ಧಾರವಾಡದ ಮಣ್ಣಲ್ಲಿಯೇ ಸಿದ್ಧೇಶ್ವರ ಸ್ವಾಮೀಜಿಯವರನ್ನು ಕಣ್ತುಂಬಿಕೊಂಡಾಗ
Siddeshwara Swamiji : ಧಾರವಾಡದ ಮಣ್ಣಿನ ಶಾಲೆಯಲ್ಲಿ ಸಿದ್ಧೇಶ್ವರ ಸ್ವಾಮೀಜಿಯವರು ಅರಳಿದ್ದಾರೆ. ಈ ಮೂಲಕ ಕಲಾವಿದ ಮಂಜುನಾಥ ಹಿರೇಮಠ ಅವರು ಧಾರವಾಡಿಗರಿಗೆ ಇದ್ದಲ್ಲಿಯೇ ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.
Viral Video : ಶ್ರದ್ಧಾಂಜಲಿ ಸಲ್ಲಿಸುವುದು ಹೃದಯಕ್ಕೆ ಸಂಬಂಧಿಸಿದ್ದು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಮನ ಸಲ್ಲಿಸುತ್ತಾರೆ. ಕೆಲವರು ಸ್ಥಳಕ್ಕೇ ಹೋಗಿ ಅಂತಿಮ ದರ್ಶನ ಪಡೆಯುತ್ತಾರೆ. ಇನ್ನೂ ಕೆಲವರು ಇದ್ದಲ್ಲಿಯೇ ನಮಿಸುತ್ತಾರೆ. ಆದರೆ ಕಲಾವಂತ ಮನಸ್ಥಿತಿ ಯಾವತ್ತೂ ಭಿನ್ನವಾಗಿಯೇ ಯೋಚಿಸುತ್ತದೆ. ದೂರವಿರುವುದನ್ನು ಹತ್ತಿರ ಮಾಡಿಕೊಳ್ಳುವ ಬಗೆಯ ಬಗ್ಗೆಯೇ ಚಿಂತಿಸುತ್ತಿರುತ್ತದೆ. ಅಂತರಂಗದಲ್ಲಿಯೇ ಧ್ಯಾನಿಸಿ ಅದಕ್ಕೊಂದು ಮೂರ್ತರೂಪ ಕೊಡುವಲ್ಲಿ ಸಾರ್ಥಕತೆ ಪಡೆಯುತ್ತದೆ. ಈಗಿಲ್ಲಿ ಧಾರವಾಡದ ಮಣ್ಣಲ್ಲಿ ಒಡಮೂಡಿದ್ದಾರೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಗಳು
ಶ್ರೀಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯಿಂದಲೇ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡರು ಧಾರವಾಡದ ಮಣ್ಣಿನ ಶಾಲೆಯ ಕಲಾವಿದ ಮಂಜುನಾಥ ಹಿರೇಮಠ. ಒಟ್ಟು 11 ಕಿ.ಗ್ರಾಂ ಜೇಡಿಮಣ್ಣಿನಲ್ಲಿ ಸಿದ್ದೇಶ್ವರ ಸ್ವಾಮಿಗಳ 2 ಅಡಿ ಎತ್ತರದ ಮೂರ್ತಿಯನ್ನು ಬೆಳಗಾಗುವ ಹೊತ್ತಿಗೆ ತಯಾರಿಸಿದ್ದರು. ಇಂದು ಬೆಳಗ್ಗೆ ‘ದೇವರಿದ್ದಲ್ಲಿಗೆ ಹೋಗಲಾಗಲಿಲ್ಲ ಇಲ್ಲಿಯೇ ಅವರನ್ನು ಕಣ್ತುಂಬಿಕೊಂಡು ಮತ್ತೆ ಹುಟ್ಟಿಬನ್ನಿರೆಂದು ಬೇಡಿಕೊಂಡೆವು’ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದರು. ಇವರು ಸ್ವಾಮಿಗಳ ಮೂರ್ತಿಯನ್ನು ತಯಾರಿಸುವ ವಿಡಿಯೋ ಕೂಡ ನೋಡಬಹುದಾಗಿದೆ.
