Pakistan: ಇತಿಹಾಸದಲ್ಲೇ ಮೊದಲ ಬಾರಿಗೆ ಹಜ್ ಕೋಟಾ ಬಿಟ್ಟ ಪಾಕಿಸ್ತಾನ; ಏನು ಕಾರಣ? ಇದರಿಂದ ಉಳಿಯುವ ಹಣ ಎಷ್ಟು?

Pakistan Returns Hajj Quota To Saudi: ತನಗಿರುವ ಹಜ್ ಕೋಟಾದಲ್ಲಿ 8,000 ಸೀಟುಗಳನ್ನು ಪಾಕಿಸ್ತಾನ ಸೌದಿ ಅರೇಬಿಯಾಗೆ ಬಿಟ್ಟುಕೊಟ್ಟಿದೆ. ಇದರಿಂದ ಪಾಕಿಸ್ತಾನಕ್ಕೆ 676 ಕೋಟಿ ರುಪಾಯಿಯಷ್ಟು ಹಣ ಉಳಿತಾಯ ಆಗುವ ಅಂದಾಜಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಪಾಕಿಸ್ತಾನಕ್ಕೆ ಹಜ್ ಯಾತ್ರೆ ಪೂರ್ಣಗೊಳಿಸದೇ ಹೋದ ಪರಿಸ್ಥಿತಿ ಉದ್ಭವಿಸಿದೆ.

Pakistan: ಇತಿಹಾಸದಲ್ಲೇ ಮೊದಲ ಬಾರಿಗೆ ಹಜ್ ಕೋಟಾ ಬಿಟ್ಟ ಪಾಕಿಸ್ತಾನ; ಏನು ಕಾರಣ? ಇದರಿಂದ ಉಳಿಯುವ ಹಣ ಎಷ್ಟು?
ಹಜ್ ಯಾತ್ರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 09, 2023 | 11:17 AM

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Pakistan Economic Crisis) ನಲುಗುತ್ತಿರುವ ಪಾಕಿಸ್ತಾನಕ್ಕೆ ಈಗ ಕವಡೆ ಕಾಸು ಕೂಡ ಕಿಮ್ಮತ್ತು ಎನಿಸುವ ಮಟ್ಟದ ಪರಿಸ್ಥಿತಿ ಇದೆ. ಬೆಲೆ ಏರಿಕೆ, ಸಾಲಬಾಧಗಳಿಂದ ಜರ್ಝರಿತವಾಗಿರುವ ಪಾಕಿಸ್ತಾನ ಇದೀಗ ಹಜ್ ಯಾತ್ರೆಗೆ ತನಗಿರುವ ಮೀಸಲು ಸ್ಥಾನಗಳ (Hajj Quota) ಪೈಕಿ ಕೆಲವನ್ನು ಬಿಟ್ಟುಕೊಟ್ಟಿದೆ. ಪಾಕಿಸ್ತಾನ ತನ್ನ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ನಿರ್ಧಾರ ಕೈಗೊಂಡಿದ್ದು. ಪಾಕಿಸ್ತಾನ ತನ್ನ ಹಜ್ ಕೋಟಾವನ್ನು ಸೌದಿ ಅರೇಬಿಯಾಗೆ ಬಿಟ್ಟುಕೊಟ್ಟಿದೆ. ಬಳಕೆ ಆಗದೇ ಉಳಿದಿರುವ 8,000ದಷ್ಟು ಮಂದಿಯ ಕೋಟಾವನ್ನು ಪಾಕಿಸ್ತಾನ ಹಿಂದಿರುಗಿಸಿದೆ. ಬಹಳ ಮಂದಿ ಪಾಕಿಸ್ತಾನೀಯರು ಆರ್ಥಿಕ ತೊಂದರೆ ಕಾರಣದಿಂದ ಹಜ್ ಯಾತ್ರೆ ಕೈಬಿಟ್ಟಿದ್ದಾರೆಂಬ ಸುದ್ದಿ ಇದೆ. ಈ ಕಾರಣಕ್ಕೆ ಕೋಟಾ ಸಂಖ್ಯೆಯ ಪೂರ್ಣಪ್ರಮಾಣದಲ್ಲಿ ಯಾತ್ರಿಕರು ಪ್ರವಾಸಕ್ಕೆ ನೊಂದಣಿ ಮಾಡಿಸಿಲ್ಲ.

