Sri Lanka Inflation: ಶ್ರೀಲಂಕಾದ ಹಣದುಬ್ಬರ ದರ ಡಿಸೆಂಬರ್​ನಲ್ಲಿ ಗರಿಷ್ಠ ಮಟ್ಟವಾದ ಶೇ 14ಕ್ಕೆ

ಶ್ರೀಲಂಕಾದಲ್ಲಿ ಹಣದುಬ್ಬರ ದರವು ಡಿಸೆಂಬರ್​ನಲ್ಲಿ ದಾಖಲೆಯ ಶೇ 14ಕ್ಕೆ ತಲುಪಿದೆ. ಆಹಾರ ಕೊರತೆ ಸೇರಿದಂತೆ ಇತರ ಸಮಸ್ಯೆಗಳಿಂದ ದ್ವೀಪ ರಾಷ್ಟ್ರ ಬಳಲುತ್ತಿದೆ.

Sri Lanka Inflation: ಶ್ರೀಲಂಕಾದ ಹಣದುಬ್ಬರ ದರ ಡಿಸೆಂಬರ್​ನಲ್ಲಿ ಗರಿಷ್ಠ ಮಟ್ಟವಾದ ಶೇ 14ಕ್ಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 22, 2022 | 3:14 PM

ಶ್ರೀಲಂಕಾದ ಗ್ರಾಹಕ ದರಗಳು ಡಿಸೆಂಬರ್​ನಲ್ಲಿ ದಾಖಲೆಯ ಶೇ 14ರಷ್ಟನ್ನು ತಲುಪಿದೆ. ಈ ಮೂಲಕ ಹಿಂದಿನ ತಿಂಗಳ ದಾಖಲೆ ಮಟ್ಟವಾದ ಶೇ 11.1 ದಾಟಿದೆ ಎಂದು ಅಧಿಕೃತ ಸಂಖ್ಯೆಗಳು ಶನಿವಾರ ತೋರಿಸಿವೆ. ಆಹಾರ ಹಾಗೂ ಇಂಧನ ಕೊರತೆಯು ಪರಿಸ್ಥಿತಿಯನ್ನು ಬಹಳ ಹದಗೆಡುವಂತೆ ಮಾಡಿದೆ. ಮಾರ್ಚ್​ನಲ್ಲಿ ಭತ್ತದ ಕೊಯ್ಲು ಬಾಕಿಯಿದ್ದು, ಕಳೆದ ವರ್ಷ ಕೃಷಿ ರಾಸಾಯನಿಕಗಳ ಆಮದು ನಿಷೇಧಿಸಿದ ಮೇಲೆ ಇಳುವರಿ ಕಡಿಮೆಯಾಗಿ, ಶೇ 30ಕ್ಕಿಂತ ಹೆಚ್ಚು ಕೃಷಿ ಭೂಮಿಯನ್ನು ರೈತರು ತ್ಯಜಿಸಿದ್ದಾರೆ. ಇದರಿಂದಾಗಿ ಆಹಾರ ಬಿಕ್ಕಟ್ಟು ಹೆಚ್ಚಾಗಿದೆ ಎಂದು ಹಿರಿಯ ಸಚಿವರು ಸಂಸತ್​ಗೆ ಎಚ್ಚರಿಸಿದ್ದಾರೆ. ಪ್ರವಾಸೋದ್ಯಮ ಆರ್ಥಿಕತೆ ಮೇಲೆ ಅವಲಂಬಿತವಾಗಿರುವ ಶ್ರೀಲಂಕಾಗೆ ಕೊರೊನಾ ಭಾರೀ ಹೊಡೆತ ನೀಡಿದೆ. ಇದರ ಜತೆಗೆ ವಿದೇಶೀ ವಿನಿಮಯ ಬಿಕ್ಕಟ್ಟು ದಾಟಲು ದೊಡ್ಡ ಮಟ್ಟದಲ್ಲಿ ನಿರ್ಬಂಧ ಹೇರಿತು. ಇದರಿಂದಾಗಿ ಅಗತ್ಯ ವಸ್ತುಗಳಿಗೆ ಕೊರತೆ ಎದುರಾಗಿದೆ.

