Russia Ukraine War: 3ನೇ ಮಹಾಯುದ್ಧ; ಈ ಮೂರು ಕಾರಣಗಳಿಗಾಗಿ ರಷ್ಯಾ ವಿರುದ್ಧ ನ್ಯಾಟೊ ಯುದ್ಧ ಘೋಷಿಸಬೇಕಾದೀತು

ಇಲ್ಲಿರುವ ಮೂರು ಸಾಧ್ಯತೆಗಳಲ್ಲಿ ಒಂದು ಸಂಭವಿಸಿದರೂ ಇಡೀ ಯೂರೋಪ್ ಯುದ್ಧಕಣಕ್ಕೆ ಇಳಿಯಬೇಕಾಗುತ್ತದೆ. ಅದರಲ್ಲಿ ಅಮೆರಿಕ-ಚೀನಾಗಳು ಒಂದೊಂದು ಬದಿಯಲ್ಲಿ ನಿಲ್ಲುವುದರೊಂದಿಗೆ ಅದು 3ನೇ ವಿಶ್ವಯುದ್ಧವಾಗಿ ಬದಲಾಗುತ್ತದೆ.

Russia Ukraine War: 3ನೇ ಮಹಾಯುದ್ಧ; ಈ ಮೂರು ಕಾರಣಗಳಿಗಾಗಿ ರಷ್ಯಾ ವಿರುದ್ಧ ನ್ಯಾಟೊ ಯುದ್ಧ ಘೋಷಿಸಬೇಕಾದೀತು
ರಷ್ಯಾ ಗಡಿಯಲ್ಲಿ ಉಕ್ರೇನ್ ಯೋಧ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 11, 2022 | 9:13 AM

ಉಕ್ರೇನ್ ವಿರುದ್ಧದ ರಷ್ಯಾ ದಾಳಿ ತಕ್ಷಣಕ್ಕೆ ನಿಲ್ಲದೆ ಇನ್ನಷ್ಟು ದಿನ ಮುಂದುವರಿದರೆ ಅಮೆರಿಕ ನೇತೃತ್ವದ ನ್ಯಾಟೊ ಒಪ್ಪಂದದ ಭಾಗವಾಗಿರುವ ದೇಶಗಳು ರಷ್ಯಾ ವಿರುದ್ಧ ಕದನಕಣಕ್ಕಿಳಿಯುವುದು ಅನಿವಾರ್ಯವಾಗಲಿದೆ. ಅಂಥ ಮೂರು ಸಾಧ್ಯತೆಗಳ ವಿಶ್ಲೇಷಣೆ ಈ ಬರಹದಲ್ಲಿದೆ. ಸಂಘರ್ಷದಲ್ಲಿ ವಹಿಸಬಹುದಾದ ಪಾತ್ರದ ಬಗ್ಗೆ ಚರ್ಚಿಸಲು ನ್ಯಾಟೊ ಸದಸ್ಯ ದೇಶಗಳ ನಾಯಕರು ಕಳೆದ ವಾರ ಬ್ರುಸೆಲ್ಸ್​ನಲ್ಲಿ ಸಭೆ ಸೇರಿದ್ದರು. ಉಕ್ರೇನ್​ಗೆ ಒದಗಿಸಬಹುದಾದ ಸೇನಾ ನೆರವಿನ ಬಗ್ಗೆ ಚಿಂತನೆ ನಡೆಸಿದರು. ರಷ್ಯಾದೊಂದಿಗೆ ನೇರ ಸಂಘರ್ಷ ನಡೆಸದೆ ಉಕ್ರೇನ್​ಗೆ ನೆರವಾಗುವುದು ಹೇಗೆ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ರಷ್ಯಾ ದಾಳಿಗೆ ಮೊದಲಿನಿಂದಲೂ ಉಕ್ರೇನ್ ಸರ್ಕಾರ ನ್ಯಾಟೊ ದೇಶಗಳಿಂದ ಬಹಿರಂಗವಾಗಿ ನೆರವು ಯಾಚಿಸುತ್ತಿತ್ತು. ಉಕ್ರೇನ್​ನ ಡೊನ್​ಬಾಸ್ ಪ್ರಾಂತ್ಯದ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ರಷ್ಯಾ ತನ್ನ ಪಡೆಗಳನ್ನು ಪುನರ್​ಸಂಘಟಿಸುತ್ತಿದ್ದು, ಹೊಸ ಕಾರ್ಯಯೋಜನೆ ರೂಪಿಸುತ್ತಿದೆ. ಇದನ್ನು ತಡೆಯಲು ತನಗೆ ತುರ್ತಾಗಿ ಜಾವೆಲಿನ್, ಎನ್​ಎಲ್​ಎಡಬ್ಲ್ಯು (Next generation Light Anti tank Weapon – NLAW), ಸ್ಟಿಂಗರ್ ಮತ್ತು ಸ್ಟಾರ್​ಸ್ಟ್ರೀಕ್ ಆ್ಯಂಟಿ ಟ್ಯಾಂಕ್ ಮತ್ತು ಆ್ಯಂಟಿ ಏರ್​ಕ್ರಾಫ್ಟ್​ ಕ್ಷಿಪಣಿಗಳು ಬೇಕು ಎಂದು ಉಕ್ರೇನ್ ಕೋರಿದೆ. ಉಕ್ರೇನ್ ಕೇಳಿರುವ ಈ ಯುದ್ಧೋಪಕರಣಗಳನ್ನು ಒದಗಿಸಲು ನ್ಯಾಟೊ ದೇಶಗಳು ಒಪ್ಪಿವೆ. ಆದರೆ ಉಕ್ರೇನ್ ಮತ್ತಷ್ಟು ನೆರವು ಕೇಳುತ್ತಿದೆ. ಸಮಸ್ಯೆ ಇರುವುದೇ ಅಲ್ಲಿ.

