ಜಾಗತಿಕ ಅನಿಶ್ಚಿತತೆ ಎದುರಿಸುವಷ್ಟು ಬಲ ಭಾರತದ ಆರ್ಥಿಕತೆಗೆ ಇದೆ: ಹಣಕಾಸು ಸಚಿವಾಲಯದ ವಿಶ್ವಾಸ
ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಆರ್ಥಿಕ ಅನಿಶ್ಚಿತತೆಗಳು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ಭದ್ರವಾದ ಅಡಿಪಾಯವನ್ನು ಒದಗಿಸುತ್ತವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿಯಲ್ಲಿ ತಿಳಿಸಲಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಜಿಡಿಪಿ ದರ ಬಂದ ಬಳಿಕ ಆರ್ಥಿಕ ಬೆಳವಣಿಗೆಯ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ನವದೆಹಲಿ, ಅಕ್ಟೋಬರ್ 30: ಜಾಗತಿಕ ಆರ್ಥಿಕತೆಯಲ್ಲಿ ತಲೆದೋರುತ್ತಿರುವ ಅನಿಶ್ಚಿತತೆಗಳು ಮತ್ತು ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕತೆಯು ಅತ್ಯಂತ ಸದೃಢವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಇತ್ತೀಚಿನ ವರದಿಯು ವಿಶ್ವಾಸ ವ್ಯಕ್ತಪಡಿಸಿದೆ. ದೇಶದ ಬಲವಾದ ಆರ್ಥಿಕ ಮೂಲಭೂತ ಅಂಶಗಳು (Economic Fundamentals) ಯಾವುದೇ ಜಾಗತಿಕ ಆಘಾತಗಳನ್ನು ಅಥವಾ ಏರಿಳಿತಗಳನ್ನು ಎದುರಿಸಲು ಭದ್ರವಾದ ಬುನಾದಿಯನ್ನು ಒದಗಿಸುತ್ತವೆ ಎಂದು ಅಕ್ಟೋಬರ್ ತಿಂಗಳ ಈ ಮಾಸಿಕ ಆರ್ಥಿಕ ಅವಲೋಕನಾ ವರದಿ ತಿಳಿಸಿದೆ.
ಜಾಗತಿಕ ಅನಿಶ್ಚಿತತೆಗಳ ಎದುರು ಸ್ಥಿರತೆ: ಪ್ರಪಂಚದಾದ್ಯಂತ ಆರ್ಥಿಕ ಬೆಳವಣಿಗೆಯು ಮಂದವಾಗುತ್ತಿರುವ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿಯೂ, ಭಾರತೀಯ ಮಾರುಕಟ್ಟೆಯು ತನ್ನ ಆಂತರಿಕ ಬಲದಿಂದಾಗಿ ಅತ್ಯುತ್ತಮ ಸ್ಥಿರತೆಯನ್ನು ಕಾಯ್ದುಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: PM Kisan scheme: ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ; ಅರ್ಹ ರೈತರಿಗೆ 18,000 ರೂ ವಿತರಣೆ
ಭದ್ರವಾದ ಆರ್ಥಿಕ ಬುನಾದಿ: ದೇಶದ ಹಣಕಾಸು ವ್ಯವಸ್ಥೆ, ಗೃಹ ಬಳಕೆ ಬೇಡಿಕೆ, ಹೂಡಿಕೆ ಅವಕಾಶಗಳು ಮತ್ತು ದೃಢವಾದ ಉತ್ಪಾದನಾ ವಲಯವು ಆರ್ಥಿಕತೆಯ ಚಕ್ರವನ್ನು ವೇಗವಾಗಿ ಮುನ್ನಡೆಸುತ್ತಿದ್ದು, ಇದು ಬಾಹ್ಯ ಆರ್ಥಿಕ ಅಸ್ಥಿರತೆಯ ಪರಿಣಾಮವನ್ನು ತಗ್ಗಿಸಲು ಸಹಕಾರಿಯಾಗಿದೆ ಎಂದು ಹಣಕಾಸು ಇಲಾಖೆಯ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಈ ಹಣಕಾಸು ವರ್ಷದ (2026-27) ಮೊದಲ ಕ್ವಾರ್ಟರ್ನಲ್ಲಿ (2026ರ ಏಪ್ರಿಲ್ನಿಂದ ಜೂನ್) ಜಿಡಿಪಿ ಶೇ. 7.8ರಷ್ಟು ಬೆಳೆದಿದ್ದು ಆ ನಂತರವೂ ಭಾರತದ ಆರ್ಥಿಕತೆಯ ಶಕ್ತಿ ಬಲವಾಗಿಯೇ ಇದೆ ಎಂಬುದನ್ನು ಸಚಿವಾಲಯದ ಈ ಮಾಸಿಕ ವರದಿಯಲ್ಲಿ ತಿಳಿಸಲಾಗಿದೆ.
ಮುಂದಿನ ಬೆಳವಣಿಗೆಯ ವಿಶ್ವಾಸ
ಮೊದಲ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಎಲ್ಲರ ನಿರೀಕ್ಷೆಮೀರಿ ಬೆಳವಣಿಗೆ ಹೊಂದಿದೆ. ಅದಾದ ಬಳಿಕ ಬಹುತೇಕ ಎಲ್ಲಾ ರಾಷ್ಟ್ರೀಯ ಅಂತರರಾಷ್ಟ್ರೀಯ ಏಜೆನ್ಸಿಗಳು ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಹಣಕಾಸು ಸಚಿವಾಲಯ ಕೂಡ ಹೆಚ್ಚು ಆಶಾದಾಯಕವಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.3ರಷ್ಟು ಹೆಚ್ಚಬಹುದು ಎಂದಿದೆ.
ಇದನ್ನೂ ಓದಿ: ಅಗ್ರಿಕಲ್ಚರ್ ಈಸ್ ಅವರ್ ಕಲ್ಚರ್ ಎಂದ ಮೋದಿ: ಗುಜರಾತ್‌ಗೆ 14 ಸಾವಿರ ಕೋಟಿ ರೂ. ಯೋಜನೆಗಳ ಕೊಡುಗೆ
ಸರ್ಕಾರದ ದೂರದೃಷ್ಟಿಯ ಆರ್ಥಿಕ ನೀತಿಗಳು ಮತ್ತು ರಚನಾತ್ಮಕ ಸುಧಾರಣೆಗಳಿಂದಾಗಿ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಮುಂದುವರಿಸಲಿದೆ ಎಂದು ವರದಿ ಸ್ಪಷ್ಟಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