ಗಣತಿ ಹಾಗೂ ಸಾಂಖ್ಯಿಕ ಇಲಾಖೆಯು ಹೇಳಿರುವ ಪ್ರಕಾರ, ವರ್ಷದಿಂದ ವರ್ಷಕ್ಕೆ ಹಣದುಬ್ಬರವನ್ನು ಗಮನಿಸುವುದಾದರೆ, ರಾಷ್ಟ್ರೀಯ ಗ್ರಾಹಕ ದರ ಸೂಚ್ಯಂಕ (NCPI) ಆರಂಭವಾದ 2015ರಿಂದ ಈಚೆಗೆ ಡಿಸೆಂಬರ್​ನಲ್ಲಿ ಗರಿಷ್ಠ ಮಟ್ಟ ಮುಟ್ಟಿತ್ತು. ಆಹಾರ ಹಣದುಬ್ಬರ ಕೂಡ ದಾಖಲೆಯ ಶೇ 21.5ರಷ್ಟು ಮುಟ್ಟಿತ್ತು. ನವೆಂಬರ್​ನಲ್ಲಿ ಅದು ಶೇ 16.9ರಷ್ಟಿತ್ತು ಹಾಗೂ ವರ್ಷದ ಹಿಂದೆ ಶೇ 7.5ರಷ್ಟಿತ್ತು. ಗುಣಮಟ್ಟ ಕಡಿಮೆ ಇರುವ ಸಾವಯವ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ತರಕಾರಿ ಮತ್ತು ಹಣ್ಣು ಬೆಳೆಗಳ ಫಸಲು ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ರೈತರ ಭಾರೀ ಪ್ರಮಾಣದ ಪ್ರತಿಭಟನೆ ನಂತರ ಅಕ್ಟೋಬರ್​ನಲ್ಲಿ ಕೃಷಿ ರಾಸಾಯನಿಕಗಳ ಆಮದು ನಿಷೇಧವನ್ನು ಹಿಂಪಡೆದಿತ್ತು. ಆದರೆ ಈಗಲೂ ಆಮದು ಮಾಡಿಕೊಳ್ಳಲು ಹಣಕಾಸು ನೆರವು ನೀಡುವುದಕ್ಕೆ ಡಾಲರ್​ನ ಕೊರತೆ ಇದೆ.

ಸೂಪರ್​ಮಾರ್ಕೆಟ್​ಗಳಲ್ಲಿ ಹಾಲಿನ ಪೌಡರ್, ಸಕ್ಕರೆ ಮತ್ತಿತರ ಅಗತ್ಯ ವಸ್ತುಗಳನ್ನು ಇಂತಿಷ್ಟೇ ಎಂದು ಮಾರಾಟ ಮಾಡುತ್ತಿವೆ. ಇನ್ನಷ್ಟು ನಿರ್ಬಂಧ ಹೇರಬಹುದು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಮುಂದಿನ ತಿಂಗಳುಗಳಲ್ಲಿ ತಾಯಂದಿರು, ವೃದ್ಧರು ಮತ್ತು ರೋಗಿಗಳಿಗೆ ಆಹಾರವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಔಪಚಾರಿಕ ಪಡಿತರ ಯೋಜನೆಗೆ ಕರೆ ನೀಡಿದ ಗಂಟೆಗಳ ನಂತರ ಕೃಷಿ ಸಚಿವಾಲಯದ ಕಾರ್ಯದರ್ಶಿ ಉದಿತ್ ಜಯಸಿಂಗ್ ಅವರನ್ನು ವಜಾಗೊಳಿಸಲಾಗಿದೆ.

2019ರಲ್ಲಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅಧಿಕಾರ ವಹಿಸಿಕೊಂಡ ನಂತರ ಶ್ರೀಲಂಕಾದ ವಿದೇಶಿ ಮೀಸಲು ಕುಸಿದಿದೆ. ಡಿಸೆಂಬರ್ ಅಂತ್ಯದ ವೇಳೆಗೆ 7.5 ಶತಕೋಟಿ ಯುಎಸ್​ಡಿಯಿಂದ 3.1 ಶತಕೋಟಿ ಡಾಲರ್​ಗೆ ಏರಿದೆ. ಪ್ರಸ್ತುತ ಅಂಕಿಅಂಶವು ಎರಡು ತಿಂಗಳಿಗಿಂತ ಕಡಿಮೆ ಆಮದುಗಳಿಗೆ ಹಣಕಾಸು ಒದಗಿಸಲು ಸಾಕಾಗುತ್ತದೆ. ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಶ್ರೀಲಂಕಾದ 35 ಶತಕೋಟಿ ಡಾಲರ್ ವಿದೇಶಿ ಸಾಲದಲ್ಲಿ ಪಾವತಿ ಮಾಡದಿರುವ ಆತಂಕದಿಂದ ಡೌನ್​ಗ್ರೇಡ್ ಮಾಡಿದೆ. ಸರ್ಕಾರವು ಹೇಳಿರುವಂತೆ ಅದು ಜವಾಬ್ದಾರಿಗಳನ್ನು ಪೂರೈಸಬಹುದು ಎನ್ನಲಾಗಿದೆ.

ಇದನ್ನೂ ಓದಿ: Food Emergeny In Srilanka: ಶ್ರೀಲಂಕಾದಲ್ಲಿ ಆಹಾರಕ್ಕೆ ತತ್ವಾರ; ವಿದೇಶೀ ವಿನಿಮಯ ಕೊರತೆ, ತುರ್ತು ಪರಿಸ್ಥಿತಿ ಘೋಷಣೆ