ಆಟೋ, ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ: CNG ದರ ಕೆಜಿಗೆ 1 ರೂ. ಹೆಚ್ಚಳ
ಕೇಂದ್ರ ಸರ್ಕಾರ ಮತ್ತೆ CNG ದರವನ್ನು ಕೆಜಿಗೆ 1 ರೂಪಾಯಿ ಹೆಚ್ಚಳ ಮಾಡಿದೆ. ಕೇವಲ 48 ಗಂಟೆಗಳಲ್ಲಿ ಇದು ಎರಡನೇ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿ CNG ದರ 80.09 ರೂಪಾಯಿಗೆ ತಲುಪಿದೆ. ಈ ನಿರಂತರ ಏರಿಕೆಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇಂಧನ ವೆಚ್ಚ ಸಮತೋಲನಗೊಳಿಸಲು ದರ ಪರಿಷ್ಕರಣೆಯ ಅನಿವಾರ್ಯತೆ ಎದುರಾಗಿದೆ ಎಂದವರು ಅಲವತ್ತುಕೊಂಡಿದ್ದಾರೆ.

ನವದೆಹಲಿ, ಮೇ 17: ಆಟೋ, ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರ ಮತ್ತೆ CNG ದರ ಏರಿಕೆ ಶಾಕ್ ನೀಡಿದ್ದು, ನೈಸರ್ಗಿಕ ಅನಿಲ(CNG) ಬೆಲೆ ಮತ್ತೆ 1 ರೂಪಾಯಿ ಏರಿಕೆಯಾಗಿದೆ. 2 ದಿನಗಳ ಹಿಂದಷ್ಟೇ ಕೆಜಿ CNG ದರ 2 ರೂಪಾಯಿಗೆ ಏರಿಕೆ ಕಂಡಿತ್ತು. ಆ ಬೆನ್ನಲ್ಲೇ 48 ಗಂಟೆಗಳಲ್ಲಿ 2ನೇ ಬಾರಿಗೆ CNG ದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಆ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ದರ 80.09 ರೂಪಾಯಿಗಳಿಗೆ ತಲುಪಿದೆ. ಈ ಹಿಂದೆ 2 ರೂ. ಏರಿಕೆಯ ಬಳಿಕ CNG ದರ 77.09 ರೂ.ಗಳಿಂದ 79.09ಕ್ಕೆ ಏರಿಕೆಯಾಗಿತ್ತು.
ಮುಖ್ಯಾಂಶಗಳು
- ಆಟೋ, ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್ ಕೊಟ್ಟ ಕೇಂದ್ರ
- ನೈಸರ್ಗಿಕ ಅನಿಲ(CNG) ಬೆಲೆ ಮತ್ತೆ 1 ರೂಪಾಯಿ ಏರಿಕೆ
- 2 ದಿನಗಳ ಹಿಂದಷ್ಟೇ ಕೆಜಿಗೆ ರೂ. ಏರಿಕೆ ಕಂಡಿದ್ದ CNG ದರ
ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಅಸ್ಥಿರತೆಯಿಂದ ಉಂಟಾದ ಹೆಚ್ಚಿನ ಇನ್‌ಪುಟ್ ವೆಚ್ಚವನ್ನು ಸಮತೋಲನಗೊಳಿಸಲು ಸಿಎನ್‌ಜಿ ದರ ಏರಿಕೆ ಮಾಡಲಾಗಿದೆ. ಆದರೆ, ಜಾಗತಿಕ ಇಂಧನ ಬೆಲೆ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಈಗಿನ ದರ ಹೆಚ್ಚಳವು ಅಲ್ಪ ಭಾಗವನ್ನಷ್ಟೇ ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿರೋದಾಗಿ ವರದಿಯಾಗಿದೆ.
ಇದನ್ನೂ ಓದಿ: ದರ ಏರಿಕೆ ಬಿಸಿ; ಸರ್ಕಾರದ ಮೊರೆ ಹೋದ ಆಟೋ ಚಾಲಕರು
ಸಿಎನ್‌ಜಿ ದರ ನಗರಗಳಲ್ಲಿ ಕೆಜಿಗೆ ಈಗ ಎಷ್ಟು?
- ಬೆಂಗಳೂರು- 90 ರೂ.
- ದೆಹಲಿ- 80.09 ರೂ.
- ನೋಯ್ಡಾ- 80.09 ರೂ.
- ಗುರುಗ್ರಾಮ- 84.12 ರೂ.
- ಮುಂಬೈ- 84 ರೂ.
ಆಟೋ, ಕ್ಯಾಬ್ ಚಾಲಕರಿಗೆ ಸಂಕಷ್ಟ
ಸತತವಾಗಿ ಸಿಎನ್‌ಜಿ ದರ ಏರಿಕೆಯ ಪರಿಣಾಮ ಇದನ್ನೇ ನಂಬಿಕೊಂಡಿರುವ ಆಟೋ ಮತ್ತು ಬಹುತೇಕ ಕ್ಯಾಬ್ಗಳ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ನೈಸರ್ಗಿಕ ಅನಿಲದ ಬೆಲೆ ಹೆಚ್ಚಳದ ಸಂದರ್ಭದಲ್ಲಿಯೇ ಈ ಬಗ್ಗೆ ಚಾಲಕ ಸಂಘಟನೆಗಳು ಅಸಮಾಧಾನ ಹೊರಹಾಕಿದ್ದವು. ದರ ಹೆಚ್ಚಳದ ಪರಿಣಾಮ ಬಾಡಿಗೆ ದರವನ್ನು ಏರಿಸಲೇ ಬೇಕಾದ ಅನಿವಾರ್ಯತೆ ಉದ್ಭವಿಸಿದೆ ಎಂದು ತಿಳಿಸಿದ್ದವು. ಬೆಂಗಳೂರಿನಲ್ಲಿಯೂ ಆಟೋ ಚಾಲಕ ಸಂಘಟನೆಗಳು ಮೀಟರ್ ದರ ಪರಿಷ್ಕೃತಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದವು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





