AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು

IAF's Critical Fighter Jet Gap: ಭಾರತೀಯ ವಾಯುಸೇನೆ (IAF) ತನ್ನ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಯುದ್ಧವಿಮಾನಗಳ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ನೀಗಿಸಲು ಭಾರತವು ₹3.25 ಲಕ್ಷ ಕೋಟಿ ಮೌಲ್ಯದ 114 ದಸ್ಸಾಲ್ಟ್ ರಫೇಲ್ ಯುದ್ಧವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸುತ್ತಿದೆ. ಈ ಅತಿದೊಡ್ಡ ರಕ್ಷಣಾ ಒಪ್ಪಂದವು IAF ನ ಸಾಮರ್ಥ್ಯವನ್ನು ಹೆಚ್ಚಿಸಿ, ಚೀನಾ ಮತ್ತು ಪಾಕಿಸ್ತಾನದಂತಹ ದ್ವಿಮುಖ ಸವಾಲನ್ನು ಎದುರಿಸಲು ಸಹಕಾರಿಯಾಗಲಿದೆ. ಹಂತ ಹಂತವಾಗಿ ವಿತರಣೆಯಾಗುವ ಈ ವಿಮಾನಗಳ ಪೈಕಿ 96 ಭಾರತದಲ್ಲೇ ತಯಾರಾಗಲಿವೆ, ಇದು ಸ್ವಾವಲಂಬನೆಯೆಡೆಗಿನ ಹೆಜ್ಜೆಯಾಗಿದೆ.

ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು
ರಫೇಲ್ ಯುದ್ಧವಿಮಾನImage Credit source: Alamy
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 04, 2026 | 1:06 PM

Share

ನವದೆಹಲಿ, ಜೂನ್ 4: ಭಾರತವು ಫ್ರಾನ್ಸ್‌ನಿಂದ ಸುಮಾರು ₹3.25 ಲಕ್ಷ ಕೋಟಿ ಮೌಲ್ಯದ ಒಪ್ಪಂದದಲ್ಲಿ 114 ದಸ್ಸಾಲ್ಟ್ ರಫೇಲ್ (Dassault Rafale) ಯುದ್ಧವಿಮಾನಗಳನ್ನು ಖರೀದಿಸುವ ವಿನಂತಿಯನ್ನು ಅಂತಿಮಗೊಳಿಸಿದೆ. ಈ ಕುರಿತ ಅಧಿಕೃತ ವಿನಂತಿ ಪತ್ರವನ್ನು (Letter of Request – LoR) ಶೀಘ್ರದಲ್ಲೇ ಕಳುಹಿಸಲಾಗುವುದು. ಇದು ಉಭಯ ದೇಶಗಳ ನಡುವೆ ಅಧಿಕೃತ ಮಾತುಕತೆಗೆ ನಾಂದಿ ಹಾಡಲಿದೆ. ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಯುದ್ಧವಿಮಾನ ಖರೀದಿ ಒಪ್ಪಂದವಾಗುವ ಸಾಧ್ಯತೆಯಿದೆ. ಭಾರತೀಯ ವಾಯುಸೇನೆಯ ಮುಖ್ಯಸ್ಥರಾದ (Air Chief Marshal) ಅಮರ್ ಪ್ರೀತ್ ಸಿಂಗ್ ಅವರು 3 ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವಾಗಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಕಳೆದ 60 ವರ್ಷಗಳಲ್ಲೇ ಭಾರತೀಯ ವಾಯುಸೇನೆ (IAF) ತನ್ನ ಅತ್ಯಂತ ಕನಿಷ್ಠ ಯುದ್ಧವಿಮಾನಗಳ ಸ್ಕ್ವಾಡ್ರನ್ ಬಲವನ್ನು ಎದುರಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ವಾಯುಸೇನೆಯಲ್ಲಿರುವ ಕೊರತೆ ನೀಗಿಸುವ ಯತ್ನ

