Viral : ಹೇರ್ ಕ್ಲಿಪ್, ಚಾಕು ಬಳಸಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಭಾರತೀಯ ಸೇನೆಯ ವೈದ್ಯ
ರಸ್ತೆ ಮಧ್ಯದಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆಗಳು ಈ ಹಿಂದೆ ನಡೆದಿದೆ. ಆದರೆ ಇದೀಗ ಇಂತಹದ್ದೇ ಒಂದು ಘಟನೆಯೂ ನಡೆದಿದ್ದು, ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಭಾರತೀಯ ಸೇನೆಯ ವೈದ್ಯರೊಬ್ಬರು ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಮಯಕ್ಕೆ ಸರಿಯಾಗಿ ಧಾವಿಸಿ ಹೆರಿಗೆ ಮಾಡಿಸಿದ ವೈದ್ಯರ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಝಾನ್ಸಿ, ಜುಲೈ 07: ಹೆರಿಗೆ (childbirth) ಎನ್ನುವುದು ಹೆಣ್ಣಿಗೆ ಮರುಜನ್ಮವಿದ್ದಂತೆ, ಹೀಗಾಗಿ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಸರಿಯಾದ ಚಿಕಿತ್ಸೆ ಸಿಕ್ಕಿದ್ರೆ ಮಾತ್ರ ತಾಯಿ ಹಾಗೂ ಮಗು ಆರೋಗ್ಯವಾಗಿರಲು ಸಾಧ್ಯ. ಈ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ತಾಯಿ ಮಗುವಿನ ಜೀವಕ್ಕೆ ಅಪಾಯ ಖಂಡಿತ. ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಾರದ ಕಾರಣ ನಡುರಸ್ತೆಯಲ್ಲೇ ಮಹಿಳೆಯರು ಸೇರಿ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆ ಈ ಹಿಂದೆ ನಡೆದಿತ್ತು. ಆದರೆ ಇದೀಗ ವೈದ್ಯರೊಬ್ಬರು ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿ ತಾಯಿ, ಮಗುವಿನ ಪಾಲಿಗೆ ದೇವರಾಗಿದ್ದಾರೆ. ಹೌದು, ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆ ತಕ್ಷಣವೇ ಅಲ್ಲೇ ಇದ್ದ ಭಾರತೀಯ ಸೇನೆಯ ವೈದ್ಯ ಡಾ. ರೋಹಿತ್ ಬಚ್‌ವಾಲ್ (Dr Rohit Bachwala) ಅವರು, ಹೇರ್ ಕ್ಲಿಪ್ ಹಾಗೂ ಚಾಕು ಬಳಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ (Jhansi railway station in Uttar Pradesh) ನಡೆದಿದೆ. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ವೈದ್ಯರ ಈ ಕೆಲಸವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಪನ್ವೇಲ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆ ತಕ್ಷಣವೇ ಆ ಮಹಿಳೆಯನ್ನು ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಈ ಮಹಿಳೆಯನ್ನು ವೀಲ್ ಚೇರ್ ನಲ್ಲಿ ಕರೆದುಕೊಂಡು ಹೋಗುವುದನ್ನು ರೈಲಿಗಾಗಿ ಕಾಯುತ್ತಿದ್ದ ಡಾ. ರೋಹಿತ್ ಬಚ್ ವಾಲ್ ನೋಡಿದ್ದಾರೆ. ತಕ್ಷಣವೇ ಸಹಾಯಕ್ಕೆ ಧಾವಿಸಿ, ರೈಲ್ವೆ ಸಿಬ್ಬಂದಿಯ ನೆರವಿನೊಂದಿಗೆ ಹೇರ್ ಕ್ಲಿಪ್ ಹಾಗೂ ಸಣ್ಣದಾದ ಚಾಕು ಬಳಸಿ ಹೆರಿಗೆ ಮಾಡಿಸಿದ್ದಾರೆ.
ಹೌದು, ಪನ್ವೇಲ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಶನಿವಾರ (ಜು. 5) ಮಧ್ಯಾಹ್ನ ಅವರನ್ನು ಝಾನ್ಸಿ ನಿಲ್ದಾಣದಲ್ಲಿ ಇಳಿಸಲಾಯಿತು. ಆ ಬಳಿಕ ಅಲ್ಲೇ ಇದ್ದ ಭಾರತೀಯ ಸೇನೆಯ ವೈದ್ಯರೊಬ್ಬರು ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಈ ಘಟನೆಯ ಬಗ್ಗೆ ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Video : ಹಸಿವಿಲ್ಲದಿದ್ರೂ ಅಮ್ಮ ಮಾಡಿದ ಅಡುಗೆಯನ್ನು ಕಷ್ಟಪಟ್ಟು ತಿನ್ನುತ್ತಿರುವ ಪುಟಾಣಿ
ನನ್ನ ಬಳಿ ಆಪರೇಷನ್‌ಗೆ ಅಗತ್ಯವಾದ ಉಪಕರಣ ಇರಲಿಲ್ಲ. ಹಾಗಂತ ಆಸ್ಪತ್ರೆಗೆ ಸಾಗಿಸುವಷ್ಟು ಸಮಯಾವಕಾಶವೂ ಇರಲಿಲ್ಲ. ಹೀಗಾಗಿ ಇದ್ದ ಉಪಕರಣವನ್ನೇ ಬಳಸಿ ಹೆರಿಗೆ ಮಾಡಿಸಲು ಮುಂದಾದೆ. ನಾನು ನೋಡುವಾಗ ಮಹಿಳೆ ಹೆರಿಗೆ ನೋವಿನಿಂದ ಬಳಲಿ ಕುಸಿದು ಕುಳಿತಿದ್ದರು. ಪ್ರತಿಯೊಂದು ಕ್ಷಣವು ಬಹಳ ಮುಖ್ಯವಾಗಿತ್ತು. ಹೀಗಾಗಿ ಹಿಂದೆ ಮುಂದೆ ಯೋಚಿಸದೇ ಹೆರಿಗೆ ಮಾಡಲು ನಿರ್ಧರಿಸಿದೆ..ಹೆರಿಗೆಯ ನಂತರದಲ್ಲಿ ತಾಯಿ ಮತ್ತು ಮಗುವನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ವೈದ್ಯರಾಗಿ ನಾವು ಎಲ್ಲಾ ಸಂದರ್ಭದಲ್ಲಿಯೂ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು. ಎರಡು ಜೀವಗಳನ್ನು ಉಳಿಸಲು ಸಾಧ್ಯವಾಗಿದ್ದು ನನಗೆ ಸಿಕ್ಕ ದೊಡ್ಡ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಡಾ. ರೋಹಿತ್ ಬಚ್ ವಾಲ್ ಪಿಟಿಐಗೆ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