ಅಮೆರಿಕ-ಇರಾನ್ ಸಂಘರ್ಷ: ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಶೆಹಬಾಜ್ ಬಾಯಲ್ಲಿ ಶಾಂತಿ ಮಂತ್ರ
ಅಮೆರಿಕ-ಇರಾನ್ ಸಂಘರ್ಷದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಆಹ್ವಾನವಿಲ್ಲದಿದ್ದರೂ ಮಧ್ಯಸ್ಥಿಕೆಗೆ ಮುಂದಾಗಿದ್ದಾರೆ. ಶಾಂತಿ ಮಾತುಕತೆಗಳಿಗೆ ಸಿದ್ಧವಿರುವುದಾಗಿ ಘೋಷಿಸಿರುವ ಪಾಕ್, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಕಡಿಮೆಗೊಳಿಸಲು ಯತ್ನಿಸುತ್ತಿದೆ. ಡೊನಾಲ್ಡ್ ಟ್ರಂಪ್ ಭಾರತ-ಪಾಕ್ ಸಂಘರ್ಷದಲ್ಲಿ ವರ್ತಿಸಿದಂತೆ, ಶೆಹಬಾಜ್ ಇರಾನ್-ಅಮೆರಿಕ ವಿಷಯದಲ್ಲಿ ವರ್ತಿಸುತ್ತಿದ್ದಾರೆ. ಭಾರತ ಈ ಪಾತ್ರ ನಿರ್ವಹಿಸದಿರುವುದಕ್ಕೆ ಕಾಂಗ್ರೆಸ್ ಟೀಕಿಸಿದೆ.

ಇಸ್ಲಾಮಾಬಾದ್, ಮಾರ್ಚ್ 25: ಅಂದು ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿರುವ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಏನು ಮಾಡಿದ್ದರೂ, ಅದೇ ಕೆಲಸವನ್ನು ಈಗ ಇರಾನ್-ಅಮೆರಿಕ ಮಧ್ಯೆ ಹುಟ್ಟುಕೊಂಡಿರುವ ಉದ್ವಿಗ್ನತೆ ನಡುವೆ ಪಾಕ್ ಮಾಡಲು ಹೊರಟಿದೆ. ಯಾರೂ ಆಹ್ವಾನಿಸದಿದ್ದರೂ ಶೆಹಬಾಜ್ ಷರೀಫ್ ಮಧ್ಯಸ್ಥಿಕೆಗೆ ಬಂದು ಕುಳಿತಿದ್ದಾರೆ, ತಾವು ಶಾಂತಿ ಸ್ಥಾಪಕ ಎಂದು ಕರೆದುಕೊಳ್ಳುತ್ತಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದದ ನಂತರ, ಎರಡೂ ದೇಶಗಳ ನಡುವೆ ಅರ್ಥಪೂರ್ಣ ಮತ್ತು ನಿರ್ಣಾಯಕ ಸಂವಾದವನ್ನು ಆಯೋಜಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಜೊತೆ ಇರಾನ್ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂವಾದವನ್ನು ಬೆಳೆಸಲು ನಡೆಯುತ್ತಿರುವ ಪ್ರಯತ್ನಗಳನ್ನು ಪಾಕಿಸ್ತಾನ ಸ್ವಾಗತಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಿಗೆ ಆತಿಥೇಯ ಪಾತ್ರವನ್ನು ವಹಿಸುವ ಬಗ್ಗೆ ಪಾಕಿಸ್ತಾನವು ಮಹತ್ವದ ಹೇಳಿಕೆಯನ್ನು ನೀಡಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಂಗಳವಾರ (ಮಾರ್ಚ್ 24, 2026) ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಮಾತುಕತೆಯ ಮೂಲಕ ಕೊನೆಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಪಾಕಿಸ್ತಾನ ಸ್ವಾಗತಿಸುತ್ತದೆ ಮತ್ತು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಇದರಿಂದಾಗಿ ಮಧ್ಯಪ್ರಾಚ್ಯ ಪ್ರದೇಶ ಮತ್ತು ಅದರಾಚೆಗೆ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಬಹುದು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಇರಾನ್ ಮೇಲೆ ಟ್ರಂಪ್ ಯುದ್ಧ ಘೋಷಿಸಲು ಕಾರಣರಾದ ಪೀಟ್ ಹೆಗ್ಸೆತ್ ಯಾರು?
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪ್ರಾರಂಭವಾಗಿ ಮೂರು ವಾರಗಳಿಗೂ ಹೆಚ್ಚು ಸಮಯ ಕಳೆದಿದೆ. ಈ ಯುದ್ಧದಲ್ಲಿ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಹೆಚ್ಚಿನ ಸಂಖ್ಯೆಯ ಕ್ಷಿಪಣಿಗಳು ಮತ್ತು ದಾಳಿ ಡ್ರೋನ್‌ಗಳನ್ನು ಬಳಸಿಕೊಂಡು ಇರಾನ್ ಮೇಲೆ ಪ್ರಮುಖ ದಾಳಿ ನಡೆಸಿವೆ.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹಲವಾರು ಉನ್ನತ ಇರಾನಿನ ನಾಯಕರು, ಹಿರಿಯ ಮಿಲಿಟರಿ ಅಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನಿನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಐದು ದಿನಗಳ ಕಾಲ ಮುಂದೂಡುವುದಾಗಿ ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಗಡುವನ್ನು ವಿಸ್ತರಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಆದಾಗ್ಯೂ, ಇರಾನಿನ ಅಧಿಕಾರಿಗಳು ಯಾವುದೇ ರಹಸ್ಯ ಮಾತುಕತೆಗಳನ್ನು ನಿರಾಕರಿಸಿದ್ದಾರೆ, ಇರಾನ್ ಎಚ್ಚರಿಕೆಯ ನಂತರ ಟ್ರಂಪ್ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಮಧ್ಯವರ್ತಿಯಾಗಿ ಹೊರಹೊಮ್ಮಿದ ಸುದ್ದಿ ಭಾರತದ ರಾಜಕೀಯ ವಾತಾವರಣವನ್ನು ಬಿಸಿಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತವು ಈ ಪಾತ್ರದಲ್ಲಿ ನಿರ್ಲಕ್ಷ್ಯ ವಹಿಸಿದೆ, ಅದನ್ನು ಭಾರತ ನಿಭಾಯಿಸಬೇಕಿತ್ತು ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:24 am, Wed, 25 March 26
