AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಎಸ್‌ಸಿ ಹಗರಣ: ಕನ್ನಾಳೆ ಹಣದ ಜಾಡು ಹಿಡಿದ ಸಿಐಡಿ; ಭಾಲ್ಕಿ ಸಹಕಾರಿ ಬ್ಯಾಂಕ್‌ ಮೇಲೆ ದಾಳಿ

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ತನಿಖೆ ಚುರುಕುಗೊಂಡಿದೆ. ಸಿಐಡಿ ಅಧಿಕಾರಿಗಳು ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಆಸ್ತಿ ಮತ್ತು ಹಣಕಾಸು ವ್ಯವಹಾರಗಳ ಜಾಡು ಹಿಡಿದಿದ್ದಾರೆ. ಭಾಲ್ಕಿಯ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್ ಮೇಲೆ ಮತ್ತೆ ದಾಳಿ ನಡೆಸಿ, ದಾಖಲೆ ಹಾಗೂ ಹಣ ವರ್ಗಾವಣೆ ಪರಿಶೀಲಿಸಿದ್ದಾರೆ. ಬ್ಯಾಂಕ್ ವ್ಯವಹಾರಗಳ ಸುತ್ತ ಹಣಕಾಸು ಅಕ್ರಮಗಳ ಜಾಲ ಬಗೆದಷ್ಟು ಬಯಲಾಗುತ್ತಿದೆ.

ಕೆಪಿಎಸ್‌ಸಿ ಹಗರಣ: ಕನ್ನಾಳೆ ಹಣದ ಜಾಡು ಹಿಡಿದ ಸಿಐಡಿ; ಭಾಲ್ಕಿ ಸಹಕಾರಿ ಬ್ಯಾಂಕ್‌ ಮೇಲೆ ದಾಳಿ
ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್‌Image Credit source: tv9 kannada
ಸುರೇಶ್ ನಾಯಕ್
| Edited By: |

Updated on: Sep 13, 2026 | 8:17 PM

Share

ಬೀದರ್​, ಸೆಪ್ಟೆಂಬರ್​ 13: ಪಶು ವೈದ್ಯರ ನೇಮಕಾತಿ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ಸಿಐಡಿ ಅಧಿಕಾರಿಗಳು ಬಸವರಾಜ್ ಕನ್ನಾಳೆಗೆ ಸಂಬಂಧಿಸಿದ ದಾಖಲೆಗಳ ಪರೀಶೀಲನೆಯಲ್ಲಿ ತೊಡಗಿದ್ದಾರೆ. ಭಾಲ್ಕಿ ಪಟ್ಟಣದ ಲೆಕ್ಚರರ್‌ ಕಾಲೋನಿಯಲ್ಲಿರುವ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್‌ ಮೇಲೆ ಬೆಳ್ಳಂಬೆಳಿಗ್ಗೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಬ್ಯಾಂಕ್‌ನ ವಹಿವಾಟು ಹಾಗೂ ದಾಖಲೆಗಳ ಪರಿಶೀಲನೆ ಮಾಡಿದರು.

ಭಾಲ್ಕಿಯ ಓಂ ಲಕ್ಷ್ಮೀ ಬ್ಯಾಂಕ್ ಮೇಲೆ ಸಿಐಡಿ ದಿಢೀರ್ ದಾಳಿ

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕರಣ ಸಂಬಂಧಿಸಿದಂತೆ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿದೆ. ಈ ಅಕ್ರಮ ಸಂಬಂಧ ಈಗಾಗಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಈ ಅಕ್ರಮದ ಕಿಂಗ್​ಪಿನ್ ಬೀದರ್ ಜಿಲ್ಲೆಯ ಭಾಲ್ಕಿ ಮೂಲಕ ಬಸವರಾಜ್ ಕನ್ನಾಳೆಯನ್ನ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಬಸವರಾಜ್ ಕನ್ನಾಳೆ ಆಸ್ತಿ ಮೂಲ ಕೆದುಕುತ್ತಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇದೀಗ ಹಣದ ವಹಿವಾಟಿನ ಜಾಡು ಹಿಡಿದು ತನಿಖೆ ಮುಂದುವರಿಸಿದ್ದಾರೆ. ಇದರ ಭಾಗವಾಗಿಯೇ ಇಂದು ಭಾಲ್ಕಿಯ ಲೆಕ್ಚರರ್‌ ಕಾಲೋನಿಯಲ್ಲಿರುವ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್‌ ಮೇಲೆ ಮತ್ತೆ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: ಕೆಪಿಎಸ್​ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: 5 ಕೋಟಿ ರೂ. ವಹಿವಾಟು ಬೆಳಕಿಗೆ; ಇನ್ನೂ ಹಲವರ ಬಂಧನ ಸಾಧ್ಯತೆ

ಬೆಳ್ಳಂಬೆಳಿಗ್ಗೆಯೇ ಬ್ಯಾಂಕ್‌ಗೆ ಆಗಮಿಸಿದ ಸಿಐಡಿ ಅಧಿಕಾರಿಗಳು, ಬ್ಯಾಂಕ್‌ನ ದಾಖಲೆಗಳು, ಹಣ ವರ್ಗಾವಣೆ ವಿವರಗಳು ಹಾಗೂ ಸಂಬಂಧಿತ ಖಾತೆಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಇನ್ನು ಸಿಐಡಿ ಅಧಿಕಾರಿಗಳು ಬ್ಯಾಂಕ್‌ ಮ್ಯಾನೇಜರ್‌ ಅಮರ್‌ ಎಂಬಾತನನ್ನು ಬ್ಯಾಂಕ್‌ಗೆ ಕರೆತಂದು ವಿಚಾರಣೆ ಮಾಡಿದರು. ಬ್ಯಾಂಕ್‌ನಲ್ಲಿ ನಡೆದಿರುವ ಕೆಲವು ಹಣಕಾಸು ವ್ಯವಹಾರಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡು ತೆರಳಿದ್ದಾರೆ.

