ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ರಾಜೀನಾಮೆ
ಶೇಖ್ ಹಸೀನಾ ಅವರ ನಿಕಟವರ್ತಿಯಾಗಿದ್ದ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಸಂಸತ್ ಸ್ಪೀಕರ್‌ಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ 2023ರ ಏಪ್ರಿಲ್ 24ರಂದು ಬಾಂಗ್ಲಾದೇಶದ 22ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾಗಿ ಮತ್ತು ಸಂವಿಧಾನಕ್ಕೆ ಅನುಗುಣವಾಗಿ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿರುವುದಾಗಿ ಶಹಾಬುದ್ದೀನ್ ತಿಳಿಸಿದ್ದಾರೆ.

ಢಾಕಾ, ಜುಲೈ 24: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿಕಟವರ್ತಿಯಾಗಿದ್ದ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ತೀವ್ರ ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 76 ವರ್ಷದ ಶಹಾಬುದ್ದೀನ್ ಏಪ್ರಿಲ್ 2023ರಿಂದ ನಾಮಕಾವಸ್ತೆ ಎಂಬಂತೆ ಬಾಂಗ್ಲಾದೇಶದ ಅಧ್ಯಕ್ಷೀಯ ಹುದ್ದೆಯಲ್ಲಿದ್ದರು. 2024ರಲ್ಲಿ ಅವರ ಆಡಳಿತದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯ ನಂತರ ಶೇಖ್ ಹಸೀನಾ (Sheikh Hasina) ಭಾರತಕ್ಕೆ ಪಲಾಯನ ಮಾಡಿದ ನಂತರದ ಅವಧಿಯಲ್ಲೂ ಶಹಾಬುದ್ದೀನ್ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದರು.
ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆರೋಗ್ಯ ತೀವ್ರವಾಗಿ ಕ್ಷೀಣಿಸಿದೆ ಎಂದು ಶಹಾಬುದ್ದೀನ್ ತಿಳಿಸಿದ್ದಾರೆ. ತಾವು ಆಟೋನಾಮಿಕ್ ನ್ಯೂರೋಪತಿ ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇದು ತಮ್ಮ ಶಾರೀರಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ರಾಷ್ಟ್ರದ ಮುಖ್ಯಸ್ಥರಾಗಿ ಶಹಾಬುದ್ದೀನ್ ಅವರು ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿದ್ದರಾದರೂ, 17.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ಮುಸ್ಲಿಂ ಪ್ರಾಬಲ್ಯದ ದೇಶದಲ್ಲಿ ಕಾರ್ಯಾಂಗದ ಅಧಿಕಾರವು ಪ್ರಧಾನಿ ಮತ್ತು ಸಂಪುಟದ ಬಳಿಯಲ್ಲೇ ಇರುತ್ತದೆ.
ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು? ಸರ್ಕಾರದ ಉತ್ತರ ಇಲ್ಲಿದೆ
ಮಾಜಿ ನ್ಯಾಯಾಧೀಶರೂ ಆಗಿದ್ದ ಶಹಾಬುದ್ದೀನ್, 2023ರ ಏಪ್ರಿಲ್ನಲ್ಲಿ ಬಾಂಗ್ಲಾದೇಶದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವು 2010ರಲ್ಲಿ ಸ್ಥಾಪಿಸಿದ್ದ ‘ಇಂಟರ್ ನ್ಯಾಷನಲ್ ಕ್ರೈಮ್ಸ್ ಟ್ರಿಬ್ಯೂನಲ್-ಬಾಂಗ್ಲಾದೇಶ’ ನಂತರದ ದಿನಗಳಲ್ಲಿ ಶೇಖ್ ಹಸೀನಾ ಅವರಿಗೇ ಶಿಕ್ಷೆ ವಿಧಿಸಿತ್ತು. ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಈ ಟ್ರಿಬ್ಯೂನಲ್‌ನ ಕಾಯಿದೆಗೆ ತಿದ್ದುಪಡಿ ತಂದು, ಮಾಜಿ ಅವಾಮಿ ಲೀಗ್ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿನ ಮಾನವೀಯತೆಯ ವಿರುದ್ಧದ ಅಪರಾಧಗಳ ವಿಚಾರಣೆ ನಡೆಸಲು ಹೆಚ್ಚಿನ ಅಧಿಕಾರ ನೀಡಿತು.
ಇನ್ನು, ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಈ ವರ್ಷದ ಅಂತ್ಯದೊಳಗೆ ಬಾಂಗ್ಲಾದೇಶಕ್ಕೆ ಮರಳಲು ಯೋಜಿಸಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಬಾಂಗ್ಲಾದೇಶ ಸರ್ಕಾರ, ಅವರ ಆಗಮನವನ್ನು ಸ್ವಾಗತಿಸುವುದಾಗಿ ಹೇಳಿತ್ತಾದರೂ ದೇಶಕ್ಕೆ ಬಂದ ತಕ್ಷಣ ಅವರು ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: “ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ”; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ
ಶಹಾಬುದ್ದೀನ್ ಅವರ ರಾಜೀನಾಮೆಯಿಂದಾಗಿ, ಈ ವರ್ಷಾಂತ್ಯದಲ್ಲಿ ದೇಶಕ್ಕೆ ಮರಳಲು ಯೋಜಿಸುತ್ತಿರುವ ಶೇಖ್ ಹಸೀನಾ ಅವರಿಗೆ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ ಏಕೈಕ ಬೆಂಬಲಿಗನ ರಕ್ಷಣೆಯೂ ಇಲ್ಲದಂತಾಗಿದೆ. 2024ರಲ್ಲಿ ಅವರ ಸರ್ಕಾರವನ್ನು ಪತನಗೊಳಿಸಿದ ಹಿಂಸಾತ್ಮಕ ವಿದ್ಯಾರ್ಥಿ ದಂಗೆಯ ನಂತರ ಅವರ ‘ಅವಾಮಿ ಲೀಗ್’ ಪಕ್ಷವನ್ನು ನಿಷೇಧಿಸಲಾಗಿದೆ. ಆ ಪಕ್ಷದ ಅನೇಕ ನಾಯಕರು ಮತ್ತು ಕಾರ್ಯಕರ್ತರು ಜೈಲುಪಾಲಾಗಿದ್ದಾರೆ ಹಾಗೂ ತಲೆಮರೆಸಿಕೊಂಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




