ಪಾಕಿಸ್ತಾನದೊಂದಿಗೆ F-16 ಡೀಲ್ಗೆ ಭಾರತದ ಆಕ್ಷೇಪ: ಅಮೆರಿಕ ಪ್ರತಿಕ್ರಿಯಿಸಿದ್ದು ಹೀಗೆ
ಭಾರತ ಮತ್ತು ಪಾಕಿಸ್ತಾನಗಳು ಅಮೆರಿಕಕ್ಕೆ ವಿಭಿನ್ನ ರೀತಿಯಲ್ಲಿ ಮಿತ್ರದೇಶಗಳಾಗಿವೆ ಎಂದು ಅಮೆರಿಕ ತನ್ನ ತೀರ್ಮಾನವನ್ನು ಸಮರ್ಥಿಸಿಕೊಂಡಿದೆ.
ವಾಷಿಂಗ್ಟನ್: ಅಮೆರಿಕ-ಪಾಕ್ ನಡುವೆ ಎಫ್-16 ಯುದ್ಧವಿಮಾನ (F-16 Fighter Jet) ಪೂರೈಕೆಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟಿರುವುದು ಭಾರತಕ್ಕೆ ಅಸಮಾಧಾನ ಉಂಟು ಮಾಡಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ (S Jaishankar) ವಿಚಾರವನ್ನು ಬಹಿರಂಗಪಡಿಸಿದ ನಂತರ ಅಮೆರಿಕ ಸರ್ಕಾರವು ಸೋಮವಾರ (ಸೆ 26) ಪ್ರತಿಕ್ರಿಯಿಸಿದೆ. ಭಾರತ ಮತ್ತು ಪಾಕಿಸ್ತಾನಗಳು ಅಮೆರಿಕಕ್ಕೆ ವಿಭಿನ್ನ ರೀತಿಯಲ್ಲಿ ಮಿತ್ರದೇಶಗಳಾಗಿವೆ ಎಂದು ಅಮೆರಿಕ ತನ್ನ ತೀರ್ಮಾನವನ್ನು ಸಮರ್ಥಿಸಿಕೊಂಡಿದೆ.
ಪಾಕಿಸ್ತಾನ ಸೇನೆಯು ಭಯೋತ್ಪಾದನೆ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಈ ಯುದ್ಧವಿಮಾನಗಳು ನೆರವಾಗುತ್ತವೆ ಎಂಬ ಅಮೆರಿಕದ ವಾದವನ್ನು ಜೈಶಂಕರ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಎಫ್-16 ಫೈಟರ್ ಜೆಟ್ಗಳನ್ನು ಎಲ್ಲಿ ಮತ್ತು ಯಾರ ವಿರುದ್ಧ ಬಳಸಲಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ, ‘ನೀವು ಎಫ್-16 ಬಳಕೆಯ ಬಗ್ಗೆ ಹೀಗೆ ಪ್ರತಿಕ್ರಿಯಿಸುವ ಮೂಲಕ ಯಾರನ್ನೂ ಮೂರ್ಖರನ್ನಾಗಿಸಲು ಆಗುವುದಿಲ್ಲ’ ಎಂದು ಪರೋಕ್ಷವಾಗಿ ಅಮೆರಿಕ ಆಡಳಿತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಜೈಶಂಕರ್ ಆಕ್ಷೇಪ ವ್ಯಕ್ತಪಡಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ತಮ್ಮ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದರು. ‘ಪಾಕಿಸ್ತಾನ ಮತ್ತು ಭಾರತದೊಂದಿಗೆ ನಮ್ಮ (ಅಮೆರಿಕದ) ಸಂಬಂಧವು ಪ್ರತ್ಯೇಕವಾದ ವಿಚಾರಗಳಾಗಿವೆ. ಭಾರತ ಮತ್ತು ಪಾಕಿಸ್ತಾನಗಳ ಪರಸ್ಪರ ಸಂಬಂಧ ಹೇಗಿದೆ ಎಂಬುದುನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎರಡೂ ದೇಶಗಳು ನಮ್ಮೊಂದಿಗೆ ಸೌಹಾರ್ದ ಸಂಬಂಧ ಹೊಂದಿವೆ. ವಿಭಿನ್ನ ರೀತಿಯಲ್ಲಿ ಎರಡೂ ದೇಶಗಳು ನಮಗೆ ಹತ್ತಿರದ ದೇಶಗಳಾಗಿವೆ’ ಎಂದು ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವ ಅರ್ಥದ ಹೇಳಿಕೆ ನೀಡಿದ್ದರು.
