Shopping Behaviour: ಆನ್ಲೈನ್ ಶಾಪಿಂಗ್: ಜಗತ್ತಿನಲ್ಲಿ ಭಾರತೀಯರೇ ಅತಿಹೆಚ್ಚು ಆತುರಗಾರರಂತೆ; ಜನರ ಮಿಡಿತ ಅರಿತು ಜಾಣರಾದ ಕಂಪನಿಗಳು
Indians Most Impatient Online Shoppers: ಜಗತ್ತಿನ ಆನ್ಲೈನ್ ಶಾಪರ್ಗಳ ಪೈಕಿ ತಾಳ್ಮೆ ಇಲ್ಲದವರು ಹೆಚ್ಚು ಯಾರಾದರೂ ಇದ್ದಾರಂದರೆ ಅದು ಭಾರತೀಯರಂತೆ ಎಂದು ವಂಡರ್ಮ್ಯಾನ್ ಥಾಂಪ್ಸನ್ ಎಂಬ ಕಂಪನಿ ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರಲ್ಲಿ ತಿಳಿಸಿದೆ.
ನವದೆಹಲಿ, ಜುಲೈ 26: ಸ್ಮಾರ್ಟ್ಫೋನ್ ಬಂದ ಮೇಲೆ ಜನರ ವರ್ತನೆ ಬದಲಾಗಿದೆ. ಇಕಾಮರ್ಸ್ ಬೆಳೆದಂತೆ ಜನರ ಆನ್ಲೈನ್ ಶಾಪಿಂಗ್ ವರ್ತನೆ ಬದಲಾಗುತ್ತಾ ಹೋಗಿದೆ. ಭಾರತದಲ್ಲಿ ಶೇ. 45ರಷ್ಟು ಡಿಜಿಟಲ್ ಉತ್ಪನ್ನಗಳು ಆನ್ಲೈನ್ನಲ್ಲೇ ಮಾರಾಟವಾಗುತ್ತವೆ. ಭಾರತದ ರೀಟೇಲ್ ಮಾರುಕಟ್ಟೆಯಲ್ಲಿ ಶೇ. 6.5ರಷ್ಟು ಪಾಲು ಆನ್ಲೈನ್ ಮಾರಾಟದಿಂದಲೇ ಇದೆ. ಸಾಕಷ್ಟು ಜನರು ಬಟ್ಟೆ ಬರೆ, ಗ್ಯಾಜೆಟ್ ಇತ್ಯಾದಿಯನ್ನು ಆನ್ಲೈನ್ನಲ್ಲೇ ಖರೀದಿಸುತ್ತಾರೆ. ಈ ಮಧ್ಯೆ ಜಾಗತಿಕ ವರದಿಯೊಂದು ವಿಶ್ವಾದ್ಯಂತ ಜನರ ಶಾಪಿಂಗ್ ವರ್ತನೆ (Shopping Behaviour) ಬಗ್ಗೆ ಬೆಳಕು ಚೆಲ್ಲಿದೆ. ಕುತೂಹಲದ ಸಂಗತಿ ಇರುವುದು ಭಾರತೀಯರ ಶಾಪಿಂಗ್ ವರ್ತನೆಯದ್ದು. ಆನ್ಲೈನ್ ಶಾಪಿಂಗ್ ವಿಚಾರಕ್ಕೆ ಬಂದರೆ ಭಾರತೀಯರು ವಿಶ್ವದಲ್ಲೇ ಅತ್ಯಂತ ಅಸಹನಶೀಲರಂತೆ. ಅಂದರೆ ತಾಳ್ಮೆ ಇಲ್ಲದ ಆನ್ಲೈನ್ ಶಾಪರ್ಗಳು ಭಾರತೀಯರು ಎಂದು ವಂಡರ್ಮ್ಯಾನ್ ಥಾಂಪ್ಸನ್ (Wunderman Thompson) ಎಂಬ ರಿಸರ್ಚ್ ಕಂಪನಿ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.
ಭಾರತೀಯರು ಯಾಕೆ ಆತುರಗಾರರು?
ಭಾರತದಲ್ಲಿ ಆನ್ಲೈನ್ ಶಾಪಿಂಗ್ ಮಾಡುವವರಲ್ಲಿ ಶೇ. 38ರಷ್ಟು ಮಂದಿಗೆ ತಾವು ಆರ್ಡರ್ ಮಾಡಿದ ವಸ್ತುಗಳು 2 ಗಂಟೆಯೊಳಗೆ ಬರಬೇಕೆಂದು ಅಪೇಕ್ಷಿಸುತ್ತಾರಂತೆ. ಕ್ವಿಕ್ ಡೆಲಿವರಿ ನಿರೀಕ್ಷೆಯಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಭಾರತದವರೇ ಮುಂದಿದ್ದಾರೆ.
