AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್​ನಲ್ಲೂ ಸಖತ್ ಜಿಎಸ್​ಟಿ ಸಂಗ್ರಹ; ಕಳೆದ ವರ್ಷದಕ್ಕಿಂತ ಶೇ. 14.8ರಷ್ಟು ಹೆಚ್ಚು ತೆರಿಗೆ ಕಲೆಕ್ಷನ್

GST collection in 2026 August: 2026ರ ಆಗಸ್ಟ್ ತಿಂಗಳಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹ 1.99 ಲಕ್ಷ ಕೋಟಿ ರೂ ಸರ್ಕಾರಕ್ಕೆ ಬಂದಿದೆ. ಹಿಂದಿನ ತಿಂಗಳಲ್ಲಿ ಇದು 2.11 ಲಕ್ಷ ಕೋಟಿ ರೂ ಸಂಗ್ರಹವಾಗಿತ್ತು. ಆದರೆ, ಹಿಂದಿನ ವರ್ಷದ ಆಗಸ್ಟ್​ಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ. 14.8ರಷ್ಟು ಹೆಚ್ಚು ಸರಕು ಮತ್ತು ಸೇವಾ ತೆರಿಗೆಯನ್ನು ಸರ್ಕಾರ ಪಡೆದಿದೆ. ರಿಫಂಡ್ ಕಳೆದು ಸರ್ಕಾರಕ್ಕೆ ಉಳಿಯುವ ಜಿಎಸ್​ಟಿ 1.68 ಲಕ್ಷ ಕೋಟಿ ರು.

ಆಗಸ್ಟ್​ನಲ್ಲೂ ಸಖತ್ ಜಿಎಸ್​ಟಿ ಸಂಗ್ರಹ; ಕಳೆದ ವರ್ಷದಕ್ಕಿಂತ ಶೇ. 14.8ರಷ್ಟು ಹೆಚ್ಚು ತೆರಿಗೆ ಕಲೆಕ್ಷನ್
ಸರಕು ಮತ್ತು ಸೇವಾ ತೆರಿಗೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2026 | 1:05 PM

Share

ನವದೆಹಲಿ, ಸೆಪ್ಟೆಂಬರ್ 1: ಆಗಸ್ಟ್ ತಿಂಗಳಲ್ಲಿ ಸರ್ಕಾರಕ್ಕೆ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಸಖತ್ತಾಗಿ ಆಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಕಳೆದ ತಿಂಗಳಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹ (Gross GST) ₹1,99,853 ದಾಖಲಾಗಿದೆ. ಹಿಂದಿನ ವರ್ಷದ ಅದೇ ಅವಧಿಯಲ್ಲಿ (2025ರ ಆಗಸ್ಟ್) 1.74 ಲಕ್ಷ ಕೋಟಿ ರೂ ಜಿಎಸ್​ಟಿ ಸಿಕ್ಕಿತ್ತು. ಜುಲೈ ತಿಂಗಳ ಜಿಎಸ್‌ಟಿ ಸಂಗ್ರಹ ₹2.11 ಲಕ್ಷ ಕೋಟಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡುಬಂದಿದೆ. ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ತೆರಿಗೆ ಸಂಗ್ರಹ ಶೇ. 14.8ರಷ್ಟು ಏರಿಕೆ ಆಗಿದೆ.

