Flipkart vs Consumer: ಬೆಂಗಳೂರಿನಲ್ಲಿ ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ ಫ್ಲಿಪ್ಕಾರ್ಟ್ಗೆ 20,000 ರೂ ದಂಡ
Flipkart Ordered to Pay Compensation To Bengalurean Woman: ಬೆಂಗಳೂರಿನ 34 ವರ್ಷದ ಸೌಮ್ಯಾ ಎಂಬುವವರು ಫ್ಲಿಪ್ಕಾರ್ಟ್ ವಿರುದ್ಧ ಗ್ರಾಹಕ ಕೋರ್ಟ್ ಮೆಟ್ಟಿಲೇರಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿ ಪತಂಜಲಿ ಶಾಂಪೂ ಬಾಟಲ್ ಅನ್ನು ಎಂಆರ್ಪಿಗಿಂತ ಹೆಚ್ಚಿನ ದರಕ್ಕೆ ಫ್ಲಿಪ್ಕಾರ್ಟ್ನಲ್ಲಿ ಈ ಮಹಿಳೆಗೆ ಮಾರಲಾಗಿತ್ತು. ಶಾಂತಿನಗರದಲ್ಲಿರುವ ಗ್ರಾಹಕ ಕೋರ್ಟ್ ಆ ಮಹಿಳೆಗೆ ಫ್ಲಿಪ್ಕಾರ್ಟ್ನಿಂದ 20,000 ರೂ ಪರಿಹಾರ ಕೊಡಿಸಿ ಆದೇಶ ಹೊರಡಿಸಿದೆ.
ಬೆಂಗಳೂರು, ಡಿಸೆಂಬರ್ 7: ಇದು ಎಲ್ಲಾ ಗ್ರಾಹಕರೂ ಓದಲೇಬೇಕಾದ ಸುದ್ದಿ. ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ ಫ್ಲಿಪ್ಕಾರ್ಟ್ಗೆ ಗ್ರಾಹಕ ನ್ಯಾಯಾಲಯ (consumer court) 20,000 ರೂ ದಂಡ ಹಾಕಿದೆ. ಬಿಗ್ ಬಿಲಿಯನ್ ಡೇಸ್ ಸೇಲ್ ವೇಳೆಯೇ ಫ್ಲಿಪ್ಕಾರ್ಟ್ ಪ್ಲಾಟ್ಫಾರ್ಮ್ನಲ್ಲಿ (flipkart) ಈ ಘಟನೆ ನಡೆದಿದೆ. ಫ್ಲಿಪ್ಕಾರ್ಟ್ ಅನ್ನು ಕನ್ಸೂಮರ್ ಕೋರ್ಟ್ಗೆ ಎಳೆದೊಯ್ದದ್ದು ಒಬ್ಬ ಮಹಿಳೆ. ಶಾಂಪೂ ಬಾಟಲ್ನಲ್ಲಿರುವ ಎಂಆರ್ಪಿಗಿಂತ ಹೆಚ್ಚಿನ ದರಕ್ಕೆ ತನಗೆ ಮಾರಲಾಗಿದೆ ಎಂದು ಪಿ ಸೌಮ್ಯಾ ಎಂಬಾಕೆ ಗ್ರಾಹಕ ನ್ಯಾಯಾಲಯಕ್ಕೆ ದೂರಿತ್ತಿದ್ದರು. ಈ ವೇಳೆ ಆಕೆಯ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ, ಆಕೆಗೆ 20,000 ರೂ ಪರಿಹಾರ ಕೊಡಬೇಕು. ಹಾಗೆಯೇ ಉತ್ಪನ್ನಕ್ಕೆ ಹೆಚ್ಚುವರಿಯಾಗಿ ಪಡೆದ 96 ರೂ ಅನ್ನು ಮರಳಿಸಬೇಕು ಎಂದು ಆದೇಶ ಹೊರಡಿಸಿದೆ.
ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿ ನಿವಾಸಿಯಾದ ಪಿ ಸೌಮ್ಯಾ ಅವರು ಫ್ಲಿಪ್ಕಾರ್ಟ್ನ ಡಿಸ್ಕೌಂಟ್ ಜಾಹೀರಾತುಗಳಿಂದ ಆಕರ್ಷಿತರಾಗಿ ಪತಂಜಲಿ ಕೇಶ್ ಕಾಂತಿ ಪ್ರೋಟೀನ್ ಹೇರ್ ಕ್ಲೀನ್ಸರ್ ಬಾಟಲ್ವೊಂದನ್ನು ಆರ್ಡರ್ ಮಾಡಿದ್ದರು. ಅದು ಆಗಿದ್ದು 2019ರ ಅಕ್ಟೋಬರ್ನಲ್ಲಿ. ಅಕ್ಟೋಬರ್ 3ರಂದು ಇವರು ಶಾಂಪೂ ಪಡೆಯುತ್ತಾರೆ. ಫೋನ್ಪೇ ನಲ್ಲಿ ಈಕೆ 191 ರೂ ನೀಡುತ್ತಾರೆ. ಆ ಬಳಿಕ ಈಕೆ ಪ್ಯಾಕೆಟ್ ತೆರೆದು ಬಾಟಲ್ ಅನ್ನು ಗಮನಿಸಿದಾಗ ಎಂಆರ್ಪಿ ದರ 95 ರೂ ಎಂದಿರುತ್ತದೆ. ಪಾರ್ಸನ್ನಲ್ಲಿ ಒಳಗೊಳ್ಳಲಾಗಿದ್ದ ಇನ್ವಾಯ್ಸ್ನಲ್ಲಿ ಬಾಟಲ್ ಬೆಲೆ 191 ರೂ ಎಂದಿರುತ್ತದೆ. ಇನ್ನಷ್ಟು ವಿಚಾರಣೆ ವೇಳೆ, ಫ್ಲಿಪ್ಕಾರ್ಟ್ ಆ್ಯಪ್ನಲ್ಲಿ ಅದೇ ಉತ್ಪನ್ನವನ್ನು 140 ರೂ ಬೆಲೆಗೆ ಲಿಸ್ಟ್ ಮಾಡಲಾಗಿತ್ತು. ಇದಕ್ಕೆ ಹೆಚ್ಚುವರಿ 99 ರೂ ಶಿಪ್ಪಿಂಗ್ ಶುಲ್ಕ ಹಾಕಲಾಗಿತ್ತು.
ಇದನ್ನೂ ಓದಿ: ಐಫೋನ್-16 ಮೊಬೈಲ್ಗಳಿಗೆ ಬ್ಯಾಟರಿ ಭಾರತದಿಂದಲೇ ಆಗಬೇಕು: ಬಿಡಿಭಾಗ ಪೂರೈಕೆದಾರರಿಗೆ ಆ್ಯಪಲ್ ತಾಕೀತು?
ಫ್ಲಿಪ್ಕಾರ್ಟ್ ಪ್ಲಾಟ್ಫಾರ್ಮ್ನಲ್ಲಿ ಆ ಶಾಂಪೂವನ್ನು ಮಾರಿದ್ದು ಗುಜರಾತ್ ರಾಜ್ಯದ ಸೂರತ್ನ ಎಚ್ಬಿಕೆ ಎಂಟರ್ಪ್ರೈಸಸ್ ಎಂಬ ಸಂಸ್ಥೆ. ಬೆಂಗಳೂರಿನ 34 ವರ್ಷದ ಸೌಮ್ಯಾ ಅವರು ಫ್ಲಿಪ್ಕಾರ್ಟ್ ಕಸ್ಟಮರ್ ಕೇರ್ ಸಂಪರ್ಕಿಸಿ ಹೆಚ್ಚಿನ ಶಾಂಪೂ ದರದ ಬಗ್ಗೆ ಕೇಳುತ್ತಾರೆ. ಉತ್ಪನ್ನ ಮರಳಿಸಿ ರೀಫಂಡ್ ಪಡೆಯುವಂತೆ ಸಲಹೆ ಸಿಗುತ್ತದೆ. ಹಾಗೆಯೇ, ಮುಂದಿನ ದಿನಗಳಲ್ಲಿ ಇಂಥ ರೀತಿಯಲ್ಲಿ ಮಾರಾಟ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಭರವಸೆಯೂ ಸಿಗುತ್ತದೆ. ಆದರೆ, ಸೂರತ್ನ ಎಚ್ಬಿಕೆ ಎಂಟರ್ಪ್ರೈಸಸ್ ವಿರುದ್ಧ ಫ್ಲಿಪ್ಕಾರ್ಟ್ ಯಾವ ಕ್ರಮವನ್ನೂ ಕೈಗೊಳ್ಳದೇ ಇರುವುದು ಸೌಮ್ಯಾ ಗಮನಿಸುತ್ತಾರೆ.
