಕೋಟಿ ರೂ. ಬಹುಮಾನ!
UsaImage Credit source: GettyImages
ಝಾಹಿರ್ ಯೂಸುಫ್
|

Updated on: Jul 09, 2026 | 2:21 PM

Share

ಫಿಫಾ ವಿಶ್ವಕಪ್ 2026ರ ಪ್ರಿ-ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 4-1 ಗೋಲುಗಳಿಂದ ಸೋತು ಹೊರಬಿದ್ದಿರುವ ಅಮೆರಿಕ ತಂಡಕ್ಕೆ ಬರೋಬ್ಬರಿ 152 ಕೋಟಿ ರೂಪಾಯಿ ($16 ಮಿಲಿಯನ್) ಬಹುಮಾನ ಸಿಗಲಿದೆ. ಈ ಬಹುಮಾನದ ಅರ್ಧದಷ್ಟು ಭಾಗವನ್ನು ಅಮೆರಿಕದ ಮಹಿಳಾ ಫುಟ್‌ಬಾಲ್ ತಂಡಕ್ಕೂ (USWNT) ಹಂಚಲಾಗುತ್ತಿದೆ!

ಹೌದು, ಪಂದ್ಯ ಆಡದೆಯೇ ಮಹಿಳಾ ಆಟಗಾರ್ತಿಯರ ಖಾತೆಗೆ ಕೋಟಿ ಕೋಟಿ ಹಣ ಜಮೆಯಾಗುತ್ತಿದೆ. ಇದಕ್ಕೆ ಕಾರಣ ಯುಎಸ್ ಸಾಕರ್ ಫೆಡರೇಶನ್ ಜಾರಿಗೆ ತಂದಿರುವ ಹೊಸ ಕಾನೂನು.

ಏನಿದು ಸಮಾನ ವೇತನ ಒಪ್ಪಂದ?

ಕಳೆದ 2022 ರಲ್ಲಿ ಅಮೆರಿಕದ ಮಹಿಳಾ ಫುಟ್‌ಬಾಲ್ ತಂಡವು ಲಿಂಗ ತಾರತಮ್ಯದ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿತ್ತು. ಇದರ ಫಲವಾಗಿ ಯುಎಸ್ ಸಾಕರ್ ಫೆಡರೇಶನ್ ಪುರುಷ ಮತ್ತು ಮಹಿಳಾ ತಂಡಗಳ ನಡುವೆ ‘ಕಲೆಕ್ಟಿವ್ ಬಾರ್ಗೇನಿಂಗ್ ಅಗ್ರಿಮೆಂಟ್’ (CBA) ಎಂಬ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿತು.

ಈ ಒಪ್ಪಂದದ ಪ್ರಕಾರ, ಪುರುಷರ ಅಥವಾ ಮಹಿಳೆಯರ ಫಿಫಾ ವಿಶ್ವಕಪ್‌ನಲ್ಲಿ ಅಮೆರಿಕದ ಯಾವುದೇ ತಂಡ ಭಾಗವಹಿಸಿ ಪ್ರಶಸ್ತಿ ಹಣವನ್ನು ಗೆದ್ದರೂ, ಅದನ್ನು ಇಬ್ಬರಿಗೂ ಸಮಾನವಾಗಿ ಹಂಚಬೇಕು. ಕ್ರೀಡಾ ಜಗತ್ತಿನಲ್ಲಿ ಲಿಂಗ ತಾರತಮ್ಯ ಅಳಿಸಲು ತಂದ ಈ ನಿಯಮ ಇದೀಗ ಜಾಗತಿಕವಾಗಿ ಸುದ್ದಿಯಾಗಿದೆ.

ಹಣದ ಲೆಕ್ಕಾಚಾರ ಹೇಗೆ ನಡೆಯುತ್ತದೆ?