ನನಗೂ ಬಸವರಾಜ್ ಕನ್ನಾಳೆಗೂ ಯಾವುದೆ ಸಂಬಂಧವಿಲ್ಲ: ಬ್ಯಾಂಕ್ ಅಧ್ಯಕ್ಷ ಓಂಕಾರ್

ಇನ್ನು ಮಾಧ್ಯಮದವರೊಂದಿಗೆ ಮಾತನಾಡಿ ಬ್ಯಾಂಕ್ ಅಧ್ಯಕ್ಷ ಓಂಕಾರ್, ‘ನಮ್ಮ ಬ್ಯಾಂಕ್ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಾನು ಅವರಿಗೆ ಕೇಳಿದ ದಾಖಲೆ ಕೊಟ್ಟಿದ್ದೇನೆ, ಬಸವರಾಜ್ ಕನ್ನಾಳೆಯ ಒಂದು ಖಾತೆ ಮಾತ್ರ ನಮ್ಮ ಬ್ಯಾಂಕ್​ನಲ್ಲಿದೆ. ಅದರಲ್ಲಿ 75 ಲಕ್ಷ ರೂ ಹಣ ಇದೆ. ನನಗೂ ಬಸವರಾಜ್ ಕನ್ನಾಳೆಗೂ ಯಾವುದೆ ರೀತಿಯ ಸಂಬಂಧವಿಲ್ಲ’ ಎಂದಿದ್ದಾರೆ.

ಹಣ ವರ್ಗಾವಣೆ ಜಾಲದ ಬೇರುಗಳಿಗಾಗಿ ಸಿಐಡಿ ತಲಾಶ್

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬ್ಯಾಂಕ್‌ನಲ್ಲಿ ನಡೆದಿರುವ ಹಣಕಾಸು ವಹಿವಾಟುಗಳ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಅನುಮಾನ ಮೂಡಿದೆ ಎನ್ನಲಾಗಿದೆ. ಬ್ಯಾಂಕ್‌ ಅಧ್ಯಕ್ಷ ಓಂಕಾರ ಅವರ ಖಾತೆಯಿಂದ ನಡೆದಿರುವ ಹೆಚ್ಚಿನ ಮೊತ್ತದ ಹಣ ವರ್ಗಾವಣೆಯ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ. ಬಸವರಾಜ್ ಕನ್ನಾಳೆಯಿಂದ ಹಣದ ವಹಿವಾಟು ನಡೆದಿದೆಯಾ, ಹಣ ವರ್ಗಾವಣೆಯ ಹಿಂದೆ ಯಾರಿದ್ದಾರೆ, ಯಾವ ಯಾವ ಖಾತೆಗಳಿಗೆ ಹಣ ಹೋಗಿದೆ, ಯಾವ ಉದ್ದೇಶಕ್ಕಾಗಿ ಹಣ ವರ್ಗಾವಣೆ ಮಾಡಲಾಗಿದೆ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

LIVE TV

ಇನ್ನು ಸಿಐಡಿ ದಾಳಿ ಇದೇ ಮೊದಲಲ್ಲ. ಇದೇ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್‌ ಮೇಲೆ ಸಿಐಡಿ ಅಧಿಕಾರಿಗಳು ಈ ಹಿಂದೆಯೂ ದಾಳಿ ನಡೆಸಿದ್ದರು. ಇದೀಗ ಮತ್ತೊಮ್ಮೆ ದಾಳಿ ನಡೆಸಿರುವುದು ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಕೆಪಿಎಸ್​ಸಿಯಲ್ಲಿ ಮತ್ತೊಂದು ಭಾರೀ ಅಕ್ರಮ: ಗ್ರಾಮೀಣ ಕುಡಿಯುವ ನೀರು ಇಲಾಖೆ ನೇಮಕಾತಿಯಲ್ಲೂ ಅಕ್ರಮ, ಒಎಂಆರ್ ಶೀಟ್ ತಿದ್ದುಪಡಿ!

ಒಟ್ಟಿನಲ್ಲಿ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಇದೀಗ ಹಣದ ವಹಿವಾಟಿನ ಸುತ್ತ ಕೇಂದ್ರೀಕೃತವಾಗುತ್ತಿರುವಂತೆ ಕಾಣುತ್ತಿದೆ. ಇವೆಲ್ಲವು ಪ್ರಕರಣದ ತನಿಖೆಗೆ ಹೊಸ ತಿರುವು ನೀಡುತ್ತವೆಯೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಸಿಐಡಿ ತನಿಖೆ ಮುಂದುವರಿದಿದ್ದು, ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆಯ ಬಳಿಕ ಪ್ರಕರಣದ ಅಸಲಿ ಹಣದ ಜಾಲ ಬಯಲಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us