ಹಜ್ ಯಾತ್ರೆಯ ಮೀಸಲು ಸೀಟುಗಳನ್ನು ಮರಳಿಸಿ ಪಾಕಿಸ್ತಾನ ಉಳಿಸಿದ ಹಣ 676 ಕೋಟಿ ರೂ

ಹಜ್ ಯಾತ್ರೆಗೆ ಹೋಗುವ ಸಂಖ್ಯೆಗೆ ಮಿತಿ ಇರುತ್ತದೆ. ಒಂದೊಂದು ದೇಶದಿಂದ ಇಂತಿಷ್ಟು ಹಜ್ ಯಾತ್ರಿಕರಿಗೆ ಪ್ರತೀ ವರ್ಷ ಅವಕಾಶ ಇರುತ್ತದೆ. ಈ ಬಾರಿ ಪಾಕಿಸ್ತಾನ ಜಗಳ ಮಾಡಿ ಕೋಟಾ ಹೆಚ್ಚಿಸಿಕೊಂಡಿತ್ತು. ಭಾರತಕ್ಕೆ ಹಜ್ ಯಾತ್ರೆಗೆ ಸಿಕ್ಕಿರುವ ಮೀಸಲು 1.75 ಲಕ್ಷ. ಪಾಕಿಸ್ತಾನದಿಂದ 2023ರ ಹಜ್ ಯಾತ್ರೆಗೆ 1,79,210 ಮಂದಿಗೆ ಮೀಸಲು ಹೆಚ್ಚಿಸಲಾಗಿದೆ. ಆದರೆ, ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಜನರು ಲಕ್ಷಾಂತರ ರೂ ಖರ್ಚಾಗುವ ಹಜ್ ಯಾತ್ರೆ ಕೈಗೊಳ್ಳಲು ಅಸಾಧ್ಯದ ಪರಿಸ್ಥಿತಿಯಲ್ಲಿದ್ದಾರೆ. ಪಾಕಿಸ್ತಾನಕ್ಕೂ ಸಬ್ಸಿಡಿ ದರದಲ್ಲಿ ಹಜ್ ಯಾತ್ರಿಕರನ್ನು ಕಳುಹಿಸಲು ಕಷ್ಟವಾಗುತ್ತಿದೆ. ಈ ಕಾರಣಕ್ಕೆ ಹಜ್ ಯಾತ್ರೆಗೆ ಪಾಕಿಸ್ತಾನದಿಂದ ನಿರುತ್ಸಾಹ ಕಂಡುಬಂದಿದೆ.

ಇದನ್ನೂ ಓದಿ: Inspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್​ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ

ಈಗ ಹಜ್ ಯಾತ್ರಿಕರ ಕೋಟಾವನ್ನು ಹಿಂಪಡೆಯುವುದರಿಂದ ಪಾಕಿಸ್ತಾನದ ಬೊಕ್ಕಸಕ್ಕೆ 24 ಮಿಲಿಯನ್ ಡಾಲರ್ (ಪಾಕಿಸ್ತಾನ ರುಪಾಯಿಯಲ್ಲಿ 676 ಕೋಟಿ, ಭಾರತೀಯ ರುಪಾಯಿಯಲ್ಲಿ ಸುಮಾರು 200 ಕೋಟಿ) ಉಳಿತಾಯವಾಗಲಿದೆ.

ಪಾಕಿಸ್ತಾನದಲ್ಲಿ ಹಜ್ ಯಾತ್ರೆಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಸರ್ಕಾರಿ ಸಬ್ಸಿಡಿಯಲ್ಲಿ ಜನರು ಹಜ್ ಯಾತ್ರೆಗೆ ಹೋದರೆ ಒಬ್ಬರಿಗೆ 11.75 ಲಕ್ಷ ವೆಚ್ಚವಾಗುತ್ತದೆ. ಭಾರತೀಯ ರುಪಾಯಿಯಲ್ಲಿ ಇದು 3.42 ಲಕ್ಷ ರೂ ಆಗುತ್ತದೆ. ಭಾರತಕ್ಕೆ ಹಜ್ ಯಾತ್ರೆಗೆ ಈ ವರ್ಷ 1.75 ಲಕ್ಷ ಸೀಟುಗಳ ಕೋಟಾ ಸಿಕ್ಕಿದೆ. ಇಲ್ಲಿಯೂ ಸರ್ಕಾರಗಳು ಹಜ್ ಯಾತ್ರೆಗೆ ರಿಯಾಯಿತಿ ಕೊಡುತ್ತದೆ. ಯಾತ್ರೆ ಕೈಗೊಳ್ಳಲು ಒಬ್ಬರಿಗೆ ಸುಮಾರು 4 ಲಕ್ಷ ರೂ ಆಗುತ್ತದೆ. ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಿರುವುದರಿಂದ ಮತ್ತು ಪಾಕಿಸ್ತಾನೀ ರುಪಾಯಿ ಮೌಲ್ಯ ಕುಸಿದಿರುವುದರಿಂದ ಹಜ್ ಯಾತ್ರೆಯ ವೆಚ್ಚವೂ ಗಣನೀಯವಾಗಿ ಹೆಚ್ಚಿದೆ.

