ಫೇಸ್ಬುಕ್ ವಿರುದ್ಧ ಅಮೆರಿಕ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ
ಫೇಸ್ಬುಕ್ ಜಗತ್ತಿನ ಅತ್ಯಂತ ದೊಡ್ಡ ಸಾಮಾಜಿಕ ನೆಟ್ವಕರ್ಟ್ ಎನ್ನುವುದರಲ್ಲಿ ಸಂಶಯವಿಲ್ಲ. ಕಳೆದ ಒಂದೇ ವರ್ಷ 70 ಬಿಲಿಯನ್ ಡಾಲರ್ಗೂ ಹೆಚ್ಚು ಆದಾಯ ಗಳಿಸಿದೆ. 18.5 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಲಾಭ ಗಳಿಸಿತ್ತು.
ವಾಷಿಂಗ್ಟನ್: ಅಮೆರಿಕ ಸರ್ಕಾರ ಮತ್ತು 48 ರಾಜ್ಯಗಳು ಫೇಸ್ಬುಕ್ ವಿರುದ್ಧ ಸಮಾನಾಂತರ ನಂಬಿಕೆ ದ್ರೋಹದ ಮೊಕದ್ದಮೆ ಹೂಡಿವೆ. ಸಾಮಾಜಿಕ ಮಾಧ್ಯಮ ದೈತ್ಯ ಎನಿಸಿಕೊಂಡಿರುವ ಫೇಸ್ಬುಕ್, ತನ್ನ ಮಾರುಕಟ್ಟೆ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ವ್ಯವಸ್ಥೆಗೆ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈ ಮೂಲಕ ಏಕಸ್ವಾಮ್ಯತ್ವ ಸೃಷ್ಟಿಸಿಕೊಂಡು, ಸಣ್ಣ ಮಟ್ಟದ ಸ್ಪರ್ಧಿಗಳನ್ನು ತುಳಿಯುತ್ತಿದೆ ಎಂದು ಆರೋಪಿಸಿವೆ.
ಷೇರುಗಳು ಕುಸಿತ ಅಮೆರಿಕ ಸರ್ಕಾರದ ಸ್ವಾಯುತ್ತ ಸಂಸ್ಥೆಯಾದ ಫೆಡರಲ್ ಟ್ರೇಡ್ ಕಮಿಷನ್ ಮತ್ತು 48 ರಾಜ್ಯಗಳ ಅಟಾರ್ನಿ ಜನರಲ್ಗಳು ಬುಧವಾರ ಮೊಕದ್ದಮೆ ಹೂಡಿದ ಬೆನ್ನಲ್ಲೇ, ಫೇಸ್ಬುಕ್ನ ಶೇರುಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿವೆ. ಫೇಸ್ಬುಕ್ ತನ್ನ ಏಕಸ್ವಾಮ್ಯಕ್ಕಿರುವ ಅಪಾಯವನ್ನು ತೊಡೆದುಹಾಕಲು, ವ್ಯವಸ್ಥಿತ ಕಾರ್ಯತಂತ್ರ ಹೆಣೆಯುತ್ತಿದೆ. ಅದಕ್ಕೆ ಉದಾಹರಣೆಯೆಂಬಂತೆ ಮುಂದೊಂದು ದಿನ ತನಗೆ ತೀವ್ರ ಪ್ರತಿಸ್ಪರ್ಧಿಯಾಗಬಲ್ಲ ಇನ್ಸ್ಟಾಗ್ರಾಮ್ ಅನ್ನು 2012ರಲ್ಲಿ ಸ್ವಾಧೀನ ಪಡಿಸಿಕೊಂಡಿತು..ಹಾಗೇ 2014ರಲ್ಲಿ ಮೊಬೈಲ್ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಹಾಗೇ, ಸಾಫ್ಟ್ವೇರ್ ಡೆವಲಪರ್ಗಳ ಮೇಲೆ ಸ್ಪರ್ಧಾತ್ಮಕ ವಿರೋಧಿ ಷರತ್ತುಗಳನ್ನು ಹೇರುತ್ತಿದೆ ಎಂದು ನ್ಯೂಯಾರ್ಕ್ನ ಅಟಾರ್ನಿ ಜನರಲ್ ಲೆಟಿಟಾ ಜೇಮ್ಸ್ ನೇತೃತ್ವದ ಉಭಯ ಪಕ್ಷೀಯ ಒಕ್ಕೂಟ ಮೊಕದ್ದಮೆಯಲ್ಲಿ ಆರೋಪ ಮಾಡಿದೆ.
ಫೇಸ್ಬುಕ್ನ ಇಂಥ ನಡೆ ಸ್ಪರ್ಧೆಗೆ ಮಾರಕ .ಗ್ರಾಹಕರಿಗೆ ವೈಯಕ್ತಿಕ ಸಾಮಾಜಿಕ ನೆಟ್ವರ್ಕ್ಗಳ ಆಯ್ಕೆ ಸೀಮಿತವಾಗುತ್ತದೆ ಮತ್ತು ಜಾಹೀರಾತುದಾರರಿಗೆ ಸ್ಪರ್ಧೆಯಿಂದ ಸಿಗುವ ಅನುಕೂಲವನ್ನು ಕಸಿಯುತ್ತದೆ. ಕಳೆದ ಒಂದು ದಶಕಗಳಿಂದಲೂ ಫೇಸ್ಬುಕ್ ತನ್ನ ಸಣ್ಣ ಪ್ರತಿಸ್ಪರ್ಧಿಗಳ ಮೇಲೆ ಪ್ರಾಬಲ್ಯ ಸ್ಥಾಪಿಸುತ್ತಿದೆ. ಏಕಸ್ವಾಮ್ಯದಿಂದ ಹತ್ತಿಕ್ಕುತ್ತಿದೆ ಎಂದೂ ಹೇಳಿದೆ.
ಫೇಸ್ಬುಕ್ ಜಗತ್ತಿನ ಅತ್ಯಂತ ದೊಡ್ಡ ಸಾಮಾಜಿಕ ನೆಟ್ವರ್ಕ್ ಎನ್ನುವುದರಲ್ಲಿ ಸಂಶಯವಿಲ್ಲ. ಕಳೆದ ಒಂದೇ ವರ್ಷ 70 ಶತಕೋಟಿ ಡಾಲರ್ಗೂ ಹೆಚ್ಚು ಆದಾಯ, 18.5 ಶತಕೋಟಿ ಡಾಲರ್ ನಿವ್ವಳ ಲಾಭ ಗಳಿಸಿತ್ತು. ಆದರೆ ತನ್ನೊಂದಿಗೆ ಇನ್ನ್ಯಾವುದೇ ಸಣ್ಣ ಪ್ರತಿಸ್ಪರ್ಧಿಗಳನ್ನು ಬೆಳೆಯಲು ಕೊಡುವುದಿಲ್ಲ ಎಂಬುದೇ ಮೊಕದ್ದಮೆಯ ಸಾರಾಂಶ.
ಬಡರಾಷ್ಟ್ರಗಳ ಬಡಪಾಯಿಗಳಿಗೆ ಕೊರೊನಾ ಲಸಿಕೆ ಮರೀಚಿಕೆಯಷ್ಟೇ.. ಅಧ್ಯಯನ ಹೇಳಿದ ಕಟು ಸತ್ಯ ಇಲ್ಲಿದೆ