ಅಮೆರಿಕದ ಹಿಂದೂ ದೇವಾಲಯದ ಮೇಲೆ ದಾಳಿ ಸಂಚು: ಯುವ ಪೀಳಿಗೆಯ ಬಗ್ಗೆ ಸದ್ಗುರು ಕಳವಳ, ದ್ವೇಷದ ವಿರುದ್ಧ ಎಚ್ಚರಿಕೆ
ಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ದಾಳಿ ಸಂಚು ಪ್ರಕರಣ ಆತಂಕ ಮೂಡಿಸಿದೆ. 19 ವರ್ಷದ ಆರೋಪಿ ಭಾರತೀಯರ ವಿರುದ್ಧ ದ್ವೇಷ ಹೊಂದಿದ್ದನು ಎನ್ನಲಾಗುತ್ತಿದೆ. ಈ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿದ್ದು, ಯುವಜನತೆಯಲ್ಲಿ ಹೆಚ್ಚುತ್ತಿರುವ ದ್ವೇಷ ಮನೋಭಾವದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಮಾಜವು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಜವಾಬ್ದಾರಿ ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ವಾಷಿಂಗ್ಟನ್: ಅಮೆರಿಕದ ಇಲಿನಾಯ್ಸ್ ರಾಜ್ಯದ ಅರೋರಾ ಪ್ರದೇಶದಲ್ಲಿರುವ ಪ್ರಮುಖ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಪ್ರಕರಣ ಆತಂಕ ಮೂಡಿಸಿದೆ. ಈ ಪ್ರಕರಣದಲ್ಲಿ 19 ವರ್ಷದ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂಬ ಯುವಕನ ವಿರುದ್ಧ ಆರೋಪ ಕೇಳಿಬಂದಿದ್ದು, ಘಟನೆಯು ಅಮೆರಿಕದಲ್ಲಿರುವ ಹಿಂದೂ ಸಮುದಾಯದಲ್ಲಿ ಕಳವಳಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್, ಯುವಜನತೆಯಲ್ಲಿ ದ್ವೇಷದ ಮನೋಭಾವ ಬೆಳೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮುಂದಿನ ಪೀಳಿಗೆಯನ್ನು ಬೆಳೆಸುವಲ್ಲಿ ಸಮಾಜದ ಜವಾಬ್ದಾರಿಯನ್ನು ನೆನಪಿಸಿರುವ ಅವರು, ಮಾನವೀಯತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮನೋಭಾವ ಬೆಳೆಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಭಾರತೀಯರ ವಿರುದ್ಧ ದ್ವೇಷದ ಆರೋಪ: ಏನಿದು ಪ್ರಕರಣ?
ವರದಿಗಳ ಪ್ರಕಾರ, ಆರೋಪಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಶ್ವೇತವರ್ಣೀಯರ ಶ್ರೇಷ್ಠತೆ (ವೈಟ್ ಸುಪ್ರೀಮಸಿಸ್ಟ್) ಯನ್ನು ಪ್ರತಿಪಾದಿಸುವ ಮನೋಭಾವ ಹೊಂದಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ. ಭಾರತೀಯ ಮೂಲದ ಜನರ ವಿರುದ್ಧ ದ್ವೇಷ ವ್ಯಕ್ತಪಡಿಸಿದ್ದ ಆತ, ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಹೆಚ್ಚಿನ ಸಂಖ್ಯೆಯ ಜನರನ್ನು ಕೊಲ್ಲುವ ಉದ್ದೇಶ ಹೊಂದಿದ್ದನೆಂಬ ಆರೋಪ ಕೇಳಿಬಂದಿದೆ.
ಇದಲ್ಲದೆ, ಆರೋಪಿ “Why I Fought: A.K.A. (Aurora Shooter’s Manifesto)” ಎಂಬ ಶೀರ್ಷಿಕೆಯ ಎಂಟು ಪುಟಗಳ ದಾಖಲೆಯನ್ನು ಸಿದ್ಧಪಡಿಸಿದ್ದನೆಂದೂ ವರದಿಯಾಗಿದೆ. ಈ ದಾಖಲೆಯಲ್ಲಿ ಭಾರತೀಯರು, ಯೆಹೂದಿಗಳು ಮತ್ತು ಆಫ್ರಿಕನ್-ಅಮೆರಿಕನ್ನರ ವಿರುದ್ಧ ಜನಾಂಗೀಯ ದ್ವೇಷದ ಹೇಳಿಕೆಗಳಿದ್ದವು ಎನ್ನಲಾಗಿದೆ.