ತನಗೆ ಯುದ್ಧ ಟ್ಯಾಂಕ್​ಗಳು, ಡ್ರೋಣ್ ಮತ್ತು ಸುಧಾರಿತ ವಾಯು ರಕ್ಷಣಾ ವ್ಯವಸ್ಥೆ ಬೇಕು ಎಂದು ಉಕ್ರೇನ್ ಕೇಳುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ನಿರಂತರವಾಗಿ ವಾಯುದಾಳಿ ನಡೆಸುತ್ತಿದೆ. ದೂರಗಾಮಿ ಕ್ಷಿಪಣಿಗಳನ್ನು ಬಳಸುತ್ತಿದೆ. ಉಕ್ರೇನ್​ನ ಇಂಧನ ಮತ್ತು ಇತರ ಅತ್ಯಗತ್ಯ ವಸ್ತುಗಳ ದಾಸ್ತಾನು ಮತ್ತು ಪೂರೈಕೆ ವ್ಯವಸ್ಥೆಯನ್ನು ರಷ್ಯಾ ನಿರಂತರವಾಗಿ ಹಾಳುಗೆಡವುತ್ತಿದೆ. ಉಕ್ರೇನ್​ಗೆ ಅಮೆರಿಕ ಏನೆಲ್ಲಾ ಕೊಡಬಹುದು? ಉಕ್ರೇನ್​ಗೆ ನೆರವಾಗಲು ನ್ಯಾಟೊ ದೇಶಗಳು ಹಿಂದೇಟು ಹಾಕುತ್ತಿರುವುದೇಕೆ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ. ಇದಕ್ಕಿರುವ ಒಂದೇ ಉತ್ತರವೆಂದರೆ ಸಂಘರ್ಷ ಹೆಚ್ಚಾಗಬಹುದೆಂಬ ಭೀತಿ. ರಷ್ಯಾ ಒಂದು ವೇಳೆ ಅಣ್ವಸ್ತ್ರ ಬಳಸಿದರೆ ಅನಾಹುತವೇ ಆಗುತ್ತದೆ. ಸಂಘರ್ಷವು ಉಕ್ರೇನ್​ನ ಗಡಿಯಿಂದಾಚೆಗೆ ವಿಸ್ತರಿಸಿ, ಇಡೀ ಯೂರೋಪ್​ ಖಂಡದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತದೆ. ಇಂಥ ಬೆಳವಣಿಗೆಗೆ ಕಾರಣವಾಗುವುದು ಯಾರಿಗೂ ಬೇಕಿಲ್ಲ. ಹೀಗಾಗಿಯೇ ಉದ್ವಿಗ್ನತೆ ಶಮನಗೊಳಿಸಲು ಎಲ್ಲರೂ ಯತ್ನಿಸುತ್ತಿದ್ದಾರೆ.

