ಮಹಿಳಾ ಏಷ್ಯಾಕಪ್ ಫೈನಲ್; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಶಫಾಲಿ
ದುಬೈನಲ್ಲಿ ನಡೆದ 2026 ರ ಮಹಿಳಾ ಏಷ್ಯಾಕಪ್ ಫೈನಲ್ನಲ್ಲಿ ಶಫಾಲಿ ವರ್ಮಾ ಸ್ಫೋಟಕ ಅರ್ಧಶತಕ ಬಾರಿಸಿ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಈ ವರ್ಷ ಅಂತರರಾಷ್ಟ್ರೀಯ T20 ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಮಂಧಾನ ಅವರನ್ನು ಹಿಂದಿಕ್ಕಿ 668 ರನ್ಗಳೊಂದಿಗೆ ಅಗ್ರಸ್ಥಾನಕ್ಕೇರಿದರು.

ಶಫಾಲಿ ವರ್ಮಾImage Credit source: BCCI Women X
- 2026 ರ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಯಲ್ಲಿರಿಸಿದ್ದಾರೆ(PC-BCCI Women x).
- ಈ ಪಂದ್ಯದಲ್ಲಿ ಮಂಧಾನ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಶಫಾಲಿ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ ಪವರ್ಪ್ಲೇನ ಮೊದಲ ಆರು ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತು. ಇದರಲ್ಲಿಶಫಾಲಿ ವರ್ಮಾ 38 ರನ್ ಬಾರಿಸಿದರೆ, ಸ್ಮೃತಿ ಮಂಧಾನ 19 ರನ್ಗಳ ಕಾಣಿಕೆ ನೀಡಿದರು(PC-BCCI Women x).
- ಪವರ್ಪ್ಲೇ ಮುಗಿದ ಬಳಿಕವೂ ತನ್ನ ಎಂದಿನ ಆಟವನ್ನು ಮುಂದುವರೆಸಿದ ಶಫಾಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶಫಾಲಿ ಅವರ ಈ ಅರ್ಧಶತಕದ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ಗಳು ಸೇರಿದ್ದವು. ಅಂತಿಮವಾಗಿ ಶಫಾಲಿ 39 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 68 ರನ್ ಬಾರಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದರು(PC-BCCI Women x).
- ಈ ಅರ್ಧಶತಕದೊಂದಿಗೆ ಈ ವರ್ಷದಲ್ಲಿ ಅಂದರೆ 2026 ರಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಶಫಾಲಿ ವರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ 21 ಟಿ20 ಇನ್ನಿಂಗ್ಸ್ಗಳಲ್ಲಿ ಶಫಾಲಿ 151 ರ ಸ್ಟ್ರೈಕ್ ರೇಟ್ನಲ್ಲಿ 668 ರನ್ ಕಲೆಹಾಕಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಅಗ್ರಸ್ಥಾನದಲ್ಲಿದ್ದ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಹಿಂದಿಕ್ಕಿದ್ದಾರೆ(PC-BCCI Women x).
- ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿರುವ ಸ್ಮೃತಿ ಮಂಧಾನ 640 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ನಾಯಕಿ ಹರ್ಮನ್ಪ್ರೀತ್ ಕೌರ್ 489 ರನ್ ಬಾರಿಸಿದ್ದರೆ, ಜೆಮೀಮಾ ರೊಡ್ರಿಗಸ್ 345 ರನ್ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿರುವ ರಿಚಾ ಘೋಷ್ 252 ರನ್ ಬಾರಿಸಿದ್ದಾರೆ(PC-BCCI Women x).
Published On - 9:05 pm, Sun, 13 September 26
Follow Us