ಇದನ್ನೂ ಓದಿ: Shocking: ವರ್ಕ್ ಫ್ರಂ ಹೋಂ ಮಾಡೋರೇ ಹುಷಾರ್; ಈ ಮುಖಂಡರು ಹೇಳೋ ಮಾತು ನೋಡಿದ್ರೆ ವೃತ್ತಿಜೀವನ ಮುಗಿದಂತೆಯಾ? ಯಾರ್‍ಯಾರು ಏನು ಹೇಳಿದ್ರು?

ಐಎಂಎಫ್ ಸಾಲಕ್ಕೆ ಇನ್ನೂ ಕಾಯುತ್ತಲೇ ಇರುವ ಪಾಕಿಸ್ತಾನ

ದಿವಾಳಿ ಅಂಚಿಗೆ ಬಂದು ತಡವರಿಸುತ್ತಿರುವ ಪಾಕಿಸ್ತಾನಕ್ಕೆ ಬಾಹ್ಯ ಸಾಲದ ಹೊರೆ ಹೊರಲಾರದಷ್ಟು ಮಟ್ಟಿಗೆ ಇದೆ. ಚೀನಾದಿಂದ ಅಲ್ಪಸ್ವಲ್ಪ ನೆರವು ಸಿಕ್ಕಿದೆ. ಐಎಂಎಫ್​ನಿಂದ ಸಿಗಬೇಕಿರುವ ಸಾಲ ಬೇರೆ ಬೇರೆ ಕಾರಣಕ್ಕೆ ಇನ್ನೂ ಬಿಡುಗಡೆ ಆಗಿಲ್ಲ. 2019ರಲ್ಲಿ ಪಾಕಿಸ್ತಾನಕ್ಕೆ 6.5 ಬಿಲಿಯನ್ ಡಾಲರ್ (ಸುಮಾರು 53,000 ಕೋಟಿ ರೂ) ಸಾಲ ಕೊಡಲು ಐಎಂಎಫ್ ಒಪ್ಪಿತ್ತು. ಈ ಪೈಕಿ 1.1 ಬಿಲಿಯನ್ ಡಾಲರ್ (ಸುಮಾರು 9,000 ಕೋಟಿ ರೂ) ಹಣದ ಬಿಡುಗಡೆ ಇನ್ನೂ ಬಾಕಿ ಉಳಿದಿದೆ. ಪಾಕಿಸ್ತಾನದ ಆರ್ಥಿಕ ನೀತಿ ಬದಲಾಗಬೇಕು, ಸಬ್ಸಿಡಿ ಇತ್ಯಾದಿ ಉಚಿತ ಕೊಡುಗೆಗಳು ನಿಲ್ಲಬೇಕು, ಹೀಗೆ ಐಎಂಎಫ್ ಹಾಕಿದ ಷರತ್ತುಗಳಿಗೆ ಪಾಕಿಸ್ತಾನ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರಿಂದ ಸಾಲ ಬಿಡುಗಡೆ ವಿಳಂಬವಾಗಲು ಪ್ರಮುಖ ಕಾರಣ. ಈಗ ಐಎಂಎಫ್ ತನ್ನ ಬಾಕಿ ಹಣ ಬಿಡುಗಡೆಗೆ ಸಜ್ಜಾಗಿದೆ. ಇದರ ಜೊತೆಗೆ 1.4 ಬಿಲಿಯನ್ ಡಾಲರ್​ನಷ್ಟು ಹೆಚ್ಚುವರಿ ಸಾಲ ಕೊಡುವ ಸಾಧ್ಯತೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