ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ; ಅತಿವೇಗದ ಸಬ್ಸ್ಕ್ರಿಪ್ಷನ್ ಸೇರಿ ಪ್ರಮುಖ ದಾಖಲೆಗಳು; ಹೊಸ ಇತಿಹಾಸ
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ 30,213 ಕೋಟಿ ರೂ ಗಾತ್ರದ್ದಾಗಿದ್ದು, ಮೊದಲ ದಿನವೇ ಗುರುತರ ದಾಖಲೆಗಳನ್ನು ಮಾಡಿದೆ. ಆಂಕರ್ ಇನ್ವೆಸ್ಟರ್ಸ್, ಕ್ಯೂಐಬಿ, ಎನ್ಐಐ ಕೆಟಗರಿಯ ಷೇರುಗಳು ಪೂರ್ಣವಾಗಿ ಸಬ್ಸ್ಕ್ರೈಬ್ ಆಗಿವೆ. ರೀಟೇಲ್ ಕೆಟಗರಿಯಲ್ಲಿ ಶೇ. 60ರಷ್ಟು ಬಿಡ್ಡಿಂಗ್ ಮೊದಲ ದಿನವೇ ಆಗಿದೆ. ಅಲ್ಲಿಯೂ ಹಲವು ಪಟ್ಟು ಹೆಚ್ಚು ಸಬ್ಸ್ರಿಪ್ಷನ್ ಆಗುವ ನಿರೀಕ್ಷೆ ಇದೆ. ಈ ಐಪಿಒ ಕೆಲ ದಾಖಲೆಗಳನ್ನೂ ಮಾಡಿದೆ.

ಮುಂಬೈ, ಅಕ್ಟೋಬರ್ 21: ರಿಲಯನ್ಸ್ ಇಂಡ್ಟ್ರೀಸ್ಗೆ ಸೇರಿದ ಜಿಯೋ ಪ್ಲಾಟ್ಫಾರ್ಮ್ಸ್ ಸಂಸ್ಥೆ ತನ್ನ ಐಪಿಒದ ಮುಕ್ತಾಯಕ್ಕೂ ಮುನ್ನವೇ ಭಾರೀ ಸ್ಪಂದನೆ ಪಡೆದಿದೆ. 30,213 ಕೋಟಿ ರೂ ಮೊತ್ತದ ಐಪಿಒಗೆ ನಿರೀಕ್ಷೆಮೀರಿದಷ್ಟು ಬಿಡ್ಡಿಂಗ್ಗಳು ಸಲ್ಲಿಕೆಯಾಗಿವೆ. ರೀಟೇಲ್ ಹೂಡಿಕೆದಾರರು ಐಪಿಒದ ಮೊದಲ ದಿನವೇ ಶೇ. 50ಕ್ಕಿಂತ ಹೆಚ್ಚು ಷೇರುಗಳಿಗೆ ಬಿಡ್ ಮಾಡಿದ್ದಾರೆ. ಆಂಕರ್ ಇನ್ವೆಸ್ಟರ್ಗಳು, ಸಾಂಸ್ಥಿಕ ಹೂಡಿಕೆದಾರರು, ಎನ್ಐಐಗಳ ಪಾಲಿನ ಷೇರುಗಳಿಗೆ ಹಲವು ಪಟ್ಟು ಹೆಚ್ಚು ಬಿಡ್ಡಿಂಗ್ ಆಗಿವೆ.
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದಲ್ಲಿ ಒಟ್ಟು 27 ಕೋಟಿ ಷೇರುಗಳನ್ನು ವಿತರಿಸಲಾಗುತ್ತಿದೆ. ಇದರ ಗರಿಷ್ಠ ಮೊತ್ತ 30,213 ಕೋಟಿ ರೂ. ಈ ಪೈಕಿ ಆಂಕರ್ ಇನ್ವೆಸ್ಟರ್ ಕೆಟಗರಿಗೆ ಗರಿಷ್ಠ 8,110 ಕೋಟಿ ರೂ ಮೊತ್ತದ ಷೇರುಗಳನ್ನು ಮೀಸಲಿರಿಸಲಾಗಿದೆ. ಇದಕ್ಕೆ 30 ಪಟ್ಟು ಹೆಚ್ಚು ಮೊತ್ತದ ಬಿಡ್ಡಿಂಗ್ ಸಲ್ಲಿಕೆಯಾಗಿತ್ತು.
ಕ್ಯೂಐಬಿ ಅಥವಾ ಇತರೆ ಸಾಂಸ್ಥಿಕ ಹೂಡಿಕೆದಾರರ ಕೆಟಗರಿಯಲ್ಲಿ ಏಳು ಪಟ್ಟು ಹೆಚ್ಚು ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಎನ್ಆರ್ಐ, ಹೆಚ್ಎನ್1 (ಶ್ರೀಮಂತರು) ಮಂದಿ ಇರುವ ಎನ್ಐಐ ಕೆಟಗರಿಯಲ್ಲೂ ಮೀಸಲಾದ ಮೊತ್ತಕ್ಕಿಂತ ಹೆಚ್ಚು ಬಿಡ್ಡಿಂಗ್ ಆಗಿದೆ.
