Viral Video: ‘ಅವನು ನಿಮ್ಮ ಮಗನಲ್ಲವೆ?’ ಜೆನ್ನಿಫರ್ ಟೀಚರ್ ಕನ್ನಡದ ಹೊಸ ರೀಲಿನೊಂದಿಗೆ
Kannada Reel : ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ನಾಲ್ಕು ರೂಪಾಯಿಗೆ ನೂರು ತೆಂಗಿನಕಾಯಿಗಳನ್ನು ಯಶಸ್ವಿಯಾಗಿ ಮಾರಿದ ಜರ್ಮನಿಯ ಜೆನ್ನಿಫರ್ ಮತ್ತೊಂದು ರೀಲಿನೊಂದಿಗೆ ನಿಮ್ಮೆದುರಿಗಿದ್ದಾರೆ.

Germany : ಜರ್ಮನಿಯ ಈ ಜೆನ್ನಿಫರ್ ಶಿಕ್ಷಕಿ, ಭಾಷೆ, ಸಂಗೀತ, ನೃತ್ಯಪ್ರಿಯೆ ಮತ್ತು ಕಂಟೆಂಟ್ ಕ್ರಿಯೇಟರ್. ಆಗಾಗ ಭಾರತದ ಮಹಾನಗರಗಳಿಗೆ ಭೇಟಿ ಕೊಡುವ ಈಕೆ ಸ್ಥಳೀಯ ಭಾಷಾ ಕಲಿಕೆ ಮತ್ತು ಸಂಸ್ಕೃತಿಯ ಬಗ್ಗೆ ಆಸ್ಥೆ ವಹಿಸುತ್ತಿರುತ್ತಾರೆ. ಆಸಕ್ತರಿಗೆ ಆನ್ಲೈನ್ ಮೂಲಕ ಜರ್ಮನ್ ಭಾಷೆಯನ್ನೂ ಕಲಿಸುತ್ತಿರುತ್ತಾರೆ. ಅಂದಹಾಗೆ ಇವರ ಹಳೆಯ ರೀಲನ್ನೊಮ್ಮೆ ಇದೇ ತಾಣದಲ್ಲಿ ನೋಡಿದ್ದೀರಿ. ಮೈಸೂರಿನ ದೇವರಾಜ ಮಾರುಕಟ್ಟೆಯ ತೆಂಗಿನಕಾಯಿ ಅಂಗಡಿಯಲ್ಲಿ ಕುಳಿತು ನೂರು ರೂಪಾಯಿಗೆ ನಾಲ್ಕು ತೆಂಗಿನಕಾಯಿ ಮಾರುವ ಬದಲು ನಾಲ್ಕು ರೂಪಾಯಿಗೆ ನೂರು ತೆಂಗಿನಕಾಯಿಗಳನ್ನು ಈಕೆ ಮಾರಿದ್ದರು!
ಇದೀಗ ಅಮ್ಮನ ಪಾತ್ರದಲ್ಲಿ ಈಕೆ ಹೊಸ ರೀಲಿನಲ್ಲಿ ಕಾಣಿಸಿಕೊಂಡಿದ್ದಾರೆ. ರಾತ್ರಿ ತಡವಾಗಿ ಮನೆಗೆ ಬರುವ ಮಗನನ್ನು ಅಪ್ಪ ಮನೆಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದಾಗ ಅಮ್ಮನಾದವಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವುದನ್ನು ಇದು ತೋರಿಸುತ್ತದೆ; ”ಮನೆಯಲ್ಲಿರುವ ಯಾರಿಗೂ ಇಂಥ ಪರಿಸ್ಥಿತಿ ಒದಗಬಹುದು. ಅದು ವಿಭಿನ್ನ ರೀತಿಯಲ್ಲಿ ಅಂತ್ಯ ಕಾಣಬಹುದು. ಆದರೆ ನಾವಿಲ್ಲಿ ಬೇಕೆಂದೇ ಇದನ್ನು ಸ್ವಲ್ಪ ಹಾಸ್ಯಮಯವಾಗಿ ಇಲ್ಲಿ ಕಟ್ಟಿಕೊಟ್ಟಿದ್ದೇವೆ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ” ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಜೆನ್ನಿ.
ಇದನ್ನೂ ಓದಿ : Viral: ಬಾತ್ರೂಮಿನಲ್ಲಿ ಸಂಗೀತ ಕೇಳಿದ್ದಕ್ಕಾಗಿ ವಿದ್ಯಾರ್ಥಿನಿಯಿಂದ ಕ್ಷಮಾಪಣೆ ಪತ್ರ ಬರೆಯಿಸಿಕೊಂಡ ಹಾಸ್ಟೆಲ್ ಸಿಬ್ಬಂದಿ
ಈಕೆಯ ಅಭಿಮಾನಿಗಳು, ಎಲ್ಲಿ ಹೋಗಿದ್ರಿ ಜೆನ್ನಿ ಮೇಡಮ್, ನಿಮ್ಮನ್ನು ನಿಮ್ಮ ಕನ್ನಡದ ಪ್ರೀತಿಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೆವು ಎಂದಿದ್ದಾರೆ. ಈ ಸಲ ನೀವು ಕನ್ನಡದ ಬಗ್ಗೆಯಷ್ಟೇ ಯೋಚಿಸದೆ ಭಾರತದ ಕೌಟುಂಬಿಕ ವಾತಾವರಣದ ಬಗ್ಗೆಯೂ ಗಮನ ಹರಿಸಿದ್ದೀರಿ ಭಲೇ ಎಂದಿದ್ದಾರೆ. ಮೈಸೂರಿನ ಸಂಸ್ಕೃತಿ ಇದು, ಹತ್ತುಗಂಟೆಯೊಳಗೆ ಎಲ್ಲರೂ ಮನೆಯಲ್ಲಿರಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಕನ್ನಡದವರಾಗಿ ಕನ್ನಡವನ್ನೇ ಮರೆತ ಎಷ್ಟೋ ಜನರ ಮಧ್ಯೆ ನೀವು ಅಪ್ಪಟ ಕನ್ನಡಿಗರಂತೆ ಕಂಗೊಳಿಸುತ್ತೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:46 pm, Sat, 10 June 23