ಆಗಸ್ಟ್‌ನಲ್ಲಿ ಸರ್ಕಾರವು ನೀಡಿದ ಒಟ್ಟು ಜಿಎಸ್‌ಟಿ ರಿಫಂಡ್ (GST refund) ಮೊತ್ತವು ಶೇ. 67.9 ರಷ್ಟು ಏರಿಕೆಯಾಗಿ ₹31,795 ಕೋಟಿಗೆ ತಲುಪಿದೆ. ಇದರಲ್ಲಿ ದೇಶೀಯ ಮರುಪಾವತಿಗಳು ಮತ್ತು ರಫ್ತು ಮರುಪಾವತಿಗಳು ಸೇರಿವೆ. ಅಧಿಕೃತ ರಿಫಂಡ್‌ಗಳನ್ನು ವಿಲೇವಾರಿ ಮಾಡಿದ ನಂತರ, ಸರ್ಕಾರದ ಬೊಕ್ಕಸಕ್ಕೆ ಸೇರಿದ ನಿವ್ವಳ ಜಿಎಸ್‌ಟಿ (Net) ಆದಾಯವು ₹1,68,057 ಕೋಟಿ ಆಗಿದೆ. ಇದು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ. 8.3 ರಷ್ಟು ವೃದ್ಧಿಯಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ 121.28ರೂ.ಗೆ ಜಿಗಿದ ಏವಿಯೇಷನ್ ಇಂಧನ ಬೆಲೆ, ಸತತ ಎರಡನೇ ತಿಂಗಳು ಕೂಡ ಏರಿದ ಬೆಲೆ

ಆಮದು ಸರಕುಗಳ ಮೇಲಿನ ತೆರಿಗೆಯ ಕೊಡುಗೆಯಲ್ಲಿ ಏರಿಕೆ

ಆಗಸ್ಟ್ ತಿಂಗಳ ಒಟ್ಟು ಜಿಎಸ್‌ಟಿ ಆದಾಯದಲ್ಲಿ ಆಮದು ಮಾಡಿಕೊಂಡ ಸರಕುಗಳ ಮೇಲಿನ ತೆರಿಗೆ ಸಂಗ್ರಹವು ಶೇ. 29 ರಷ್ಟು ಭಾರಿ ಹೆಚ್ಚಳವಾಗಿದ್ದು, ₹62,604 ಕೋಟಿಗೆ ತಲುಪಿದೆ. ದೇಶೀಯ ವಹಿವಾಟುಗಳಿಂದ ಬಂದ ತೆರಿಗೆ ಆದಾಯವು ಶೇ. 9.3 ರಷ್ಟು ಏರಿಕೆಯಾಗಿ ₹1,37,249 ಕೋಟಿಯಾಗಿದೆ.

ಆರ್ಥಿಕ ಸಶಕ್ತತೆಗೆ ಸಾಕ್ಷಿ: ಆಗಸ್ಟ್​ನಲ್ಲಿ ಉತ್ತಮ ಜಿಎಸ್​ಟಿ ಸಂಗ್ರಹ ದಾಖಲಾಗಿರುವುದು ಭಾರತದಲ್ಲಿ ಕೈಗಾರಿಕಾ ಚಟುವಟಿಕೆಗಳು ಮತ್ತು ಪೂರೈಕೆ ಸರಪಳಿ ಸುಸ್ಥಿತಿಯಲ್ಲಿದೆ ಎಂಬುದನ್ನು ತೋರಿಸುತ್ತದೆ. ಆಗಸ್ಟ್ ಮಾತ್ರವಲ್ಲ, ಜಿಎಸ್​ಟಿ ಸಂಗ್ರಹ ಹಲವು ತಿಂಗಳುಗಳಿಂದ ಸತತವಾಗಿ ಉತ್ತಮ ಮೊತ್ತದಷ್ಟು ದಾಖಲಾಗುತ್ತಿರುವುದು, ಜಿಡಿಪಿ ಬೆಳವಣಿಗೆಯಿಂದ ದ್ಯೋತಕವಾಗಿರುವುದು ಹೌದು.

ಇದನ್ನೂ ಓದಿ: LPG Price Hike:ಸೆಪ್ಟೆಂಬರ್ ಆರಂಭದಲ್ಲೇ ಬೆಲೆ ಏರಿಕೆ ಬಿಸಿ: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರ 9.50 ರೂ. ಹೆಚ್ಚಳ

ಇದೇ ವೇಳೆ, ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 57ನೇ ಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 12ರಂದು ನಡೆಯಲಿದೆ. ಶನಿವಾರ ಬೆಳಗ್ಗೆ 11 ಗಂಟೆಯಿಂದ ಸಭೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us