‘ಭಾರತದೊಂದಿಗಿನ ಸಂಬಂಧವೇ ಆಗಲಿ, ಪಾಕಿಸ್ತಾನದೊಂದಿಗಿನ ಸಂಬಂಧವೇ ಆಗಲಿ, ಸ್ವತಂತ್ರವಾಗಿ ನಿಂತಿವೆ. ಎರಡೂ ದೇಶಗಳೊಂದಿಗೆ ಅಮೆರಿಕ ಹಲವು ಮೌಲ್ಯಗಳನ್ನು ಹಂಚಿಕೊಳ್ಳುತ್ತದೆ’ ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ, ಬೈಡೆನ್ ಆಡಳಿತವು ಪಾಕಿಸ್ತಾನಕ್ಕೆ 45 ಕೋಟಿ ಡಾಲರ್ ಮೊತ್ತದ ಎಫ್ -16 ಫೈಟರ್ ಜೆಟ್ ಒದಗಿಸುವ ಪ್ರಸ್ತಾವವನ್ನು ಅಮೆರಿಕ ಸರ್ಕಾರವು ಅನುಮೋದಿಸಿತ್ತು. ಅಫ್ಘಾನಿಸ್ತಾದ ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ಸಂಘಟನೆಗಳಿಗೆ ಸುರಕ್ಷಿತ ನೆಲೆ ಒದಗಿಸಿದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ನೆರವು ಸ್ಥಗಿತಗೊಳಿಸಿದ್ದರು.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳ ನಡುವೆ ಉತ್ತಮ ಸಂಬಂಧ ಬೆಳೆಯಲು ನಾವು ಸಹಕರಿಸುತ್ತೇವೆ. ಅಫ್ಘಾನಿಸ್ತಾನದಲ್ಲಿ ಅಸ್ಥಿರತೆ ಮತ್ತು ಹಿಂಸಾಚಾರ ಉಳಿಯುವುದು ಪಾಕಿಸ್ತಾನದ ಹಿತಾಸಕ್ತಿಗೆ ಪೂರಕವಾದುದಲ್ಲ. ಅಫ್ಘಾನಿಸ್ತಾನದ ಜನರಿಗೆ ಬೆಂಬಲ ನೀಡುವ ಕುರಿತು ಪಾಕಿಸ್ತಾನದೊಂದಿಗೆ ನಾವು ನಿಯಮಿತವಾಗಿ ಚರ್ಚಿಸುತ್ತೇವೆ. ಅಫ್ಘಾನಿಸ್ತಾನ ಜನರ ಜೀವನ ಮತ್ತು ಜೀವನೋಪಾಯ, ಬದುಕಿನ ಸ್ಥಿತಿಗತಿ ಸುಧಾರಿಸಲು ಅಮೆರಿಕ ಸತತ ಪ್ರಯತ್ನ ಮುಂದುವರಿಸುತ್ತದೆ. ಈ ಹಿಂದೆ ಕೊಟ್ಟಿರುವ ಮಾತುಗಳಿಗೆ ಬದ್ಧತೆ ತೋರಿಸಲು ತಾಲಿಬಾನ್ ಮೇಲೆ ಒತ್ತಡ ಹೇರುತ್ತೇವೆ ಎಂದು ನೆಡ್ ಪ್ರೈಸ್ ಹೇಳಿದರು.
ಪಾಕಿಸ್ತಾನದಲ್ಲಿ ಪ್ರವಾಹದಿಂದ ಆಗಿರುವ ಅನಾಹುತವನ್ನು ನಾವು ಗಮನಿಸಿದ್ದೇವೆ. ಪರಿಹಾರಕ್ಕಾಗಿ ಕೋಟ್ಯಂತರ ಡಾಲರ್ ನೆರವು ಒದಗಿಸಿದ್ದೇವೆ ಎಂದು ಹೇಳಿದರು. ಪ್ರವಾಹದಿಂದ ಪಾಕಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಹೇಳಿದ ಅವರು ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.
Published On - 8:53 am, Tue, 27 September 22