ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?
India's scientists achieve major breakthrough in nuclear technology: ಹೋಮಿ ಜಹಾಂಗೀರ್ ಬಾಬಾ 1950ರ ದಶಕದಲ್ಲಿ ಹಾಕಿಕೊಟ್ಟ ಮೂರು ಹಂತದ ಪರಮಾಣು ವಿದ್ಯುತ್ ಯೋಜನೆ ಸಾಕಾರಗೊಳ್ಳುವಂತಿದೆ. ಅತ್ಯಲ್ಪ ಯುರೇನಿಯಂ ಬಳಸಿ, ಸಮೃದ್ಧವಾಗಿರುವ ಥೋರಿಯಂ ಸಹಾಯದಿಂದ ಪರಮಾಣು ವಿದ್ಯುತ್ ಶಕ್ತಿ ಉತ್ಪಾದಿಸುವ ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ನವದೆಹಲಿ, ಏಪ್ರಿಲ್ 7: ಪರಮಾಣು ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಭಾರತ ಪ್ರಮುಖ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುವ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲು ಮುಟ್ಟಿದೆ. ಏಪ್ರಿಲ್ 6, ಸೋಮವಾರ ಭಾರತಕ್ಕೆ ಅವಿಸ್ಮರಣೀಯ ದಿನಗಳಲ್ಲಿ ಒಂದೆನಿಸಬಹುದು. ತಮಿಳುನಾಡಿನ ಕಲ್ಪಕ್ಕಮ್ನಲ್ಲಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಪ್ರಮುಖವಾದ ಸ್ವಾವಲಂಬನೆ (Criticality stage) ಹಂತ ಸಾಧಿಸಿದೆ. ಇನ್ನೊಂದು ಹಂತ ದಾಟಿಬಿಟ್ಟರೆ ಭಾರತಕ್ಕೆ ಮುಂದಿನ ನೂರಾರು ವರ್ಷ ಕಾಲ ವಿದ್ಯುತ್ ಸಮಸ್ಯೆ ಇಲ್ಲದಂತಾಗಬಹುದು.
ಭಾರತದಲ್ಲಿ ಯುರೇನಿಯಂ ಕೊರತೆ, ಆದರೆ, ಥೋರಿಯಂ ಸಮೃದ್ಧ…
ಸಾಂಪ್ರದಾಯಿಕ ಪರಮಾಣು ವಿದ್ಯುತ್ ಉತ್ಪಾದನೆಗೆ ಯುರೇನಿಯಂ ಅಗತ್ಯ. ಭಾರತದಲ್ಲಿ ಯುರೇನಿಯಂ ಕೊರತೆ ಇದೆ. ವಿಶ್ವದ ಶೇ. 1-2ರಷ್ಟು ಯುರೇನಿಯಂ ಮಾತ್ರವೇ ಭಾರತದಲ್ಲಿ ಇರುವುದು. ಇಷ್ಟರಿಂದ ಪರಮಾಣು ವಿದ್ಯುತ್ ಉತ್ಪಾದನೆ ದೀರ್ಘಕಾಲ ಸಾಧ್ಯವಿಲ್ಲ. ಬೇರೆ ದೇಶಗಳ ಯುರೇನಿಯಂ ಮೇಲೆ ಅವಲಂಬಿತವಾಗಬೇಕಾಗುತ್ತದೆ.
ಆದರೆ, ಭಾರತದಲ್ಲಿ ಥೋರಿಯಂ ಯಥೇಚ್ಛವಾಗಿದೆ. ವಿಶ್ವದ ಶೇ. 25ರಷ್ಟು ಥೋರಿಯಂ ಸಂಗ್ರಹ ಭಾರತದಲ್ಲಿ ಇದೆ. ಭಾರತಕ್ಕೆ 700 ವರ್ಷಗಳಿಗೆ ಆಗುವಷ್ಟು ವಿದ್ಯುತ್ ಅನ್ನು ಉತ್ಪಾದಿಸಲು ಈ ಥೋರಿಯಂ ಸಾಕಾಗುತ್ತದೆ. ಆದರೆ, ಥೋರಿಯಂ ಮಾತ್ರದಿಂದಲೇ ಪರಮಾಣು ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲ. ಅದಕ್ಕೆ ಯುರೇನಿಯಂ ಬೇಕೇಬೇಕು. ಇದಕ್ಕೆ ಏನು ಪರಿಹಾರ? ಭಾರತೀಯ ವಿಜ್ಞಾನಿಗಳ ಕ್ಷಮತೆ, ಆವಿಷ್ಕಾರ, ತಂತ್ರಜ್ಞಾನ ಸಾಧನೆ ಕೆಲಸ ಮಾಡಿ ತೋರಿಸಿದೆ. ಅದುವೇ ಈಗ ಸುದ್ದಿಯಲ್ಲಿರುವ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್. ಇದು ಒಂದು ರೀತಿಯಲ್ಲಿ ಇಂಧನ ಬಳಸಿ, ಅದರಿಂದ ಹೆಚ್ಚು ಇಂಧನ ಉತ್ಪಾದಿಸುತ್ತದೆ. ಈ ಹಂತವನ್ನೇ ಕ್ರಿಟಿಕಾಲಿಟಿ ಸ್ಟೇಜ್ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಐದು ಕಿಲೋ ಎಲ್ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ
ಅಮೆರಿಕ, ಜಪಾನ್, ಜರ್ಮನಿ ಮೊದಲಾದ ದೇಶಗಳಿಂದ ಸಾಧ್ಯವಾಗದ ಯೋಜನೆ
ಭಾರತ ಸಾಧಿಸಿರುವ ರೀತಿಯ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ನಿರ್ಮಿಸಲು ಹೋಗಿ ಕೈಸುಟ್ಟುಕೊಂಡ ದೇಶಗಳು ಅನೇಕ. ಅಮೆರಿಕ, ಜಪಾನ್, ಫ್ರಾನ್ಸ್, ಜರ್ಮನಿ, ಬ್ರಿಟನ್ ಮೊದಲಾದ ದೇಶಗಳು ತಮ್ಮ ಪ್ರಯತ್ನ ನಿಲ್ಲಿಸಿವೆ. ಆದರೆ, ಭಾರತ ಹಲವು ದಶಕಗಳಿಂದ ಮಾಡಿದ ಪ್ರಯತ್ನದ ಫಲ ಇವತ್ತು ಸಿಕ್ಕಿದೆ. ಭಾರತ ಈ ಪ್ರೋಟೋಟೈಪ್ ರಿಯಾಕ್ಟರ್ಗಾಗಿ ಮಾಡಿದ 8,370 ಕೋಟಿ ರೂ ವೆಚ್ಚ ನೀರಲ್ಲಿ ಹೋಮ ಮಾಡಿದಂತಾಗಲಿಲ್ಲ.
