ಕಾಲ್, ಮೆಸೇಜ್, ವಿಡಿಯೋ ವೀಕ್ಷಿಸಲು ಸಿಮ್-ಇಂಟರ್ನೆಟ್ ಬೇಡ: ಭಾರತದಿಂದ D2M ತಂತ್ರಜ್ಞಾನ
Direct-to-Mobile technology: ಭಾರತದಲ್ಲಿ ಹೊಸ ತಂತ್ರಜ್ಞಾನದ ಮೇಲೆ ಕೆಲಸ ಮಾಡಲಾಗುತ್ತಿದೆ, ಅದರ ಮೂಲಕ ಸ್ಮಾರ್ಟ್ಫೋನ್ನಲ್ಲಿ ವಿಡಿಯೋ ಕರೆಗಳನ್ನು ಇಂಟರ್ನೆಟ್-ಸಿಮ್ ಇಲ್ಲದೆ ಸುಲಭವಾಗಿ ಮಾಡಬಹುದು. D2M ತಂತ್ರಜ್ಞಾನದ ಅಡಿಯಲ್ಲಿ, ಮೊಬೈಲ್ ಸಾಧನಕ್ಕೆ ಸಣ್ಣ ರಿಸೀವರ್ ಅನ್ನು ಸೇರಿಸಿದರೆ ಇದು ಕೆಲಸ ಮಾಡಲಿದೆ. ಈ ಬಗ್ಗೆ ವಿವರವಾಗಿ ತಿಳಿಯಿರಿ...
ಸಿಮ್ ಮತ್ತು ಇಂಟರ್ನೆಟ್ ಇಲ್ಲಿದಿದ್ದರೆ ಸ್ಮಾರ್ಟ್‌ಫೋನ್ (Smartphone) ಉಪಯೋಗಕ್ಕೆ ಬರುವುದಿಲ್ಲ. ಅನೇಕ ಜನರು ವೈಫೈ ಬಳಸುತ್ತಾರೆ. ಆದರೆ ಇದನ್ನು ಕೆಲವು ಸ್ಥಳಗಳಲ್ಲಿ ಮಾತ್ರ ಉಪಯೋಗಿಸಬಹುದು. ಆದರೆ, ಮುಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ನಲ್ಲಿ ಸಿಮ್-ಇಂಟರ್ನೆಟ್ ಇಲ್ಲದೆ ಕಾಲ್, ಮೆಸೇಜ್ ಜೊತೆಗೆ ವಿಡಿಯೋ ಕೂಡ ವೀಕ್ಷಿಸಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ತಂತ್ರಜ್ಞಾನದೊಂದಿಗೆ ಬರುತ್ತಿದೆ. ಈ ತಂತ್ರಜ್ಞಾನಕ್ಕೆ ಡೈರೆಕ್ಟ್ ಟು ಮೊಬೈಲ್ ಎಂದು ಹೆಸರಿಡಲಾಗಿದೆ.
ಬ್ರಾಡ್‌ಕಾಸ್ಟಿಂಗ್ ಶೃಂಗಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಸ್ವದೇಶಿ-ಬೆಳೆದ ಡೈರೆಕ್ಟ್-ಟು-ಮೊಬೈಲ್ (D2M) ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ದೇಶದಲ್ಲಿ ಡೈರೆಕ್ಟ್ ಟು ಮೊಬೈಲ್ (D2M) ಅನ್ನು ಪರೀಕ್ಷಿಸಲಾಗುವುದು. ಆರಂಭದಲ್ಲಿ, ಈ ಸೇವೆಯನ್ನು ದೇಶದ 19 ನಗರಗಳಲ್ಲಿ ಪರೀಕ್ಷಿಸಲಾಗುತ್ತದೆ ಎಂದಿದ್ದಾರೆ.
ಡೈರೆಕ್ಟ್-ಟು-ಮೊಬೈಲ್ ಸೇವೆ ಎಂದರೇನು?:
ಡೈರೆಕ್ಟ್-ಟು-ಮೊಬೈಲ್ (D2M) ಸೇವೆಯು ಇಂಟರ್ನೆಟ್ ಸಂಪರ್ಕವಿಲ್ಲದೆ ಸ್ಮಾರ್ಟ್ಫೋನ್ನಲ್ಲಿ ಲೈವ್ ಟಿವಿ ಮತ್ತು ವಿಡಿಯೋವನ್ನು ವೀಕ್ಷಿಸಲು ಅನುಮತಿಸುವ ಹೊಸ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು FM ರೇಡಿಯೊದಂತೆ ಕಾರ್ಯನಿರ್ವಹಿಸುತ್ತದೆ, ಇದು ಮೊಬೈಲ್ ಸಾಧನಕ್ಕೆ ಆಡಿಯೋಯೊವನ್ನು ರವಾನಿಸಲು ರೇಡಿಯೊ ಸಂಕೇತಗಳನ್ನು ಬಳಸುತ್ತದೆ.