ರಷ್ಯಾ ಆಕ್ರಮಣ ಆರಂಭವಾದ ನಂತರ ಈವರೆಗೆ ಸುಮಾರು 30 ದೇಶಗಳು ಉಕ್ರೇನ್​ಗೆ ಅಗತ್ಯ ಯುದ್ಧೋಪಕರಣಗಳನ್ನು ಒದಗಿಸಿವೆ. ಇದರ ಜೊತೆಗೆ ಐರೋಪ್ಯ ಒಕ್ಕೂಟವು 1 ಶತಕೋಟಿ ಯೂರೊ, ಅಮೆರಿಕ 1.7 ಶತಕೋಟಿ ಅಮೆರಿಕ ಡಾಲರ್​ನಷ್ಟು ಧನಸಹಾಯ ಒದಗಿಸಿವೆ. ಶಸ್ತ್ರಾಸ್ತ್ರಗಳು, ರಕ್ಷಣಾ ಉಪಕರಣಗಳು, ಆ್ಯಂಟಿ ಟ್ಯಾಂಕ್ ಮತ್ತು ಆ್ಯಂಟಿ ಏರ್​ಕ್ರಾಫ್ಟ್ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸಿವೆ. ಭುಜದ ಮೇಲೆ ಹೊತ್ತು ಉಡಾಯಿಸಬಹುದಾದ ಆ್ಯಂಟಿ ಟ್ಯಾಂಕ್ ಮತ್ತು ಆ್ಯಂಟಿ ಏರ್​ಕ್ರಾಫ್ಟ್ ಕ್ಷಿಪಣಿಗಳನ್ನು ಒದಗಿಸಲಾಗಿದೆ. ಇದಕ್ಕೆ ಮೀರಿ ನೇರವಾಗಿ ಯುದ್ಧಟ್ಯಾಂಕ್ ಅಥವಾ ಯುದ್ಧ ವಿಮಾನಗಳನ್ನು ಒದಗಿಸಿದರೆ ಅದು ರಷ್ಯಾದೊಂದಿಗೆ ನೇರ ಸಂಘರ್ಷಕ್ಕೆ ಕಾರಣವಾಗಹಬುದು ಎಂಬ ಭೀತಿ ನ್ಯಾಟೊ ಸದಸ್ಯ ರಾಷ್ಟ್ರಗಳಲ್ಲಿ ಇದೆ.

‘ನಮ್ಮ ಬಳಿ ಅಣ್ವಸ್ತ್ರಗಳಿವೆ. ಅಗತ್ಯ ಸಂದರ್ಭದಲ್ಲಿ ಅವನ್ನು ಬಳಸಲು ಹಿಂಜರಿಯುವುದಿಲ್ಲ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿರುವುದು ಸಹ ನ್ಯಾಟೊ ಪಡೆಗಳಿಗೆ ಚಿಂತೆ ತಂದೊಡ್ಡಿದೆ. ಕಳೆದ 77 ವರ್ಷಗಳಲ್ಲಿ ವಿಶ್ವದಲ್ಲಿ ಎಲ್ಲಿಯೂ ಅಣ್ವಸ್ತ್ರ ಬಳಕೆಯಾಗಿಲ್ಲ. ಆದರೆ ರಷ್ಯಾದ ಸೇನಾ ನೀತಿಯು ಅತ್ಯಗತ್ಯ ಸಂದರ್ಭದಲ್ಲಿ ಮೊದಲೇ ಅಣ್ವಸ್ತ್ರ ಸಿಡಿತಲೆ ಬಳಸಲು ಅವಕಾಶ ನೀಡುವುದು ಅಮೆರಿಕದ ಚಿಂತೆಗೆ ಕಾರಣವಾಗಿದೆ. ಅಪ್ಪಿತಪ್ಪಿ ರಷ್ಯಾ ಮೊದಲು ಅಣ್ವಸ್ತ್ರ ಬಳಸಿದರೆ, ಅಣ್ವಸ್ತ್ರಗಳನ್ನು ಬಳಸಬಾರದು ಎನ್ನುವ ನಿರ್ಬಂಧ ಒಂದು ವೇಳೆ ಕಳಚಿಹೋದರೆ, ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ನೇರ ಯುದ್ಧ ಸಾಧ್ಯತೆ ತೀವ್ರಗೊಳ್ಳಲಿದೆ. ಪರಸ್ಪರರ ವಿರುದ್ಧ ಅಣ್ವಸ್ತ್ರ ಪ್ರಯೋಗ ನಡೆದರೂ ಅಚ್ಚರಿಯಿಲ್ಲ ಎಂದು ನ್ಯಾಟೊದ ಕಾರ್ಯತಂತ್ರ ನಿಪುಣರು ಹೇಳುತ್ತಾರೆ.