ಇದನ್ನೂ ಓದಿ: Economy: ಜಗತ್ತು ಅಲುಗಾಡಿದರೂ ಭಾರತ ನಿಶ್ಚಲ; 2023ರಲ್ಲಿ ಭಾರತದಿಂದ ನಿರೀಕ್ಷೆಮೀರಿದ ಆರ್ಥಿಕವೃದ್ಧಿ: ಐಎಂಎಫ್ ಅಂದಾಜು
ಹಾಗೆಯೇ, ಆರ್ಡರ್ ಮಾಡಿದ ಉತ್ಪನ್ನಗಳನ್ನು ರಿಟರ್ನ್ ಮಾಡುವುದರಲ್ಲೂ ಭಾರತೀಯರು ಮುಂದಿದ್ದಾರೆ. ಈ ರಿಪೋರ್ಟ್ ಪ್ರಕಾರ, ಆನ್ಲೈನ್ ಶಾಪಿಂಗ್ ಮಾಡುವ ಭಾರತೀಯರು ಶೇ. 37ರಷ್ಟು ಉತ್ಪನ್ನಗಳನ್ನು ಮರಳಿಸುತ್ತಾರಂತೆ. ಈ ವಿಚಾರದಲ್ಲಿ ಭಾರತ ಯುಎಇ ನಂತರದ ಸ್ಥಾನದಲ್ಲಿದೆ. ಉತ್ಪನ್ನದ ಗುಣಮಟ್ಟದ ಬಗ್ಗೆ ತಕರಾರು ಇದ್ದು ಮರಳಿಸುವವರೇ ಹೆಚ್ಚು.
ಆನ್ಲೈನ್ ಶಾಪರ್ಗಳ ನಾಡಿಮಿಡಿತ ಅರಿತ ಕಂಪನಿಗಳೇ ಜಾಣ
ಭಾರತದ ಆನ್ಲೈನ್ ಶಾಪರ್ರಗಳ ಮಂತ್ರ ಎಂದರೆ ಅದು ಕ್ವಿಕ್ ಡೆಲಿವರಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ. ಇವೆರಡನ್ನು ಒದಗಿಸುವ ಕಂಪನಿಗಳಿಗೆ ಭಾರತದಲ್ಲಿ ಭವಿಷ್ಯ ಇದೆ. ಭಾರತೀಯ ಶಾಪರ್ಗಳ ಕ್ವಿಕ್ ಡೆಲಿವರಿ ಬಯಕೆಯನ್ನು ಅರಿತ ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್, ಸ್ವಿಗ್ಗಿ ಇನ್ಸ್ಟಾಮಾರ್ಟ್, ಬ್ಲಿಂಕಿಟ್, ಡುಂಜೋ ಮೊದಲಾದ ಕಂಪನಿಗಳು ಒಳ್ಳೆಯ ಬ್ಯುಸಿನೆಸ್ ಕಾಣುತ್ತಿವೆ.
ಇದನ್ನೂ ಓದಿ: Alcohol King: ಶೇ. 66ರಷ್ಟು ಮಾರುಕಟ್ಟೆ ಪ್ರಾಬಲ್ಯ; ಇದೇ ಭಾರತದಲ್ಲಿ ಸ್ಪಿರಿಟ್ಗಳ ರಾಜ
ಆದರೆ, ಕ್ವಿಕ್ ಡೆಲಿವರಿ ಸರ್ವಿಸ್ ಒದಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಡೆಲಿವರಿ ಹುಡುಗರು ಸೇರಿದಂತೆ ಸಮರ್ಪಕ ಇನ್ಫ್ರಾಸ್ಟ್ರಕ್ಚರ್ ಮತ್ತು ಇಕೋಸಿಸ್ಟಂ ಅನ್ನು ಕಂಪನಿಗಳು ಹೊಂದಿರಬೇಕು. ಅದು ಸವಾಲಿನ ಕೆಲಸ. ಆದರೆ, ಸ್ಪರ್ಧಾತ್ಮಕ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಕಂಪನಿಗಳು ಅಣಿಗೊಳ್ಳುವುದು ಅನಿವಾರ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