ಇದನ್ನೂ ಓದಿ: ಮಾರ್ಕೊ ರೂಬಿಯೋ-ಮುಕೇಶ್ ಅಂಬಾನಿ ಭೇಟಿ; ಅಮೆರಿಕದ ವಿದೇಶಾಂಗ ಸಚಿವನಿಗೆ ರಿಲಯನ್ಸ್ ದಿಗ್ಗಜನೊಂದಿಗೆ ಏನು ಕೆಲಸ? ಇಲ್ಲಿವೆ ಕಾರಣಗಳು
ಇನ್ನು, ಶೇ. 35ಕ್ಕಿಂತ ಹೆಚ್ಚು ಷೇರುಪಾಲು ಹೊಂದಿರುವ ರೀಟೇಲ್ ಹೂಡಿಕೆದಾರರ ಕೆಟಗರಿಯೂ ಬೇಗ ಪೂರ್ಣಗೊಳ್ಳುತ್ತಿದೆ. ಇವತ್ತಷ್ಟೇ ಈ ಕೆಟಗರಿಗೆ ಸಬ್ಸ್ಕ್ರಿಪ್ಷನ್ ಅವಕಾಶ ಶುರುವಾಗಿದೆ. ಮೊದಲ ದಿನವೇ ಶೇ. 50ಕ್ಕಿಂತ ಹೆಚ್ಚು ಷೇರುಗಳಿಗೆ ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಅಕ್ಟೋಬರ್ 23ರಷ್ಟರಲ್ಲಿ ಇದು ಹಲವು ಪಟ್ಟು ಹೆಚ್ಚು ಸಬ್ಸ್ಕ್ರಿಪ್ಷನ್ ಪಡೆಯುವ ನಿರೀಕ್ಷೆ ಇದೆ. ಇದರ ಮಧ್ಯೆ ಜಿಯೋ ಐಪಿಒದ ಜಿಎಂಪಿ ಕೂಡ ಸತತವಾಗಿ ಏರಿಕೆ ಕಾಣುತ್ತಾ ಬರುತ್ತಿದೆ.
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ ಈವರೆಗೆ ಸಾಧಿಸಿದ ದಾಖಲೆಗಳಿವು…
- ಭಾರತದ ಅತಿದೊಡ್ಡ ಐಪಿಒ: ಹ್ಯೂಂಡಾಯ್ ಮೋಟಾರ್ ಇಂಡಿಯಾ ಇತ್ತೀಚೆಗೆ 27,870 ಕೋಟಿ ರೂ ಮೊತ್ತದ ಐಪಿಒ ಪೂರ್ಣಗೊಳಿಸಿತ್ತು. ಈಗ ಜಿಯೋ ಐಪಿಒ 30,213 ಕೋಟಿ ರೂನದ್ದಾಗಿದೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನಿಸಿದೆ.
- ಅತಿವೇಗದ ಐಪಿಒ: ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದ ಆಂಕರ್ ಇನ್ವೆಸ್ಟರ್ಸ್ ಕೆಟಗರಿಯಲ್ಲಿ ಕೇವಲ 100 ನಿಮಿಷಗಳ ಅವಧಿಯೊಳಗೆ ಪೂರ್ಣ ಸಬ್ಸ್ಕ್ರಿಪ್ಷನ್ ಮುಟ್ಟಿತ್ತು. ದೊಡ್ಡ ಸಂಸ್ಥೆಗಳ ಪೈಕಿ, ಕಡಿಮೆ ಅವಧಿಯಲ್ಲಿ ಈ ಕೆಟಗರಿಯ ಸಬ್ಸ್ಕ್ರಿಪ್ಷನ್ ಪೂರ್ಣಗೊಳಿಸಿದ ದಾಖಲೆ ಇದು.
- ಕ್ಯೂಐಬಿ ಕೆಟಗರಿ 28 ನಿಮಿಷಕ್ಕೆ ಪೂರ್ಣ: ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಕೆಟಗರಿಯಲ್ಲಿ ಕೇವಲ 28 ನಿಮಿಷಗಳಲ್ಲಿ ಪೂರ್ಣ ಸಬ್ಸ್ಕ್ರಿಪ್ಷನ್ ಮುಗಿದಿತ್ತು. ಇದೂ ಕೂಡ ದಾಖಲೆಯೇ.
ಹಾಗೆಯೇ, ಎನ್ಐಐ ಕೆಟಗರಿಯಲ್ಲೂ ಬೇಗನೇ ಸಬ್ಸ್ಕ್ರಿಪ್ಷನ್ ಮುಗಿದಿದೆ. ಉದ್ಯೋಗಿಗಳಿಗೆ ಮೀಸಲಾದ ಷೇರುಗಳೂ ಕೂಡ ಪೂರ್ಣ ಬಿಡ್ಡಿಂಗ್ ಪಡೆದಿವೆ. ರೀಟೇಲ್ ಕೆಟಗರಿ ಎರಡನೇ ದಿನ ಪೂರ್ಣ ಸಬ್ಸ್ಕ್ರಿಪ್ಷನ್ ಪಡೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: ಜಿಯೋ ಐಪಿಒ; ಆಂಕರ್ ಇನ್ವೆಸ್ಟರ್ಸ್ ನಂತರ ಸಾಂಸ್ಥಿಕ ಹೂಡಿಕೆದಾರರಿಂದಲೂ ಭರ್ಜರಿ ಸ್ಪಂದನೆ
ಜಿಯೋ ಐಪಿಒ ವಿವರ
- ಒಟ್ಟು ಷೇರುಗಳು: 27 ಕೋಟಿ
- ಷೇರುಬೆಲೆ: 1,065-1,119 ರೂ
- ದಿನಾಂಕ: ಅಕ್ಟೋಬರ್ 21ರಿಂದ 23ರವರೆಗೆ
- ಲಿಸ್ಟಿಂಗ್ ದಿನಾಂಕ: ಅಕ್ಟೋಬರ್ 28ಕ್ಕೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
