ಮೊದಲ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಆರ್ಬಿಐ ಅಂದಾಜಿಗಿಂತಲೂ ಹೆಚ್ಚು ಬೆಳೆಯುವ ಸಾಧ್ಯತೆ
India GDP Growth: 2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ ಶೇ. 8ರಷ್ಟು ಜಿಡಿಪಿ ಬೆಳೆಯಬಹುದು ಎಂದು ಆರ್ಬಿಐ ಮಾಡಿದ್ದ ಅಂದಾಜಿಗಿಂತಲೂ ಹೆಚ್ಚು ವೃದ್ಧಿ ಕಾಣುವ ಸಾಧ್ಯತೆ ಇದೆ. ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕದಲ್ಲಿ ಆರ್ಥಿಕತೆ ಶೇ. 8.3 ಮತ್ತು ಶೇ. 8.5ರಷ್ಟು ಬೆಳೆಯಬಹುದು ಎಂದು ಎಸ್ಬಿಐ ಮತ್ತು ಐಸಿಆರ್ಎ ಸಂಸ್ಥೆಗಳ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ನವದೆಹಲಿ, ಆಗಸ್ಟ್ 23: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ (2023ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್) ಭಾರತದ ಜಿಡಿಪಿ (India GDP Growth) ನಿರೀಕ್ಷೆಮೀರಿ ಹೆಚ್ಚು ವೇಗದಲ್ಲಿ ವೃದ್ಧಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ತಿಂಗಳು ಆರ್ಬಿಐ ನಡೆಸಿದ ಎಂಪಿಸಿ ಸಭೆಯಲ್ಲಿ ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ ಆರ್ಥಿಕತೆ ಶೇ. 8ರಷ್ಟು ಬೆಳೆಯಬಹುದು ಎಂಬ ಅಂದಾಜನ್ನು ಪುನರುಚ್ಚರಿಸಿತ್ತು. ಆದರೆ, ಐಸಿಆರ್ಎ ಎಂಬ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅರ್ಥಿಕತಜ್ಞರು (Economists) ದೇಶದ ಜಿಡಿಪಿ ಶೇ. 8ಕ್ಕಿಂತಲೂ ಹೆಚ್ಚು ವೇಗದಲ್ಲಿ ಬೆಳೆಯುವ ಸಾಧ್ಯತೆಯನ್ನು ಕಂಡಿದ್ದಾರೆ. ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.3ರಷ್ಟು ಬೆಳೆಯಬಹುದು ಎಂದು ಎಸ್ಬಿಐ ಅಂದಾಜು ಮಾಡಿದರೆ, ಐಸಿಆರ್ಎನ ಆರ್ಥಿಕ ತಜ್ಞರ ಅನಿಸಿಕೆ ಪ್ರಕಾರ ಜಿಡಿಪಿ ಶೇ. 8.5ರಷ್ಟು ಹೆಚ್ಚಬಹುದು.
ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಜಾಗತಿಕ ಆರ್ಥಿಕ ಚಟುವಟಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ. ಇದರಿಂದ ಸರ್ವಿಸ್ ಸೆಕ್ಟರ್ಗೆ ಪುಷ್ಟಿ ಸಿಕ್ಕಿದೆ. ಈ ಸೇವಾ ವಲಯವು ಭಾರತದ ಆರ್ಥಿಕತೆಯನ್ನು ಮುನ್ನಡೆಸುತ್ತಿರುವುದು ಈ ಕ್ವಾರ್ಟರ್ನಲ್ಲಿ ಆರ್ಥಿಕ ತಜ್ಞರಿಗೆ ಕಂಡು ಬಂದಿರುವ ಸಂಗತಿ.
ಇದನ್ನೂ ಓದಿ: ಚೀನಾದ ಆರ್ಥಿಕ ಪತನ ಶುರುವಾಗಿದ್ದ ಕೋವಿಡ್ನಿಂದಲ್ಲ; 15 ವರ್ಷದ ಹಿಂದೆಯೇ ಆರಂಭವಾಗಿದ್ದವಾ ಚೀನೀ ದುರ್ದಿನಗಳು?
ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯು ಜಾಗತಿಕ ಆರ್ಥಿಕತೆಯ ಬೆಳವಣಿಗೆ ಶೇ. 3.5ರಿಂದ ಶೇ. 3ಕ್ಕೆ ಕುಸಿಯಬಹುದು ಎಂದು ಅಂದಾಜು ಮಾಡಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಗ್ಲೋಬಲ್ ಎಕನಾಮಿ ಗಮನಾರ್ಹ ರೀತಿಯಲ್ಲಿ ಸೆಟೆದು ನಿಂತಿದೆ. ಹೀಗಾಗಿ, ಸೇವಾ ವಲಯ ಗರಿಗೆದರಿದೆ. ಈ ಕ್ಷೇತ್ರದಲ್ಲಿ ಭಾರತ ಪ್ರಬಲವಾಗಿರುವುದು ಇಲ್ಲಿನ ಜಿಡಿಪಿ ವೃದ್ಧಿ ನಿಟ್ಟಿನಲ್ಲಿ ವರದಾನವಾಗಿ ಪರಿಣಮಿಸಿದೆ.
ಭಾರತದ ಜಿಡಿಪಿಯನ್ನು ಬೆಳೆಸುತ್ತಿರುವುದು ಜಾಗತಿಕ ಆರ್ಥಿಕ ಚೇತರಿಕೆ ಸ್ಥಿತಿ ಮಾತ್ರವಲ್ಲ, ಸಾಕಷ್ಟು ಬಂಡವಾಳ ಹೂಡಿಕೆಗಳು ಫಲ ಕೊಡುತ್ತಿವೆ. ಅದರಲ್ಲೂ ಸರ್ಕಾರದಿಂದಲೇ ಆಗುತ್ತಿರುವ ಬಂಡವಾಳ ವೆಚ್ಚವು ಆರ್ಥಿಕತೆಯನ್ನು ಎತ್ತಿ ಮುನ್ನುಗ್ಗಿಸುತ್ತಿದೆ.
ಇದನ್ನೂ ಓದಿ: ಅದಾನಿ ಕಂಪನಿಗೆ ದಂಡ ವಿಧಿಸಿದ ಸ್ಟಾಕ್ ವಿನಿಮಯ ಕೇಂದ್ರಗಳು; ಕ್ರಮ ಒಪ್ಪದ ಅದಾನಿ ಎಂಟರ್ಪ್ರೈಸಸ್; ಏನು ಕಾರಣ?
ಐಸಿಆರ್ಎನ ಮುಖ್ಯ ಆರ್ಥಿಕತಜ್ಞೆ ಅದಿತಿ ನಾಯರ್ ಹಾಗೂ ಎಸ್ಬಿಐನ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಾ ಕಾಂತಿ ಘೋಷ್ ಬಹುತೇಕ ಅದೇ ಅಭಿಪ್ರಾಯ ಪುನರುಚ್ಚರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