2019ರ ಅದೇ ಆಗಸ್ಟ್ ತಿಂಗಳಲ್ಲಿ ಗ್ರಾಹಕಿ ಸೌಮ್ಯಾ ಅವರು ಬೆಂಗಳೂರಿನ ಶಾಂತಿನಗರದಲ್ಲಿರುವ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಫ್ಲಿಪ್ಕಾರ್ಟ್ ಮತ್ತು ಎಚ್ಬಿಕೆ ಎಂಟರ್ಪ್ರೈಸಸ್ ವಿರುದ್ಧ ದೂರು ನೀಡುತ್ತಾರೆ. ತಮ್ಮ ದೂರಿಗೆ ಸಾಕ್ಷ್ಯವಾಗಿ ಕೆಲ ಫೋಟೋ ಮತ್ತಿತರ ದಾಖಲೆಗಳನ್ನು ಒದಗಿಸುತ್ತಾರೆ. ಇನ್ನೊಂದೆಡೆ, ಎಂಆರ್ಪಿಗಿಂತ ಹೆಚ್ಚಿನ ದರಕ್ಕೆ ತನ್ನ ಪ್ಲಾಟ್ಫಾರ್ಮ್ನಲ್ಲಿ ಹೇಗೆ ಮಾರಾಟ ಆಯಿತು ಎಂಬುದಕ್ಕೆ ಫ್ಲಿಪ್ಕಾರ್ಟ್ನಿಂದ ಸರಿಯಾದ ವಿವರಣೆ ಬರಲಿಲ್ಲ. ಕೋರ್ಟ್ ಗ್ರಾಹಕಿ ಪರವಾಗಿ ತೀರ್ಪು ನೀಡಿ ಫ್ಲಿಪ್ಕಾರ್ಟ್ನಿಂದ ಆ ಮಹಿಳೆಗೆ 20,000 ರೂ ಪರಿಹಾರ ಕೊಡಿಸಿ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ: ಬೆಂಗಳೂರು: ಬಾರ್ನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ!
ಅಮೇಜಾನ್, ಫ್ಲಿಪ್ಕಾರ್ಟ್ ಮೊದಲಾದ ಇಕಾಮರ್ಸ್ ಪ್ಲಾಟ್ಫಾರ್ಮ್ಗಳು ತಾವೇ ಉತ್ಪನ್ನಗಳನ್ನು ನೇರವಾಗಿ ಮಾರುವುದಿಲ್ಲ. ಆ ಪ್ಲಾಟ್ಫಾರ್ಮ್ನಲ್ಲಿ ಸಾಕಷ್ಟು ಅಂಗಡಿ, ಮಳಿಗೆಗಳು ನೊಂದಾಯಿತವಾಗಿರುತ್ತವೆ. ಈ ಅಂಗಡಿಗಳು ಉತ್ಪನ್ನಗಳನ್ನು ಗ್ರಾಹಕರಿಗೆ ಮಾರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