ಉಕ್ರೇನ್​ನಲ್ಲಿ ರಷ್ಯಾ ಸೈನಿಕರು ನಡೆಸಿರುವ ಹಿಂಸಾಚಾರದ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಯುದ್ಧದಲ್ಲಿ ಮಧ್ಯಪ್ರವೇಶಿಸಬಾರದು ಎನ್ನುವ ನ್ಯಾಟೊ ದೇಶಗಳ ನಿಲುವು ಸಡಿಲಗೊಳ್ಳುತ್ತಿದೆ. ಝೆಕ್ ಗಣರಾಜ್ಯವು ಈಗಾಗಲೇ ಉಕ್ರೇನ್​ಗೆ ಟ್ಯಾಂಕ್​ಗಳನ್ನು ಕಳಿಸಿಕೊಟ್ಟಿದೆ. ಸ್ಲೊವಾಕಿಯಾ ಎಸ್-300 ವಾಯುರಕ್ಷಣಾ ವ್ಯವಸ್ಥೆಯನ್ನು ರವಾನಿಸುತ್ತಿದೆ. ಯುದ್ಧದ ಆರಂಭದ ದಿನಗಳಲ್ಲಿ ಇಂಥ ನಡೆಯಿಂದ ತೀವ್ರ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಆದರೆ ಇದೀಗ ಉಕ್ರೇನ್​ನ ನೆರೆ ದೇಶಗಳು ವಹಿರಂಗವಾಗಿಯೇ ಉಕ್ರೇನ್​ ಬೆಂಬಲಕ್ಕೆ ನಿಲ್ಲುತ್ತಿವೆ. ‘ರಷ್ಯಾ ವಿರುದ್ಧ ಪ್ರಬಲವಾಗಿ ಹೋರಾಡಿ ಜಯಗಳಿಸಲು ಬೇಕಿರುವಷ್ಟು ಆಯುಧಗಳನ್ನು ನಾವು ಒದಗಿಸಬೇಕಿಲ್ಲ. ಅದರ ಬದಲಿಗೆ, ಉಕ್ರೇನ್ ಅಸ್ತಿತ್ವ ಉಳಿಸಿಕೊಳ್ಳಲು ಬೇಕಿರುವಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎನ್ನುವ ನಿಲುವನ್ನು ನಾವು ಮರುಪರಿಶೀಲಿಸಬೇಕಿದೆ. ಶಸ್ತ್ರಾಸ್ತ್ರ ಒದಗಿಸುವ ವಿಚಾರದಲ್ಲಿ ನಮ್ಮ ನಿಲುವು ಬದಲಾಗಬೇಕಿದೆ. ಅತಿಯಾದ ಹಿಂಜರಿಕೆ ಸಲ್ಲದು’ ಎನ್ನುವುದು ಬ್ರಿಟನ್​ನ ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿ ಅಧ್ಯಕ್ಷ ಟೊಬಿಯಾಸ್ ಎಲ್​ವುಡ್ ಅವರ ಅಭಿಪ್ರಾಯ.

ನ್ಯಾಟೊ ಸದಸ್ಯ ದೇಶಗಳಲ್ಲಿ ರಷ್ಯಾ ವಿರುದ್ಧದ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೆಳಗಿನ ಮೂರು ಸಾಧ್ಯತೆಗಳಲ್ಲಿ ಒಂದು ಸಂಭವಿಸಿದರೂ ಇಡೀ ಯೂರೋಪ್ ಯುದ್ಧಕಣಕ್ಕೆ ಇಳಿಯಬೇಕಾಗುತ್ತದೆ. ಅದರಲ್ಲಿ ಅಮೆರಿಕ-ಚೀನಾಗಳು ಒಂದೊಂದು ಬದಿಯಲ್ಲಿ ನಿಲ್ಲುವುದರೊಂದಿಗೆ ಅದು 3ನೇ ವಿಶ್ವಯುದ್ಧವಾಗಿ ಬದಲಾಗುತ್ತದೆ. ಯೂರೋಪ್ ದೇಶಗಳ ರಕ್ಷಣಾ ಸಚಿವರು ಮತ್ತು ರಕ್ಷಣಾ ಕಾರ್ಯತಂತ್ರ ನಿಪುಣರ ಮಿದುಳುಗಳಲ್ಲಿ ಸಾಕಷ್ಟು ಲೆಕ್ಕಾಚಾರಗಳು ಚಾಲ್ತಿಯಲ್ಲಿವೆ.