1962 ರ ಚೀನಾ ಯುದ್ಧದ ನಂತರ, ಜೆ.ಆರ್.ಡಿ. ಟಾಟಾ (J.R.D. Tata) ನೇತೃತ್ವದ ಸಮಿತಿಯು ದೇಶದ ವಾಯು ರಕ್ಷಣೆಯನ್ನು ಬಲಪಡಿಸಲು ಭಾರತೀಯ ವಾಯುಸೇನೆಯು ಕನಿಷ್ಠ 50 ಯುದ್ಧವಿಮಾನ ಸ್ಕ್ವಾಡ್ರನ್‌ಗಳನ್ನು ಹೊಂದಿರಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಬಜೆಟ್ ಮಿತಿಗಳಿಂದಾಗಿ, ಸರ್ಕಾರವು ಇದಕ್ಕಿಂತ ಕಡಿಮೆ ಬಲಕ್ಕೆ ಅನುಮೋದನೆ ನೀಡಿತು. ಕಾಲಕ್ರಮೇಣ, ಈ ಗುರಿಯನ್ನು 42.5 ಸ್ಕ್ವಾಡ್ರನ್‌ಗಳಿಗೆ ನಿಗದಿಪಡಿಸಲಾಯಿತು. ಈಗ ಚೀನಾ ಮತ್ತು ಪಾಕಿಸ್ತಾನದಿಂದ ದ್ವಿಮುಖ ಅಪಾಯ (Two-front challenge) ಎದುರಿಸುವ ಸನ್ನಿವೇಶದಲ್ಲಿ ಭಾರತ ಇದೆ. ಈ ಪರಿಸ್ಥಿತಿಯಲ್ಲಿ ಭಾರತೀಯ ವಾಯುಸೇನೆ ಗರಿಷ್ಠ 42 ಸ್ಕ್ವಾಡ್ರನ್​ಗಳನ್ನು ಹೊಂದಬಹುದು (ಒಂದು ಸ್ಕ್ವಾಡ್ರನ್ ಎಂದರೆ ಸುಮಾರು 18 ಯುದ್ಧವಿಮಾನಗಳು).

ಆದರೆ, ಭಾರತ ಈ ಗುರಿಯನ್ನು ಕೂಡ ಎಂದಿಗೂ ತಲುಪಿಲ್ಲ. ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ ಇರುವುದು ಕೇವಲ 29 ಕಾರ್ಯನಿರತ ಸ್ಕ್ವಾಡ್ರನ್‌ಗಳು ಮಾತ್ರ — ಅಂದರೆ ಇನ್ನೂ 13 ಸ್ಕ್ವಾಡ್ರನ್‌ಗಳ ಭಾರಿ ಕೊರತೆಯಿದೆ. ಇದು ಕಳೆದ 60 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ.

1990 ರಲ್ಲಿ ವಾಯುಸೇನೆಯು ತನ್ನ ಇತಿಹಾಸದಲ್ಲೇ ಗರಿಷ್ಠ ಅಂದರೆ 39.5 ಸ್ಕ್ವಾಡ್ರನ್‌ಗಳನ್ನು ಹೊಂದಿತ್ತು. 2018 ರಲ್ಲಿ ಈ ಸಂಖ್ಯೆ 33 ಕ್ಕೆ ಇಳಿಯಿತು. 2025 ರ ವೇಳೆಗೆ ಎಲ್ಲಾ ಮಿಗ್-21 (MiG-21) ಸ್ಕ್ವಾಡ್ರನ್‌ಗಳ ನಿವೃತ್ತಿಯ ನಂತರ, ಈ ಸಂಖ್ಯೆ ಸುಮಾರು 29 ಕ್ಕೆ ಕುಸಿಯಿತು. ಮುಂದಿನ ದಶಕದಲ್ಲಿ ಹಳೆಯದಾಗುತ್ತಿರುವ ಜಾಗ್ವಾರ್ (Jaguar), ಮಿಗ್-29 (MiG-29) ಮತ್ತು ಮಿರಾಜ್-2000 (Mirage-2000) ವಿಮಾನಗಳು ನಿವೃತ್ತಿಯಾಗಲಿದ್ದು, ಈ ಸವಾಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ

ಚೀನಾ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಹೇಗಿದೆ?