ಡೈರೆಕ್ಟ್-ಟು-ಮೊಬೈಲ್ ಸೇವೆ ಉಪಯೋಗ:
D2M ಸೇವೆಯಿಂದ ಹಲವು ಪ್ರಯೋಜನಗಳಿವೆ. ಮೊದಲನೆಯದಾಗಿ, ಇದು ಇಂಟರ್ನೆಟ್ ಸಂಪರ್ಕದ ಅಗತ್ಯವನ್ನು ನಿವಾರಿಸುತ್ತದೆ. ಮುಖ್ಯವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ (ನೆಟ್‌ವರ್ಕ್ ಇಲ್ಲದ ಜಾಗ) ಹೆಚ್ಚು ಉಪಯುಕ್ತವಾಗಿದೆ. ಎರಡನೆಯದಾಗಿ, ಇದು ವಿಡಿಯೋ ಸ್ಟ್ರೀಮಿಂಗ್ ಗುಣಮಟ್ಟವನ್ನು ಸುಧಾರಿಸಬಹುದು, ಏಕೆಂದರೆ ಇದು ಇಂಟರ್ನೆಟ್ ಅನ್ನು ಅವಲಂಬಿಸಿಲ್ಲ. ಮೂರನೆಯದಾಗಿ, ಇದು ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ ಮಾಡಬಹುದು.
ಕೆಲವು ನಗರಗಳಲ್ಲಿ ಪ್ರಯೋಗ:
ಕಳೆದ ವರ್ಷ ಪ್ರಾಯೋಗಿಕ ಯೋಜನೆಯಲ್ಲಿ, ಡೈರೆಕ್ಟ್-ಟು-ಮೊಬೈಲ್ ತಂತ್ರಜ್ಞಾನವನ್ನು ಕೆಲವು ಸ್ಥಳಗಳಲ್ಲಿ ಪ್ರಯೋಗಿಸಲಾಯಿತು. ಇದರಲ್ಲಿ ಬೆಂಗಳೂರು, ನೋಯ್ಡಾ ನಗರಗಳೂ ಸೇರಿವೆ. ಈ ಪ್ರಯೋಗದ ಫಲಿತಾಂಶಗಳು ಪಾಸಿಟಿವ್ ಆಗಿ ಬಂದಿವೆ. ಹಾಗಾಗಿ ಈ ವರ್ಷ ಈ ಹೊಸ ತಂತ್ರಜ್ಞಾನವನ್ನು 19 ನಗರಗಳಲ್ಲಿ ಪರೀಕ್ಷಿಸಲಾಗುತ್ತಿದೆ.
”ಭಾರತದಲ್ಲಿ ಸುಮಾರು 280 ಮಿಲಿಯನ್ ಕುಟುಂಬಗಳಿವೆ. ಅವುಗಳಲ್ಲಿ 190 ಮಿಲಿಯನ್ ಕುಟುಂಬ ಮಾತ್ರ ಟಿವಿಯನ್ನು ಹೊಂದಿದೆ. ದೂರದ, ಗುಡ್ಡಗಾಡು ಪ್ರದೇಶದ ಜನರಿಗೆ ಈ ರೀತಿಯ ಯಾವುದೇ ಸೌಲಭ್ಯವಿಲ್ಲ. ಇದೀಗ ಈ ಹೊಸ ತಂತ್ರಜ್ಞಾನ ಅವರಿಗೆ ಉಪಯುಕ್ತವಾಗಲಿದೆ,” ಎಂದು ಅಪೂರ್ವ ಚಂದ್ರ ಹೇಳಿದ್ದಾರೆ.
ಎಷ್ಟು ಶುಲ್ಕ ವಿಧಿಸಲಾಗುತ್ತದೆ?:
ಚಂದ್ರು ಪ್ರಕಾರ, ದೇಶದಲ್ಲಿ 80 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ. ಅವರು 69 ಪ್ರತಿಶತ ವಿಷಯವನ್ನು ವಿಡಿಯೋ ರೂಪದಲ್ಲಿ ಮಾತ್ರ ವೀಕ್ಷಿಸುತ್ತಾರೆ. ಆದರೆ ವಿಡಿಯೋ ಲೋಡ್ ಆಗುತ್ತಿದ್ದಂತೆ ನೆಟ್‌ವರ್ಕ್ ನಿಧಾನವಾಗುತ್ತದೆ. ಇದು ವಿಡಿಯೋ ಬಫರಿಂಗ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಕ್ಕೆಲ್ಲ ಡೈರೆಕ್ಟ್ ಟು ಮೊಬೈಲ್ ಸೇವೆ ಪರಿಹಾರ ಒದಗಿಸುತ್ತದೆ. ಆದರೆ, ಇದು ಉಚಿತವೇ ಅಥವಾ ಶುಲ್ಕ ವಿಧಿಸಲಾಗುತ್ತದೆಯೇ ಎಂಬುದು ಬಹಿರಂಗಗೊಂಡಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