ಆನಂತರ ಬೆಳಗ್ಗೆ ಧಾರವಾಡದ ಕೆಲಗೇರಿಯ ಶ್ರೀ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಮೂರ್ತಿಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರೀಗಳ ಅನೇಕ ಭಕ್ತರುಗಳು ಇಲ್ಲಿ ನೆರೆದಿದ್ದರು. ಮಣ್ಣ ಕಣ ಕಣದೊಳಗೂ ದೇವರ ಕಾಣುವ ಜೀವ ನೀವು. ಅವರ ಮೂರ್ತಿ ನಿಮ್ಮ ಕೈಗಳಲ್ಲರಳಿರುವದು, ನೀವು ಭಾಗ್ಯವಂತರು ಎಂದಿದ್ದಾರೆ ಶಶಿರೇಖಾ ಎಂಬ ಫೇಸ್ಬುಕ್ ಖಾತೆದಾರರು.
ಇದನ್ನೂ ಓದಿ : ಮಾತಿನ ಮಹತ್ವದ ಬಗ್ಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಏನು ಹೇಳಿದ್ದಾರೆ ಕೇಳಿ..!
ಸಿದ್ಧೇಶ್ವರ ಪ್ರವಚನ ಐತಿ ಅಂದ್ರ ನಸುಕಿನ್ಯಾಗ ಎದ್ದು, ಹತ್ತರಿಂದ ನೂರು ಕಿಲೋಮೀಟರ ದೂರದಿಂದ ಬಂದು, ಕೈ ಮುಕ್ಕೊಂಡು ಕೇಳ್ತಿದ್ರು. ಅವರು ಹೇಳಿದ್ದೆಲ್ಲಾ ಇವರಿಗೆ ತಿಳಿತಿತ್ತಾ? ಅವರ ಮಾತಿನ ನಡಕ ಬರುವಂಥಾ ಸಾಕ್ರೆಟಿಸ್, ಅರಿಸ್ಟಾಟಲ್ ಮುಂತಾದ ತತ್ವಜ್ಞಾನಿಗಳು ಇವರಿಗೆ ಗೊತ್ತಿದ್ರಾ? ಇವೆಲ್ಲವುಗಳಿಗೆ ಸ್ವಾಮಿಗಳ ಮಾತು ಅನಕ್ಷರಸ್ಥರಿಂದ ಅಕ್ಷರಸ್ಥ, ಪಂಡಿತ, ವಿದ್ವನ್, ವಾದ್ವಾನ್! ಮಣಿಗಳಿಗೂ ಅವರ ಮಾತು ಅಮೃತ, ಬೆಳಗಿನ ಪ್ರವಚನ ಅತ್ಯಂತ ಯಶಸ್ವಿಯಾಗಿ ನಡೆದದ್ದು ಶ್ರೀ ಸಿದ್ಧೇಶ್ವರರ ಪ್ರವಚನ ಮಾತ್ರ, ಅದು ಮೊದಲು, ಕೊನೆ ಕೂಡ. ಕೆಲವರನ್ನ ಕೇಳಬೇಕು, ಕೆಲವರನ್ನ ನೋಡಬೇಕು, ಸ್ವಾಮಿಗಳು ಮಾತ್ರ ಎರಡು ಕಾರ್ಯಕ್ಕೂ ಯೋಗ್ಯವಂತರು, ಕೇಳಿ ಪುನೀತರಾದವರು, ನೋಡಿ ಧನ್ಯರಾದವರ ಸಂಖ್ಯೆ ಸಣ್ಣದಲ್ಲ. ಇದೀಗ ಧಾರವಾಡದ ಮಣ್ಣಿನ ಶಾಲೆಯ ಮೂಲಕ ಅವರನ್ನು ಕಣ್ಮನ ತುಂಬಿಕೊಂಡಿದ್ದೇವೆ ಎಂದಿದ್ದಾರೆ ಧಾರವಾಡದ ರಾಜಕುಮಾರ ಮಡಿವಾಳರ.
ಮಹಾನ್ ವ್ಯಕ್ತಿಗಳು ಎಂದಿಗೂ ಮನಸಿನಿಂದ ಮರೆಯಾಗಲಾರರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:44 pm, Tue, 3 January 23