ಜಾಗ್ವಾರ್ ಯುದ್ಧವಿಮಾನವು 1979 ರಲ್ಲಿ ಭಾರತೀಯ ವಾಯುಸೇನೆಯನ್ನು ಸೇರಿತು. ಪ್ರಸ್ತುತ 6 ಸ್ಕ್ವಾಡ್ರನ್‌ಗಳಲ್ಲಿ ಅದರ ಸೇವೆ ಇನ್ನೂ ಇದೆ. ಪ್ರಸ್ತುತ ಭಾರತೀಯ ವಾಯುಸೇನೆಯು 6 ಜಾಗ್ವಾರ್ ಸ್ಕ್ವಾಡ್ರನ್‌ಗಳು, 3 ಮಿಗ್-29 ಸ್ಕ್ವಾಡ್ರನ್‌ಗಳು, 13 ಸುಖೋಯ್ (Su-30MKI) ಸ್ಕ್ವಾಡ್ರನ್‌ಗಳು, 2 ತೇಜಸ್ ಮಾರ್ಕ್-1 (Tejas Mk-1) ಸ್ಕ್ವಾಡ್ರನ್‌ಗಳು ಮತ್ತು 2 ರಫೇಲ್ ಸ್ಕ್ವಾಡ್ರನ್‌ಗಳನ್ನು ನಿರ್ವಹಿಸುತ್ತಿದೆ.

ಪಾಕಿಸ್ತಾನದೊಂದಿಗೆ ಹೋಲಿಕೆ: 1990 ರಲ್ಲಿ ಭಾರತದ ಬಳಿ ಸುಮಾರು 39 ಸ್ಕ್ವಾಡ್ರನ್‌ಗಳಿದ್ದರೆ, ಪಾಕಿಸ್ತಾನದ ಬಳಿ ಕೇವಲ 18 ಇದ್ದವು. ಆದರೆ ಇಂದು ಭಾರತದ ಬಳಿ 29 ಸ್ಕ್ವಾಡ್ರನ್‌ಗಳಿದ್ದರೆ, ಪಾಕಿಸ್ತಾನವು F-16, J-10 ಮತ್ತು JF-17 ವಿಮಾನಗಳನ್ನೊಳಗೊಂಡ ಸುಮಾರು 25 ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಅಂದರೆ ಉಭಯ ದೇಶಗಳ ನಡುವಿನ ವ್ಯತ್ಯಾಸ ತುಂಬಾ ಕಡಿಮೆಯಾಗಿದೆ.

ಚೀನಾದೊಂದಿಗೆ ಹೋಲಿಕೆ: ಚೀನಾ ನಮಗಿಂತ ಬಹುದೂರ ಮುಂದಿದೆ. ಅದು ಸುಮಾರು 66 ಯುದ್ಧವಿಮಾನ ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಚೀನಾ ವಾಯುಸೇನೆಯು J-20 ಮತ್ತು J-35 ನಂತಹ ಅತ್ಯಾಧುನಿಕ 5ನೇ ತಲೆಮಾರಿನ (5th Generation) ಯುದ್ಧವಿಮಾನಗಳನ್ನು ಸಹ ಬಳಸುತ್ತಿದೆ.

ಭಾರತೀಯ ವಾಯುಸೇನೆಯಲ್ಲಿ ಯುದ್ಧವಿಮಾನಗಳ ಕೊರತೆಗೆ ಕಾರಣಗಳೇನು?

ಮಿಗ್-21 ನಿವೃತ್ತಿ: ಈ ರಷ್ಯನ್ ಯುದ್ಧವಿಮಾನವು ಭಾರತೀಯ ವಾಯುಪಡೆಯನ್ನು ಸೇರಿದ್ದು 1963 ರಲ್ಲಿ. ಅಲ್ಲಿಂದ ಅದು ವಾಯುಪಡೆಯ ಬೆನ್ನೆಲುಬಾಗಿತ್ತು. ಒಂದು ಹಂತದಲ್ಲಿ ಸೇನೆಯ ಶೇ. 60ರಷ್ಟು ಯುದ್ಧವಿಮಾನಗಳು ಮಿಗ್-21 ಆಗಿದ್ದವು. ಈ ವಿಮಾನಗಳ ಅವಧಿ ಮುಗಿದು, ನಿವೃತ್ತಿಯಾದಾಗ, ಬದಲೀ ವಿಆನಗಳನ್ನು ಕ್ಷಿಪ್ರವಾಗಿ ಭರ್ತಿ ಮಾಡಿಕೊಳ್ಳಲಾಗಲಿಲ್ಲ. ಇದರಿಂದಾಗಿ ದೊಡ್ಡ ಕೊರತೆ ಉಂಟಾಯಿತು.

