Quad Summit: ಅಮೆರಿಕದಲ್ಲಿ ಸೆಪ್ಟೆಂಬರ್ 21ರಂದು ಕ್ವಾಡ್ ಶೃಂಸಗಭೆ, ಪ್ರಧಾನಿ ಮೋದಿ ಭಾಗಿ
ಅಮೆರಿಕದಲ್ಲಿ ಮುಂದಿನ ವಾರ ನಡೆಯಲಿರುವ ಕ್ವಾಡ್ ಶೃಂಗಸಭೆಗೆ ಅಮೆರಿಕ ಆತಿಥ್ಯ ವಹಿಸಲಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಡೆಲವೇರ್ ನಿವಾಸದಲ್ಲಿ ಶೃಂಗಸಭೆ ಆಯೋಜಿಸಲಾಗುವುದು ಎಂದು ಶ್ವೇತ ಭವನ ಮಾಹಿತಿ ನೀಡಿದೆ.ಕ್ವಾಡ್ ಸದಸ್ಯ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ 21ರಂದು ಕ್ವಾಡ್ ಶೃಂಗಸಭೆ ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi) ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಕಿಶಿದಾ ಫ್ಯೂಮಿಯೊ ಅವರನ್ನು ಸ್ವಾಗತಿಸಲು ಬೈಡನ್ ಎದುರು ನೋಡುತ್ತಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಮುಂದಿನ ಕ್ವಾಡ್ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ.
2021 ರಲ್ಲಿ, ಶ್ವೇತಭವನದಲ್ಲಿ ಕ್ವಾಡ್ ನಾಯಕರ ಸಮ್ಮೇಳನವನ್ನು ನಡೆಸಲಾಯಿತು. ಅಂದಿನಿಂದ ಪ್ರತಿ ವರ್ಷ ಈ ಸಮ್ಮೇಳನ ನಡೆಯುತ್ತಿದೆ. ಕ್ವಾಡ್ ಶೃಂಗಸಭೆಯಲ್ಲಿ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶ, ಮಿಲಿಟರಿ, ಆರೋಗ್ಯ, ನೈಸರ್ಗಿಕ ವಿಕೋಪ, ಸಾಗರ ಭದ್ರತೆ, ಗುಣಮಟ್ಟದ ಮೂಲಸೌಕರ್ಯ, ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ.
ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಡೆಲವೇರ್‌ನ ವಿಲ್ಮಿಂಗ್ಟನ್‌ನ ನಿವಾಸದಲ್ಲಿ ಕ್ವಾಡ್ ನಾಯಕರಿಗೆ ಬೈಡನ್ ಆತಿಥ್ಯ ವಹಿಸುತ್ತಿದ್ದಾರೆ. 2021ರಲ್ಲಿ ಬೈಡನ್ ಆಡಳಿತವು ಮೊದಲ ಬಾರಿಗೆ ಕ್ವಾಡ್ ಶೃಂಗಸಭೆಗೆ ಶ್ವೇತ ಭವನದಲ್ಲಿ ಆತಿಥ್ಯ ವಹಿಸಿತ್ತು ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ: ಡೆಮಾಕ್ರೆಟಿಕ್ ಸಮಾವೇಶದಲ್ಲಿ ವೇದಿಕೆ ಮೇಲೆ ಕಣ್ಣೀರು ಹಾಕಿದ ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್
ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರಾಂತ್ಯದಲ್ಲಿ ಮೂರು ದಿನಗಳ ಭೇಟಿಗಾಗಿ ಯುಎಸ್‌ಗೆ ಪ್ರಯಾಣಿಸಲಿದ್ದಾರೆ. ನಾಲ್ಕು ರಾಷ್ಟ್ರಗಳ ಶೃಂಗಸಭೆ ನಡೆಯಲಿರುವ ದಿನವಾದ ಸೆಪ್ಟೆಂಬರ್ 21 ರಂದು ಪ್ರಧಾನಿ ಮೋದಿ ಯುಎಸ್ ತಲುಪಲಿದ್ದಾರೆ.
ಈ ವರ್ಷ ಜುಲೈನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೋಕಿಯೊದಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಕ್ವಾಡ್ ಸದಸ್ಯ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