ಯುವಕರಲ್ಲಿ ದ್ವೇಷದ ಮನೋಭಾವ: ಸದ್ಗುರು ಕಳವಳ
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸದ್ಗುರು, ದ್ವೇಷವು ಯುವ ಮನಸ್ಸುಗಳನ್ನು ಯಾವ ಮಟ್ಟಿಗೆ ವಿಷಪೂರಿತಗೊಳಿಸಬಹುದು ಎಂಬುದನ್ನು ವಿವರಿಸಿದ್ದಾರೆ. ತಮ್ಮಿಂದ ಭಿನ್ನವಾಗಿರುವವರನ್ನು ಕೊಲ್ಲಲು ಸಂಚು ರೂಪಿಸುವ ಹಂತಕ್ಕೆ ಯುವಕನೊಬ್ಬ ತಲುಪಿರುವುದು, ಮುಂದಿನ ಪೀಳಿಗೆಯನ್ನು ಬೆಳೆಸುವಲ್ಲಿ ಸಮಾಜ ಎಲ್ಲಿ ಎಡವುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಅರೋರಾ ದಾಳಿಯನ್ನು ತಡೆಯಲು ತ್ವರಿತವಾಗಿ ಕಾರ್ಯಪ್ರವೃತ್ತರಾದವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ದ್ವೇಷ ಮತ್ತು ಹಿಂಸೆಗೆ ಅವಕಾಶ ನೀಡದೆ, ಸಮಾಜದಲ್ಲಿ ಪರಸ್ಪರ ಗೌರವ ಹಾಗೂ ಸೌಹಾರ್ದತೆಯನ್ನು ಬೆಳೆಸಬೇಕೆಂಬ ಸಂದೇಶವನ್ನು ಅವರು ನೀಡಿದ್ದಾರೆ.
When a young life becomes so poisoned by hate that he plans to kill those he sees as different, it reflects our failure in nurturing the next generation. It is most important that we cultivate a sense of inclusion and work toward raising human consciousness. Our deep gratitude to those who acted promptly to prevent the Aurora attack. – Sg
— Sadhguru (@SadhguruJV) October 16, 2026
ಇದನ್ನೂ ಓದಿ: ಭಾರತೀಯರ ಹತ್ಯೆಗೆ ರೈಫಲ್ ಹಿಡಿದು ಅಮೆರಿಕದ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್: ಗನ್ ಜಾಮ್ ಆಗಿದ್ದರಿಂದ ತಪ್ಪಿದ ಭಾರೀ ದುರಂತ
ಯುವ ಪೀಳಿಗೆಗೆ ಮಾನವೀಯ ಮೌಲ್ಯಗಳ ಪಾಠ ಅಗತ್ಯ:
ಜಾತಿ, ಧರ್ಮ, ಜನಾಂಗ ಅಥವಾ ದೇಶದ ಆಧಾರದ ಮೇಲೆ ವ್ಯಕ್ತಿಗಳ ವಿರುದ್ಧ ದ್ವೇಷ ಬೆಳೆಸುವುದು ಸಮಾಜದ ಶಾಂತಿ ಮತ್ತು ಸಾಮರಸ್ಯಕ್ಕೆ ದೊಡ್ಡ ಸವಾಲಾಗಿದೆ. ಇಂತಹ ಮನೋಭಾವ ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗುವ ಸಾಧ್ಯತೆಯಿರುವುದರಿಂದ, ಮಕ್ಕಳಿಗೆ ಮತ್ತು ಯುವಜನತೆಗೆ ಬಾಲ್ಯದಿಂದಲೇ ಸಹನೆ, ಪರಸ್ಪರ ಗೌರವ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ. ಕುಟುಂಬ, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜವು ಯುವಜನತೆಯ ಮನೋಭಾವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೇವಲ ಕಾನೂನು ಕ್ರಮಗಳಿಗೆ ಸೀಮಿತವಾಗದೆ, ದ್ವೇಷದ ಮನೋಭಾವವನ್ನು ತಡೆಗಟ್ಟಲು ಜಾಗೃತಿ ಮೂಡಿಸುವುದು ಮತ್ತು ಎಲ್ಲ ಸಮುದಾಯಗಳ ನಡುವೆ ಸೌಹಾರ್ದತೆಯನ್ನು ಬಲಪಡಿಸುವುದು ಕೂಡ ಮುಖ್ಯವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sun, 18 October 26