ಆ ಪೈಕಿ ಮೂರು ಮುಖ್ಯ ಸಾಧ್ಯತೆಗಳಿವು…

1 ನ್ಯಾಟೊ ಸರಬರಾಜು ಮಾಡಿದ ಆ್ಯಂಟಿ-ಶಿಪ್ ಕ್ಷಿಪಣಿಯೊಂದನ್ನು ಉಕ್ರೇನ್ ಪಡೆಗಳು ಉಡಾಯಿಸಿ, ಅದು ಕಪ್ಪು ಸಮುದ್ರದಲ್ಲಿ ರಷ್ಯಾದ ಯುದ್ಧನೌಕೆಗೆ ಅಪ್ಪಳಿಸಿ, ಆ ಯುದ್ಧನೌಕೆ ಮುಳುಗುತ್ತದೆ. ಸುಮಾರು 100 ನಾವಿಕರು ಮತ್ತು ಹತ್ತಾರು ಅಧಿಕಾರಿಗಳು ಮೃತಪಡುತ್ತಾರೆ. ಈ ಘಟನೆಯ ನಂತರ ಬೆಳವಣಿಗೆಗಳನ್ನು ಊಹಿಸಲು ಆಗುವುದಿಲ್ಲ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿ ಕ್ಷಿಪಣಿ ಸರಬರಾಜು ಮಾಡಿದ ದೇಶದ ವಿರುದ್ಧ ದಾಳಿಗೆ ಆದೇಶಿಸಬಹುದು.

2 ನ್ಯಾಟೊ ಸದಸ್ಯ ದೇಶದಿಂದ ಉಕ್ರೇನ್​ಗೆ ಹೋಗುತ್ತಿರುವ ಸೇನಾ ವಾಹನಗಳು, ಸಿಬ್ಬಂದಿ, ಯುದ್ಧೋಪಕರಣಗಳ ಮೇಲೆ ರಷ್ಯಾದ ಕ್ಷಿಪಣಿಗಳು ದಾಳಿ ನಡೆಸಬಹುದು. ಬಹುತೇಕ ಪೊಲೆಂಡ್ ಅಥವಾ ಸ್ಲೊವಾಕಿಯಾ ಇಂಥ ದಾಳಿಗೆ ಗುರಿಯಾಗಬಹುದು. ಒಂದು ವೇಳೆ ನ್ಯಾಟೊ ಸದಸ್ಯ ರಾಷ್ಟ್ರದ ಗಡಿಯೊಳಗೆ ರಷ್ಯಾ ಕ್ಷಿಪಣಿ ದಾಳಿ ನಡೆಸಿ, ದೊಡ್ಡಮಟ್ಟ ಸಾವುನೋವು ಸಂಭವಿಸಿದರೆ ನ್ಯಾಟೊ ಸಂಹಿತೆಯ 5ನೇ ಪರಿಚ್ಛೇದದ ಅನುಸಾರ ದಾಳಿಗೆ ಒಳಗಾದ ದೇಶದ ವಿರುದ್ಧ ಉಳಿದೆಲ್ಲ ದೇಶಗಳು ಒಗ್ಗೂಡಿ ರಷ್ಯಾ ವಿರುದ್ಧ ಯುದ್ಧ ಸಾರಬಹುದು.

3 ಉಕ್ರೇನ್​ನ ಡೊನ್​ಬಾಸ್ ಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ದಾಳಿಯಿಂದ ಹಾನಿಕಾರಕ ರಾಸಾಯನಿಕ ಅನಿಲ ಬಿಡುಗಡೆ ಆಗಬಹುದು. ಈಗಾಗಲೇ ಇಂಥ ಹಲವು ಘಟನೆಗಳು ನಡೆದಿವೆಯಾದರೂ ರಾಸಾಯನಿಕಗಳಿಂದ ಸಾವುನೋವು ವರದಿಯಾಗಿಲ್ಲ. ಆದರೆ ಒಮ್ಮೆ ವಿಷಾನಿಲ ಹರಡಿ, ಸಿರಿಯಾದಲ್ಲಿ ಸಂಭವಿಸಿದಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಮೃತಪಟ್ಟರೆ, ಅದಕ್ಕೆ ರಷ್ಯ ಪಡೆಗಳು ಕಾರಣ ಎಂದು ಸಾಬೀತಾದರೆ ರಷ್ಯಾ ವಿರುದ್ಧ ನ್ಯಾಟೊ ಯುದ್ಧ ಸಾರಬಹುದು.

ಈ ಪೈಕಿ ಯಾವೊಂದು ಕಾರಣವೂ ಕಾರ್ಯರೂಪಕ್ಕೆ ಬರದಿರಲಿ, ಜಗತ್ತು ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗುವುದು ಬೇಡ ಎಂಬ ಹಾರೈಕೆಯಲ್ಲಿಯೇ ಈ ವಿಶ್ಲೇಷಣೆ ಮಾಡಲಾಗಿದೆ.

ಇದನ್ನೂ ಓದಿ: Russia Ukraine Conflict: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು

ಇದನ್ನೂ ಓದಿ: ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