ಅಕ್ಕ ಸಿಲ್ವರ್ ಜುಬಿಲಿ: ಮಿಚಿಗನ್ ವೀರಗಾಸೆ ತಂಡದ ಪ್ರದರ್ಶನಕ್ಕೆ ಪ್ರೇಕ್ಷಕರು ಫಿದಾ
ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ ಸಿಲ್ವರ್ ಜುಬಿಲಿ ಸಮಾರಂಭದಲ್ಲಿ ಮಿಚಿಗನ್ ವಿಎಸ್‌ಎನ್‌ಎ ಕೂಟದ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ವೀರಗಾಸೆ ನೃತ್ಯ ಹಾಗೂ ಬಸವ ತತ್ವಗಳ ಸಂದೇಶವು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಡೊಳ್ಳಿನ ನಾದ, ತಾಳದ ಲಯ ಹಾಗೂ ವೀರಗಾಸೆಯ ಚೈತನ್ಯಭರಿತ ಹೆಜ್ಜೆಗಳು ಸಭಾಂಗಣದಲ್ಲಿ ವೀರತ್ವ ಮತ್ತು ಭಕ್ತಿಯ ವಾತಾವರಣವನ್ನು ಸೃಷ್ಟಿಸಿದ್ದವು.

ಫಿಲಡೆಲ್ಫಿಯಾ, ಸೆಪ್ಟೆಂಬರ್ 11: ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ ಸಿಲ್ವರ್ ಜುಬಿಲಿ ಸಮಾರಂಭದಲ್ಲಿ ಮಿಚಿಗನ್ ವಿಎಸ್‌ಎನ್‌ಎ ವೀರಗಾಸೆ ತಂಡದ ಭರ್ಜರಿ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು. ಕರ್ನಾಟಕದ ವೀರ ಪರಂಪರೆ, ಭಕ್ತಿ ಹಾಗೂ ಬಸವ ತತ್ವಗಳ ಸಂದೇಶವನ್ನು ಒಗ್ಗೂಡಿಸಿದ ಈ ವಿಶಿಷ್ಟ ಪ್ರದರ್ಶನವು ಸಮಾರಂಭದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳಲ್ಲಿ ಒಂದಾಗಿ ಗಮನ ಸೆಳೆಯಿತು.
ಶಿಸ್ತು, ಭಕ್ತಿ ಮತ್ತು ವೀರತ್ವದ ಅನಾವರಣ
ಕರ್ನಾಟಕದ ಹೆಮ್ಮೆಯ ಜಾನಪದ ಹಾಗೂ ದೈವಿಕ ನೃತ್ಯ ಪ್ರಕಾರವಾದ ವೀರಗಾಸೆಯನ್ನು ಮಿಚಿಗನ್ ವಿಎಸ್‌ಎನ್‌ಎ ಕೂಟದ ಹವ್ಯಾಸಿ ಕಲಾವಿದರಾದ ಆದರ್ಶ್ ಮಧು, ಭರತ್ ಬಸವರಾಜು, ದಿವ್ಯಾ ನಟರಾಜ್, ಗುರುಮೂರ್ತಿ ಗೌಡರ್, ಹರೀಶ್ ನಾಗರಾಜ್, ಕಲ್ಲೇಶ್ ಕಲ್ಮನೆ, ರುದ್ರೇಶ್ ಏಕಾಂತಪ್ಪ ಹಾಗೂ ವೀರೇಶ್ ಲೋಕಪ್ಪ ಅವರು ಅತ್ಯಂತ ಶಿಸ್ತು, ಉತ್ಸಾಹ ಮತ್ತು ಭಕ್ತಿಭಾವದಿಂದ ಪ್ರದರ್ಶಿಸಿದರು. ಡೊಳ್ಳಿನ ನಾದ, ತಾಳದ ಲಯ ಹಾಗೂ ವೀರಗಾಸೆಯ ಚೈತನ್ಯಭರಿತ ಹೆಜ್ಜೆಗಳು ಸಭಾಂಗಣದಲ್ಲಿ ವೀರತ್ವ ಮತ್ತು ಭಕ್ತಿಯ ವಾತಾವರಣವನ್ನು ಸೃಷ್ಟಿಸಿದ್ದವು. ವೀರಭದ್ರ ಸ್ವಾಮಿಯ ಪರಾಕ್ರಮವನ್ನು ಕಲಾತ್ಮಕವಾಗಿ ಬಿಂಬಿಸಿದ ತಂಡದ ಪ್ರದರ್ಶನಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ: ಶ್ರಾವಣ ಮಾಸದ ಕೊನೆಯ ಶುಕ್ರವಾರದ ಹಿನ್ನೆಲೆ ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ವೀರಗಾಸೆಯೊಂದಿಗೆ ಬಸವ ತತ್ವಗಳ ಸಂದೇಶ
ಬಸವಾದಿ ಶರಣರ ವಚನಗಳನ್ನು ಅರ್ಥಪೂರ್ಣವಾಗಿ ಪ್ರಸ್ತುತಪಡಿಸುವ ಮೂಲಕ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸಿದ್ದು, ಪ್ರದರ್ಶನದ ಮತ್ತೊಂದು ವಿಶೇಷತೆಯಾಗಿತ್ತು.
ಅಮೆರಿಕದ ನೆಲದಲ್ಲೂ ಕನ್ನಡ ಸಂಸ್ಕೃತಿಯ ಕಂಪು
ವೃತ್ತಿಯಲ್ಲಿ ಇಂಜಿನಿಯರ್‌ಗಳಾಗಿರುವ ಈ ಕಲಾವಿದರು ಮತ್ತು ಅವರ ಕುಟುಂಬಗಳು ಅಮೆರಿಕದಲ್ಲಿ ತಮ್ಮ ವೃತ್ತಿಜೀವನದ ಜೊತೆಗೆ ಕರ್ನಾಟಕದ ಸಂಪ್ರದಾಯ, ಕನ್ನಡ ಸಂಸ್ಕೃತಿ, ವೀರಶೈವ ಪರಂಪರೆ ಹಾಗೂ ಬಸವ ತತ್ವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವೀರಗಾಸೆ ಕಲೆಯನ್ನು ಅಭ್ಯಾಸ ಮಾಡಿ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ.
ಸಮಾರಂಭದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