ವಿಶ್ವಕಪ್‌ನಿಂದ ಅಮೆರಿಕ ಪುರುಷರ ತಂಡ ಪಡೆದ ಒಟ್ಟು ಮೊತ್ತ $16 ಮಿಲಿಯನ್ (ಸುಮಾರು ₹152 ಕೋಟಿ). ಈ ಹಣವನ್ನು ಒಪ್ಪಂದದ ಪ್ರಕಾರ ಹೀಗೆ ವಿಂಗಡಿಸಲಾಗುತ್ತದೆ:

  • ಯುಎಸ್ ಸಾಕರ್ ಫೆಡರೇಶನ್ ಪಾಲು (20%): $3.2 ಮಿಲಿಯನ್ (ಸುಮಾರು ₹30 ಕೋಟಿ) ಫೆಡರೇಶನ್ ಖಾತೆಗೆ ಹೋಗುತ್ತದೆ.
  • ಪ್ಲೇಯರ್ಸ್​ ಪಾಲು (80%): ಉಳಿದ $12.8 ಮಿಲಿಯನ್ (ಸುಮಾರು ₹122 ಕೋಟಿ) ಹಣವನ್ನು ಆಟಗಾರರ ವಿತರಿಸಲಾಗುತ್ತದೆ.
  • ಪುರುಷರ ತಂಡದ ಪಾಲು (40%): $6.4 ಮಿಲಿಯನ್ (ಸುಮಾರು ₹61 ಕೋಟಿ).
  • ಮಹಿಳಾ ತಂಡದ ಪಾಲು (40%): $6.4 ಮಿಲಿಯನ್ (ಸುಮಾರು ₹61 ಕೋಟಿ).

ಇದರ ಅನ್ವಯ, ಪುರುಷರ ತಂಡದ 26 ಆಟಗಾರರು ಮತ್ತು ಮುಂಬರುವ 2027ರ ಮಹಿಳಾ ವಿಶ್ವಕಪ್‌ಗೆ ಆಯ್ಕೆಯಾಗಲಿರುವ 26 ಮಹಿಳಾ ಆಟಗಾರ್ತಿಯರು ತಲಾ $246,153 (ಸುಮಾರು ₹2.3 ಕೋಟಿ) ಹಣವನ್ನು ಪಡೆಯಲಿದ್ದಾರೆ.

ಮಹಿಳಾ ತಂಡಕ್ಕೂ ಇದು ಅನ್ವಯಿಸುತ್ತದೆಯೇ?

ಯುಎಸ್​ ಸಾಕರ್ ಫೆಡರೇಶನ್ ಸಮಾನ ವೇತನ ಒಪ್ಪಂದ ಪುರುಷರ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ವರ್ಷ (2027) ನಡೆಯಲಿರುವ ಫಿಫಾ ಮಹಿಳಾ ವಿಶ್ವಕಪ್‌ನಲ್ಲಿ ಅಮೆರಿಕದ ಮಹಿಳಾ ತಂಡವು ಎಷ್ಟು ಮೊತ್ತದ ಬಹುಮಾನ ಗೆಲ್ಲುತ್ತದೆಯೋ, ಅದರಲ್ಲೂ ಇದೇ ರೀತಿ 20% ಕಡಿತಗೊಳಿಸಿ, ಉಳಿದ ಹಣದಲ್ಲಿ ಅರ್ಧದಷ್ಟನ್ನು ಪುರುಷರ ತಂಡಕ್ಕೆ ನೀಡಲಾಗುತ್ತದೆ.

ಪ್ರಸ್ತುತ ಮಹಿಳಾ ತಂಡಕ್ಕೆ ಸೇರಬೇಕಾದ ₹61 ಕೋಟಿ ಹಣವನ್ನು ಬ್ಯಾಂಕ್‌ನ ವಿಶೇಷ ಖಾತೆಯಲ್ಲಿ ಸುರಕ್ಷಿತವಾಗಿಡಲಾಗಿದ್ದು, ಮುಂದಿನ ವರ್ಷ ತಂಡದ ಆಯ್ಕೆಯಾದ ತಕ್ಷಣ ಆಟಗಾರ್ತಿಯರ ಕೈ ಸೇರಲಿದೆ.

ಇದನ್ನೂ ಓದಿ: ಬರೋಬ್ಬರಿ 59 ಫೌಲ್​​ಗಳು… ಅರ್ಜೆಂಟೀನಾ ಬಂಡವಾಳ ಬಯಲು!

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕ ಫುಟ್‌ಬಾಲ್ ಮಂಡಳಿಯ ಈ ಹೆಜ್ಜೆ ಕೇವಲ ಹಣದ ಹಂಚಿಕೆಯಲ್ಲ; ಬದಲಿಗೆ, ಕ್ರೀಡಾ ಲೋಕದಲ್ಲಿ ದಶಕಗಳಿಂದಲೂ ನಡೆದುಕೊಂಡು ಬಂದಿದ್ದ ಲಿಂಗ ತಾರತಮ್ಯಕ್ಕೆ ಹಾಡಿದ ಇತಿಶ್ರೀಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow Us