Video: ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ನೆರವಿಗೆ ಬಂದ ಅಪರಿಚಿತರು
ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಅನ್ನೋದೇ ಇಲ್ಲ. ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಕೆಲವು ಘಟನೆಗಳನ್ನು ನೋಡುವಾಗ ಬೆಂಗಳೂರು ಹೆಣ್ಮಕ್ಳಗೆ ಎಷ್ಟು ಸೇಫ್ ಅನ್ನೋ ಪ್ರಶ್ನೆ ಮೂಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿದೆ ಈ ಘಟನೆ. ಒಬ್ಬಂಟಿ ಯುವತಿಗೆ ತಡರಾತ್ರಿ 3 ಗಂಟೆಗೆ ಅಪರಿಚಿತ ವ್ಯಕ್ತಿಗಳಿಬ್ಬರೂ ನೆರವಾಗಿದ್ದಾರೆ. ವಿಡಿಯೋ ಮಾಡಿ ನೆರವಾದ ವ್ಯಕ್ತಿಗಳನ್ನು ನೆನಪಿಸಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 06: ಹೆಣ್ಣು ಮಕ್ಕಳ ಜತೆ ಕೆಲ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಪುಂಡಪೋಕರಿಗಳು ಅಹಿತಕರವಾಗಿ ವರ್ತಿಸುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಬೆಂಗಳೂರು (Bengaluru) ನಗರವು ದೇಶದ ಅತ್ಯಂತ ಕಾಳಜಿಯುಳ್ಳ ಹಾಗೂ ಜವಾಬ್ದಾರಿಯುತ ನಗರಗಳಲ್ಲಿ ಒಂದಾಗಿದೆ ಎಂಬುದನ್ನು ಮತ್ತೆ ನೆನಪಿಸಿದೆ. ಇದಕ್ಕೆ ಕಾರಣವಾಗಿದ್ದು ಯುವತಿಯೂ ಹಂಚಿಕೊಂಡ ಈ ವಿಡಿಯೋ. ತಡರಾತ್ರಿ ಒಬ್ಬಂಟಿಯಾಗಿದ್ದ ವೇಳೆ ಈ ಯುವತಿಯ ಸುರಕ್ಷತೆಗಾಗಿ ಇಬ್ಬರು ಅಪರಿಚಿತರು ಬಂದಿದ್ದಾರೆ. ಅಪರಿಚಿತ ವ್ಯಕ್ತಿಗಳು ತೋರಿದ ಕಾಳಜಿ ಕಂಡು ಯುವತಿಯೂ ಫಿದಾ ಆಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Karnatakaportfolio ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಐಶ್ವರ್ಯ ಕಲ್ಪಾರ್ಜುನ್ ಎಂಬ ಯುವತಿ ತಮಗಾದ ಅನುಭವ ಹೇಳಿಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ, ಐಶ್ವರ್ಯ ಅವರು ತಡರಾತ್ರಿ ಬೆಂಗಳೂರು ಏರ್‌ಪೋರ್ಟ್‌ನಿಂದ ಕಾಡುಗೋಡಿಗೆ ಬಂದು ಇಳಿದಿದ್ದಾರೆ. ತಡರಾತ್ರಿ 3 ಗಂಟೆ ಆಗಿತ್ತು. ಆದರೆ ಅವರ ಮನೆಗೆ ಕಾಡುಗೋಡಿ ಬಸ್ ನಿಲ್ದಾಣದಿಂದ 3 ಕಿಲೋ ಮೀಟರ್ ದೂರದಲ್ಲಿದ್ದ ಕಾರಣ ಯಾವುದೇ ಟ್ಯಾಕ್ಸಿ ಅಥವಾ ಆಟೋಗಳು ಬರಲು ರೆಡಿ ಇರಲಿಲ್ಲ. ಟ್ಯಾಕ್ಸಿ ಬುಕ್ ಆಗುತ್ತಿರಲಿಲ್ಲ. ಹೀಗಾಗಿ ಟ್ಯಾಕ್ಸಿಗಾಗಿ ಕಾಯುತ್ತಿದ್ದ ವೇಳೆ ಅಲ್ಲಿದ್ದ ಒಬ್ಬ ಬಸ್ ಕಂಡಕ್ಟರ್ ಅವರ ಸಹಾಯಕ್ಕೆ ಧಾವಿಸಿದ್ದಾರೆ. ನಿಮಗೆ ಟ್ಯಾಕ್ಸಿ ಸಿಗುವವರೆಗೂ ನಾನು ಜೊತೆಯಲ್ಲೇ ಇರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
A heartwarming moment from Bengaluru has reminded people why the city is often called one of the most caring and responsible urban spaces in the country. A woman travelling late at night from the airport to Kadugodi on a BMTC airport bus found herself in a vulnerable situation… pic.twitter.com/GUhsQpPxeV
— Karnataka Portfolio (@karnatakaportf) April 6, 2026
ಅದೇ ವೇಳೆ ಕ್ಯಾಬ್ ಹಾಗೂ ಟ್ಯಾಕ್ಸಿ ಬುಕ್ ಮಾಡಿದ್ರೂ ಬುಕ್ ಆಗಲಿಲ್ಲ. ಅಲ್ಲಿಗೆ ಬಂದ ರಾಪಿಡೋ ಡ್ರೈವರ್ ಬಳಿ ಮನೆಗೆ ಬಿಡುವಂತೆ ಕೇಳಿದ್ದಾರೆ. ಎಷ್ಟು ಚಾರ್ಚ್ ಆಗುತ್ತದೆ ಎಂದು ವಿಚಾರಿಸುತ್ತಿದ್ದಂತೆ ಅದೆಲ್ಲಾ ಪರವಾಗಿಲ್ಲ ಮೇಡಂ, ಮೊದಲು ನೀವು ಮ್ಯಾಪ್‌ನಲ್ಲಿ ಲೊಕೇಶನ್ ತೋರಿಸಿ, ಲೇಟ್ ಆಗಿದೆ ಎಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆ ತಲುಪಿದ ಬಳಿಕ ಐಶ್ವರ್ಯ ಅವರು ಹಣದ ಬಗ್ಗೆ ಕೇಳಿದಾಗ ‘ಸಮಯ ತುಂಬಾ ಲೇಟ್ ಆಗಿದೆ, ಒಬ್ಬ ಮಹಿಳೆಯಾಗಿ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ಇಷ್ಟೇ ಹಣ ಬೇಕು ಎಂದು ನಾನು ಕೇಳುವುದಿಲ್ಲ, ನಿಮಗೆ ಎಷ್ಟು ಅನಿಸುತ್ತದೋ ಅಷ್ಟನ್ನು ಕೊಡಿ ಎಂದು ಉತ್ತರ ನೀಡಿದ್ದಾರೆ. ಈ ಘಟನೆಯ ಬಗ್ಗೆ ವಿವರಿಸುತ್ತಾ ಅಪರಿಚಿತ ವ್ಯಕ್ತಿಗಳ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ 2BHK ಮನೆಗೆ 70 ಸಾವಿರ ರೂ. ಬಾಡಿಗೆ!, ಭಯಾನಕ ಅನುಭವ ಬಿಚ್ಚಿಟ್ಟ ವ್ಯಕ್ತಿ
ಏಪ್ರಿಲ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಸುರಕ್ಷಿತ ಎಂದು ಜನರು ಈಗ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಇನ್ನೊಬ್ಬರು, ಅತ್ಯುತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬೆಂಗಳೂರಿನಲ್ಲಿ ಹೃದಯವಂತರು ಅಸಂಖ್ಯಾತ ಜನರಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