ಭಾರತದ ಈ ಪರಮಾಣ ವಿದ್ಯುತ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?
ಅಲ್ಪ ಯುರೇನಿಯಂ ಮತ್ತು ಸಮೃದ್ಧ ಥೋರಿಯಂ ಬಳಸಿ ಪರಮಾಣು ವಿದ್ಯುತ್ ತಯಾರಿಸಲು ಭಾರತ ಹಾಕಿರುವ ಯೋಜನೆಯಲ್ಲಿ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಸಾಂಪ್ರದಾಯಿಕ ಪಿಎಚ್ಡಬ್ಲ್ಯುಆರ್ ಅಥವಾ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್ಗಳು ಯುರೇನಿಯಂನಿಂದ ಪ್ಲುಟೋನಿಯಂ ಅನ್ನು ತಯಾರಿಸುತ್ತವೆ. ನ್ಯೂಟ್ರಾನ್ಗಳು ಇಲ್ಲಿ ಕರಾಮತ್ತು ಮಾಡುತ್ತವೆ. ಈ ಹಂತದಲ್ಲಿ ವಿದ್ಯುತ್ ಉತ್ಪಾದನೆ ಆಗುವುದರ ಜೊತೆಗೆ ಪ್ಲುಟೋನಿಯಂ ಕೂಡ ಸಂಗ್ರಹ ಆಗುತ್ತಾ ಹೋಗುತ್ತದೆ. ಈ ಹಂತದಲ್ಲಿ ಯುರೇನಿಯಂ ಅವಶ್ಯಕತೆ ಇರುತ್ತದೆ.
ಎರಡನೇ ಹಂತದಲ್ಲಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಬರುತ್ತದೆ. ಇಲ್ಲಿ ಪ್ಲುಟೋನಿಯಂ ಮತ್ತು ಥೋರಿಯಂ ಬಳಸಿ ಯುರೇನಿಯಂ-233 ಅನ್ನು ಉತ್ಪಾದಿಸಲಾಗುತ್ತದೆ. ಇದೇ ಈ ಹಂತದ ವೈಶಿಷ್ಟ್ಯತೆ. ಇಲ್ಲಿ ಇಂಧನ ಬಳಸಿ, ಅದಕ್ಕಿಂತ ಹೆಚ್ಚಿನ ಇಂಧನವನ್ನು ತಯಾರಿಸುತ್ತದೆ. ಬಹಳ ಪ್ರಮುಖವಾದ ಮೂರನೇ ಹಂತಕ್ಕೆ ಇದು ಬುನಾದಿ.
ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ
ಮೂರನೇ ಹಂತದಲ್ಲಿ ಅಡ್ವಾನ್ಸ್ಡ್ ಹೆವಿ ವಾಟರ್ ರಿಯಾಕ್ಟರ್ಸ್ ಬರುತ್ತವೆ. ಇಲ್ಲಿ ಥೋರಿಯಂ-232 ಮತ್ತು ಯುರೇನಿಯಂ-233 ಮಿಶ್ರಣವನ್ನು ಇಂಧನವನ್ನಾಗಿ ಬಳಸುತ್ತದೆ. ಥೋರಿಯಂ ಮತ್ತು ನ್ಯೂಟ್ರಾನ್ಗಳು ಸೇರಿ ಹೆಚ್ಚೆಚ್ಚು ಯುರೇನಿಯಂ-233 ಅನ್ನು ತಯಾರಿಸುತ್ತಾ ಹೋಗಲಾಗುತ್ತದೆ. ಹೀಗೆ, ಯುರೇನಿಯಂ ಅನ್ಲಿಮಿಟೆಡ್ ಆಗಿ ಲಭ್ಯ ಇರುತ್ತದೆ. ಒಂದು ರೀತಿಯ ಇಂಧನ ಅಕ್ಷಯಪಾತ್ರೆ ಅದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




