US Open: 43 ನೇ ವಯಸ್ಸಿನಲ್ಲಿ ಯುಎಸ್ ಓಪನ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ..!
Rohan Bopanna: ಭಾರತದ ಹಿರಿಯ ಅನುಭವಿ ಆಟಗಾರ ಬೋಪಣ್ಣ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ 2023 ರ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. 43ರ ಹರೆಯದ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಸೆಮಿಫೈನಲ್‌ನಲ್ಲಿ ಫ್ರೆಂಚ್ ಜೋಡಿಯನ್ನು 7-6, 6-2 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಹೆಚ್ಚಿನ ಆಟಗಾರರು ವೃತ್ತಿಪರ ಜೀವಕ್ಕೆ ವಿದಾಯ ಹೇಳಿ ನಿವೃತ್ತಿ ಬದುಕನ್ನು ಆನಂದಿಸುವ ಅಥವಾ ಕೋಚಿಂಗ್‌ಗೆ ಸೇರುವ ವಯಸ್ಸಿನಲ್ಲಿ, ಭಾರತದ ಲೆಜೆಂಡರಿ ಟೆನಿಸ್ ತಾರೆ ರೋಹನ್ ಬೋಪಣ್ಣ (Rohan Bopanna) ಯುಎಸ್ ಓಪನ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತದ ಹಿರಿಯ ಅನುಭವಿ ಆಟಗಾರ ಬೋಪಣ್ಣ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ 2023 (US Open 2023) ರ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. 43ರ ಹರೆಯದ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಸೆಮಿಫೈನಲ್‌ನಲ್ಲಿ ಫ್ರೆಂಚ್ ಜೋಡಿಯನ್ನು 7-6, 6-2 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಬೋಪಣ್ಣ ಗ್ರ್ಯಾನ್‌ಸ್ಲಾಮ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದು, ಇದರೊಂದಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬಹಳ ದಿನಗಳಿಂದ ತಮ್ಮ ಮೊದಲ ಪುರುಷರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಾಗಿ ಹುಡುಕಾಟ ನಡೆಸುತ್ತಿರುವ ರೋಹನ್ ಬೋಪಣ್ಣ ಅವರಿಗೆ ಮತ್ತೊಮ್ಮೆ ಈ ಸಾಧನೆ ಮಾಡುವ ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾದ ಎಬ್ಡೆನ್ ಜೊತೆಯಲ್ಲಿ, ಯುಎಸ್ ಓಪನ್‌ಗೂ ಮೊದಲು ಪ್ರಬಲ ಪ್ರದರ್ಶನ ನೀಡಿದ್ದ ಬೋಪಣ್ಣ, ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ನಲ್ಲೂ ಅದ್ಭುತ ಆಟ ಪ್ರದರ್ಶಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಪ್ರಚಂಡ ಪುನರಾಗಮನ
ಸೆಪ್ಟೆಂಬರ್ 7ರ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಮೊದಲ ಸೆಟ್‌ನಲ್ಲಿ ಫ್ರೆಂಚ್ ಜೋಡಿಯಿಂದ ಕಠಿಣ ಹೋರಾಟವನ್ನು ಎದುರಿಸಿತು. ಇಬ್ಬರೂ ಮೊದಲ ಸೆಟ್‌ನಲ್ಲಿ 2-4 ರಿಂದ ಹಿನ್ನಡೆಯಲ್ಲಿದ್ದರು. ಆದರೆ ಬೋಪಣ್ಣ-ಎಬ್ಡೆನ್ ಜೋಡಿ ಪಂದ್ಯದಲ್ಲಿ ಪ್ರಚಂಡ ಪುನರಾಗಮನವನ್ನು ಮಾಡಿ ಟೈ-ಬ್ರೇಕರ್‌ನಲ್ಲಿ 7-6 (3) ಅಂತರದಿಂದ ಮೊದಲ ಸೆಟ್ ಗೆದ್ದರು. ಮೊದಲ ಸೆಟ್‌ನ ಈ ಯಶಸ್ಸಿನ ಪರಿಣಾಮ ಎರಡನೇ ಸೆಟ್‌ನಲ್ಲಿಯೂ ಕಂಡುಬಂತು. ಅಂತಿಮವಾಗಿ ಉಭಯ ದೈತ್ಯರು, ಫ್ರೆಂಚ್ ಜೋಡಿಯನ್ನು 7-6, 6-2 ರಿಂದ ಮಣಿಸಿ ಫೈನಲ್ ಪ್ರವೇಶಿಸಿದರು.
BREAKING:
13 yrs after he entered his maiden & only Men’s Doubles GRAND SLAM Doubles FINAL at US Open, 43 yrs young Rohan Bopanna does it AGAIN 🔥🔥🔥
Bopanna/Ebden knock OUT 5-time Grand Slam Champions Herbert/Mahut 7-6, 6-2 to storm into US Open Doubles FINAL. #USOpen pic.twitter.com/BUYz5GucqF
— India_AllSports (@India_AllSports) September 7, 2023
ಮೊದಲ ಪ್ರಶಸ್ತಿಗಾಗಿ ಹುಡುಕಾಟ
ಈ ಮೂಲಕ 13 ವರ್ಷಗಳ ನಂತರ ರೋಹನ್ ಬೋಪಣ್ಣ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದರು. ಇದರೊಂದಿಗೆ ಬೋಪಣ್ಣ ಓಪನ್ ಯುಗದಲ್ಲಿ ಯಾವುದೇ ಈವೆಂಟ್‌ನ ಫೈನಲ್ ತಲುಪಿದ ಅತ್ಯಂತ ಹಿರಿಯ ಪುರುಷ ಆಟಗಾರ ಎನಿಸಿಕೊಂಡಿದ್ದಾರೆ. ಬೋಪಣ್ಣ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಆಡಲಿದ್ದು, ಪ್ರಾಸಂಗಿಕವಾಗಿ 2010ರ ಯುಎಸ್ ಓಪನ್‌ನಲ್ಲಿ ಫೈನಲ್ ಆಡಿದ್ದ ಬೋಪಣ್ಣ ಆ ಪಂದ್ಯದಲ್ಲಿ ಸೋಲನುಭವಿಸಿದ್ದರು. ಇನ್ನು 2017 ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಬೋಪಣ್ಣ ಅವರಿಗೆ ಇದು ಅವರ ವೃತ್ತಿಜೀವನದ ಏಕೈಕ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿದೆ. ಇದೀಗ ಬೋಪಣ್ಣ ಅವರಿಗೆ ಪುರುಷರ ಡಬಲ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿಯ ಬರ ನೀಗಿಸುವ ಅವಕಾಶ ಒದಗಿ ಬಂದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
