PAN Card- Aadhaar Linking: ಪ್ಯಾನ್ ಕಾರ್ಡ್- ಆಧಾರ್ ಜೋಡಣೆಗೆ ಸೆ. 30ರ ತನಕ ಗಡುವು ವಿಸ್ತರಿಸಿದ ಕೇಂದ್ರ
ಪ್ಯಾನ್ ಕಾರ್ಡ್ ಜತೆಗೆ ಆಧಾರ್ ಜೋಡಣೆ ಮಾಡುವ ಗಡುವನ್ನು ಜೂನ್ 30, 2021ರಿಂದ ಸೆಪ್ಟೆಂಬರ್ 30, 2021ಕ್ಕೆ ವಿಸ್ತರಣೆ ಮಾಡಲಾಗಿದೆ.
ತೆರಿಗೆ ಪಾವತಿದಾರರಿಗೆ ನಾನಾ ವಿನಾಯಿತಿಗಳನ್ನು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು ಈ ಪ್ಯಾನ್ ಅನ್ನು ಆಧಾರ್ ಜೊತೆ ಜೋಡಣೆ ಮಾಡುವ ಗಡುವನ್ನು ಜೂನ್ 30, 2021ರಿಂದ ಸೆಪ್ಟೆಂಬರ್ 30, 2021ಕ್ಕೆ ವಿಸ್ತರಿಸಿದೆ. ಒಂದು ವೇಳೆ ಪ್ಯಾನ್ ಜೋಡಣೆ ಮಾಡುವುದಕ್ಕೆ ವಿಫಲರಾದಲ್ಲಿ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಸೆಕ್ಷನ್ 139AA ಪ್ರಕಾರವಾಗಿ, ಆದಾಯ ತೆರಿಗೆ ರಿಟರ್ನ್ಗೆ ಹಾಗೂ ಪ್ಯಾನ್ ವಿತರಣೆ ಅರ್ಜಿಗೆ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ. ಇದನ್ನು ಹೊರತುಪಡಿಸಿದಂತೆ ಜುಲೈ 1, 2017ರಿಂದ ಈಚೆಗೆ ಯಾರಿಗೆಲ್ಲ ಪ್ಯಾನ್ ವಿತರಿಸಲಾಗಿದೆಯೋ ಮತ್ತು ಯಾರೆಲ್ಲ ಆಧಾರ್ ಪಡೆಯುವುದಕ್ಕೆ ಅರ್ಹರೋ ಅಂಥವರೆಲ್ಲರೂ ಪ್ಯಾನ್- ಆಧಾರ್ ಜೋಡಣೆ ಮಾಡಲೇಬೇಕು. ಒಂದು ವೇಳೆ ಹೀಗೆ ಮಾಡುವುದಕ್ಕೆ ವಿಫಲವಾದಲ್ಲಿ ಮಾರ್ಚ್ 31, 2021ರ ನಂತರ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎನ್ನಲಾಗಿತ್ತು. ಒಂದು ವೇಳೆ ಹೀಗಾದರೆ ಆ ವ್ಯಕ್ತಿಯು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಿಯ, 114AAA ಪ್ರಕಾರವಾಗಿ, ವ್ಯಕ್ತಿಯು ಪ್ಯಾನ್ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಪ್ಯಾನ್ ಕಾರ್ಯ ನಿರ್ವಹಿಸುವುದು ನಿಲ್ಲಿಸಿದರೆ ಆ ಬಗ್ಗೆ ಮಾಹಿತಿ ನೀಡಿಲ್ಲ ಎಂದರ್ಥ. ಇದರಿಂದಾಗಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಆದಾಯ ತೆರಿಗೆ ಕಾಯ್ದೆಯ ವಿವಿಧ ನಿಯಮಾವಳಿಗಳ ಪ್ರಕಾರವಾಗಿ, ಒಂದು ವೇಳೆ ಒಬ್ಬ ವ್ಯಕ್ತಿಯು ಪ್ಯಾನ್ ಬಗ್ಗೆ ಮಾಹಿತಿ ನೀಡದೆ ಅಥವಾ ಕಾರ್ಯ ನಿರ್ವಹಿಸದ ಪ್ಯಾನ್ ಮಾಹಿತಿ ನೀಡಿದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಹೆಚ್ಚಿನ ದರದ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅಥವಾ ಟಿಸಿಎಸ್ (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದಕ್ಕೆ ಸಾಧ್ಯವಾಗದಿರಬಹುದು ಮತ್ತು ಹೀಗೆ ಐಟಿಆರ್ ಫೈಲಿಂಗ್ ಮಾಡದ ಕಾರಣಕ್ಕೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಹಣಕಾಸು ಮಸೂದೆಯಲ್ಲಿ ಸರ್ಕಾರದಿಂದ ತಿದ್ದುಪಡಿಯನ್ನು ತರಲಾಗಿದೆ. ಅದರ ಪ್ರಕಾರವಾಗಿ, ಯಾರು ಪ್ಯಾನ್ ಕಾರ್ಡ್- ಆಧಾರ್ ಜೋಡಣೆ ಮಾಡಿರುವುದಿಲ್ಲವೋ ಅಂಥವರು 1000 ರೂಪಾಯಿ ತನಕ ಶುಲ್ಕ ಪಾವತಿಸಬೇಕಾಗುತ್ತದೆ. ಸೆಕ್ಷನ್ 139AA(2) ಅನ್ವಯ ಯಾವ ವ್ಯಕ್ತಿಯು ಪ್ಯಾನ್ ಕಾರ್ಡ್- ಆಧಾರ್ ಜತೆ ಜೋಡಣೆ ಮಾಡುವುದಿಲ್ಲವೋ ಅಂಥವರು, ಆ ನಂತರ ಮಾಹಿತಿ ನೀಡುವಾಗ 1000 ರೂಪಾಯಿ ಮೀರದಂತೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: How to link Aadhaar to PAN card: ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆ ಹೇಗೆ?
(Govt extends deadline of PAN card linking with Aadhaar to September 30, 2021, from June 30, 2021)