ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ 3,000 ಭಾರತೀಯರಿಗೆ ವೀಸಾ ನೀಡಲು ರಿಷಿ ಸುನಕ್ ಸಮ್ಮತಿ
ಜಿ-20 ಶೃಂಗಸಭೆಯ 17ನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಿಷಿ ಸುನಕ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ವೀಸಾ ನೀಡಿಕೆ ಯೋಜನೆ ಬಗ್ಗೆ ಬ್ರಿಟನ್ ಸರ್ಕಾರ ನಿರ್ಧಾರ ಪ್ರಕಟಿಸಿದೆ.
ಲಂಡನ್: ಭಾರತದ 3,000 ಯುವ ವೃತ್ತಿಪರರಿಗೆ ಪ್ರತಿ ವರ್ಷ ವೀಸಾ ನೀಡಲು ಬ್ರಿಟನ್ನ ಪ್ರಧಾನಿ (UK Prime Minister) ರಿಷಿ ಸುನಕ್ (Rishi Sunak) ಸಮ್ಮತಿಸಿದ್ದಾರೆ. ಇದರೊಂದಿಗೆ, ಕಳೆದ ವರ್ಷ ಸಹಿ ಮಾಡಲಾದ ಯುಕೆ-ಭಾರತ ವಲಸೆ ಮತ್ತು ಪ್ರಯಾಣದ ಸಹಭಾಗಿತ್ವ ಒಪ್ಪಂದ ಮತ್ತಷ್ಟು ಗಟ್ಟಿಯಾಗಿದೆ. ವೀಸಾ ನೀಡಿಕೆ ಯೋಜನೆಯ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರವಾಗಿರಲಿದೆ ಭಾರತ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ.
ಇಂದು ಯುಕೆ-ಭಾರತ ಯುವ ವೃತ್ತಿಪರರ ಯೋಜನೆ ದೃಢಪಟ್ಟಿದೆ. ಈ ಯೋಜನೆಯ ಅಡಿಯಲ್ಲಿ, ಪದವಿ ಪಡೆದ 18ರಿಂದ 30 ವರ್ಷ ವಯಸ್ಸಿನ ಭಾರತೀಯರಿಗೆ ಪ್ರತಿ ವರ್ಷ 3,000 ವೀಸಾ ನೀಡಲಾಗುವುದು. ಈ ಯೋಜನೆಯಡಿ ವೀಸಾ ಪಡೆದವರು ಬ್ರಿಟನ್ಗೆ ಬಂದು ಇಲ್ಲಿ ಕೆಲಸ ಮಾಡಬಹುದಾಗಿದೆ ಹಾಗೂ 2 ವರ್ಷಗಳ ವರೆಗೆ ವಾಸಿಸಬಹುದಾಗಿದೆ ಎಂದು ಬ್ರಿಟನ್ ಪ್ರಧಾನಿಗಳ ಕಾರ್ಯಾಲಯ ಟ್ವೀಟ್ ಮೂಲಕ ತಿಳಿಸಿದೆ.
ಮೋದಿ ಭೇಟಿ ಬೆನ್ನಲ್ಲೇ ಕ್ರಮ
ಜಿ-20 ಶೃಂಗಸಭೆಯ 17ನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಿಷಿ ಸುನಕ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ವೀಸಾ ನೀಡಿಕೆ ಯೋಜನೆ ಬಗ್ಗೆ ಬ್ರಿಟನ್ ಸರ್ಕಾರ ನಿರ್ಧಾರ ಪ್ರಕಟಿಸಿದೆ. ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ಬಳಿಕ ಎರಡೂ ದೇಶಗಳ ಪ್ರಧಾನಿಗಳು ಇದೇ ಮೊದಲ ಬಾರಿ ಭೇಟಿಯಾಗಿದ್ದಾರೆ.
‘ಜಿ-20 ಶೃಂಗಸಭೆಯ ಮೊದಲ ದಿನ ಬಾಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ’ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿತ್ತು.
ಯೋಜನೆಯ ಆರಂಭವು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ಎರಡೂ ದೇಶಗಳ ಆರ್ಥಿಕತೆಯನ್ನು ಬಲಪಡಿಸಲು ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಲವಾದ ಸಂಪರ್ಕಗಳನ್ನು ಹೊಂದುವ ಬ್ರಿಟನ್ನ ಬದ್ಧತೆಗೆ ಪೂರಕವಾಗಿದೆ ಎಂದು ಅಲ್ಲಿನ ಸರ್ಕಾರದ ಪ್ರಕಟಣೆ ತಿಳಿಸಿದೆ.
ಬ್ರಿಟನ್ನ ನೂತನ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ ಕಳೆದ ತಿಂಗಳು ಆಯ್ಕೆಯಾಗಿದ್ದಾರೆ. ಬ್ರಿಟನ್ ಅರ್ಥವ್ಯವಸ್ಥೆ ಸುಧಾರಿಸಲು ಸಾಧ್ಯವಾಗದ್ದರಿಂದ ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸುನಕ್ ಅವರನ್ನು ಆಯ್ಕೆ ಮಾಡಲಾಯಿತು. ಸುನಕ್ ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಲ್ಲೇ ಅವರಿಗೆ ಮೋದಿ ಶುಭಾಶಯ ಕೋರಿದ್ದರು. ಉಭಯ ದೇಶಗಳ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ಸುನಕ್ ಜತೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಅವರು ಹೇಳಿದ್ದರು. ಆ ಬಳಿಕ ಉಭಯ ನಾಯಕರು ಇದೇ ಮೊದಲ ಬಾರಿ ಭೇಟಿಯಾಗಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