ತೇಜಸ್ ವಿಳಂಬ: ಭಾರತದಲ್ಲೇ ತಯಾರಾದ ಸ್ವದೇಶಿ ‘ತೇಜಸ್’ ಯುದ್ಧವಿಮಾನಗಳು ಹಳೆಯ ವಿಮಾನಗಳ ಜಾಗವನ್ನು ತುಂಬಬೇಕಿತ್ತು. ಆದರೆ ಭಾರಿ ವಿಳಂಬದ ನಂತರ ಇದಕ್ಕೆ 2011 ರಲ್ಲಿ ಕಾರ್ಯಚರಣೆಯ ಅನುಮತಿ ಸಿಕ್ಕಿತು. ಪ್ರಸ್ತುತ ಎಂಜಿನ್ ಪೂರೈಕೆಯಲ್ಲಿನ ವಿಳಂಬದಿಂದಾಗಿ ‘ತೇಜಸ್ Mk-1A’ ಉತ್ಪಾದನೆ ನಿಧಾನವಾಗಿದ್ದು, ವಿತರಣೆಯ ಸಮಯದ ಮೇಲೆ ಪರಿಣಾಮ ಬೀರಿದೆ.

ರದ್ದಾದ ಮತ್ತು ಕಡಿತಗೊಂಡ ರಫೇಲ್ ಆರ್ಡರ್: 2015 ರಲ್ಲಿ 126 ಯುದ್ಧವಿಮಾನಗಳ (MMRCA) ರಫೇಲ್ ಒಪ್ಪಂದವನ್ನು ವೆಚ್ಚ ಮತ್ತು ಇತರ ಕಾರಣಗಳಿಂದಾಗಿ ರದ್ದುಗೊಳಿಸಲಾಯಿತು. ನಂತರ 2016 ರಲ್ಲಿ ಇದನ್ನು ಕೇವಲ 36 ವಿಮಾನಗಳಿಗೆ ಸೀಮಿತಗೊಳಿಸಲಾಯಿತು. ಹೊಸ ವಿಮಾನಗಳ ಸೇರ್ಪಡೆಗಿಂತ ಹಳೆಯ ವಿಮಾನಗಳ ನಿವೃತ್ತಿ ವೇಗವಾಗಿ ನಡೆಯುತ್ತಿರುವುದರಿಂದ ಸ್ಕ್ವಾಡ್ರನ್ ಬಲ ಕುಸಿಯುತ್ತಾ ಬಂದಿದೆ.

ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ

ರಫೇಲ್ ಒಪ್ಪಂದ ಏಕೆ ಮುಖ್ಯ?

ಚೀನಾ ತನ್ನ ಅತ್ಯಾಧುನಿಕ ಯುದ್ಧವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಪಾಕಿಸ್ತಾನ ತನ್ನ ವಾಯು ಸಾಮರ್ಥ್ಯವನ್ನು ನವೀಕರಿಸುತ್ತಿದೆ. ಇಂಥ ಉದ್ವಿಗ್ನ ಭೂ-ರಾಜಕೀಯ ಪರಿಸ್ಥಿತಿಯಲ್ಲಿ, ರಫೇಲ್ ಒಪ್ಪಂದವು ಭಾರತೀಯ ವಾಯುಸೇನೆಯನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ನಿಖರವಾದ ದಾಳಿ ಮತ್ತು ಕಣ್ಗಾವಲು ನಡೆಸಲು ವಾಯು ಶಕ್ತಿಯೇ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಇತ್ತೀಚಿನ ಯುದ್ಧಗಳು ಸಾಬೀತುಪಡಿಸಿವೆ. 114 ರಫೇಲ್ ವಿಮಾನಗಳ ಖರೀದಿ ವಾಯುಸೇನೆಯಲ್ಲಿರುವ ಸ್ಕ್ವಾಡ್ರನ್‌ಗಳ ಕೊರತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

114 ರಫೇಲ್ ವಿಮಾನಗಳಿಂದಾಗುವ ಬದಲಾವಣೆಗಳೇನು?

ಒಪ್ಪಂದವಾಗಿರುವ ಈ 114 ರಫೇಲ್ ವಿಮಾನಗಳ ಪೈಕಿ 88 ಸಿಂಗಲ್-ಸೀಟ್ (ಏಕ ಆಸನ) ಯುದ್ಧವಿಮಾನಗಳು ಮತ್ತು 26 ಟ್ವಿನ್-ಸೀಟ್ (ಅವಳಿ ಆಸನ) ತರಬೇತಿ ವಿಮಾನಗಳನ್ನು ಒಳಗೊಂಡಿದೆ. ಇದರೊಂದಿಗೆ ಅತ್ಯಾಧುನಿಕ ಆಯುಧಗಳು, ಸಿಮ್ಯುಲೇಟರ್‌ಗಳು, ಬಿಡಿಭಾಗಗಳು, ತರಬೇತಿ ಮತ್ತು ದೀರ್ಘಕಾಲೀನ ನಿರ್ವಹಣಾ ಬೆಂಬಲವೂ ಸಿಗಲಿದೆ. ಇವುಗಳು ಸಂಪೂರ್ಣವಾಗಿ ಪೂರೈಕೆಯಾದಾಗ ಭಾರತದ ರಫೇಲ್ ವಿಮಾನಗಳ ಒಟ್ಟು ಸಂಖ್ಯೆ ಸುಮಾರು 150 ಕ್ಕೆ ಏರಲಿದ್ದು, ದೇಶದ ಯುದ್ಧ ಸಾಮರ್ಥ್ಯಕ್ಕೆ ಭಾರಿ ಬಲ ಬರಲಿದೆ.

ಹಂತಹಂತವಾದ ವಿತರಣಾ ಯೋಜನೆ

ಭಾರತದ ತಕ್ಷಣದ ಅಗತ್ಯತೆಗಳನ್ನು ಪೂರೈಸಲು ಮತ್ತು ದೀರ್ಘಾವಧಿಯಲ್ಲಿ ಸ್ಥಳೀಯ ಉತ್ಪಾದನೆಯನ್ನು ಬೆಂಬಲಿಸಲು ಹಂತಹಂತವಾದ ವಿತರಣಾ ಯೋಜನೆಯನ್ನು ರೂಪಿಸಲಾಗಿದೆ. ಮೊದಲ 18 ರಫೇಲ್ ವಿಮಾನಗಳು ನೇರವಾಗಿ ಫ್ರಾನ್ಸ್‌ನಿಂದ ಸಂಪೂರ್ಣ ಸಿದ್ಧ ಸ್ಥಿತಿಯಲ್ಲಿ (Ready-to-fly) ಬರಲಿವೆ. ಇವುಗಳನ್ನು ಭಾರತೀಯ ವಾಯುಸೇನೆ ತಕ್ಷಣವೇ ಬಳಸಬಹುದು.

ಉಳಿದ 96 ವಿಮಾನಗಳು ಲೈಸೆನ್ಸ್ ಅಡಿಯಲ್ಲಿ ಭಾರತದಲ್ಲೇ ತಯಾರಾಗಲಿವೆ. ನಾಗ್ಪುರದಲ್ಲಿರುವ ದಸ್ಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (DRAL) ಘಟಕದಲ್ಲಿ ಅಂತಿಮ ಜೋಡಣೆ (Final Assembly Line) ಪ್ರಕ್ರಿಯೆ ನಡೆದು ವಿತರಣೆಯಾಗಲಿದೆ.

ರಫೇಲ್‌ನ ಸ್ವದೇಶೀಕರಣ ಹಾದಿ (Indigenisation)

ಸ್ವದೇಶೀಕರಣ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯಲಿದೆ. ಆರಂಭದಲ್ಲಿ ಶೇ. 30 ರಷ್ಟು ಭಾಗಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಕಾಲಾನಂತರದಲ್ಲಿ ಇದನ್ನು ಶೇ. 50 ಕ್ಕಿಂತ ಹೆಚ್ಚು ಹೆಚ್ಚಿಸುವ ಗುರಿ ಹೊಂದಲಾಗಿದೆ.

(ಮಾಹಿತಿ ಕೃಪೆ: Nivriti Mohan, ನ್ಯೂಸ್9)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Thu, 4 June 26

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್