Sensex: ಮೊದಲ ಬಾರಿಗೆ 59000 ಪಾಯಿಂಟ್ಸ್ ದಾಟಿದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್; ಮುಂದಿನ ಹಾದಿ ಏನೆಂಬ ಆತಂಕ
ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 59 ಸಾವಿರ ಪಾಯಿಂಟ್ಸ್ ಗಡಿ ದಾಟಿದೆ. ಅದಕ್ಕೆ ಕಾರಣ ಆದ ಅಂಶಗಳೇನು ಎಂಬುದರ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆಯ “ಗೂಳಿ ಓಟ” (Bulls Run) ಗುರುವಾರ (ಸೆಪ್ಟೆಂಬರ್ 16, 2021) ಮುಂದುವರಿದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಏರಿಕೆ ಹಾದಿಯಲ್ಲಿ ಮುಂದುವರಿದಿದೆ. ಇದೇ ಮೊದಲ ಬಾರಿಗೆ 30 ಷೇರುಗಳ ಗುಚ್ಛ ಬಿಎಸ್ಇ ಸೆನ್ಸೆಕ್ಸ್ ಇಂಟ್ರಾಡೇ ವ್ಯವಹಾರದಲ್ಲಿ 59 ಸಾವಿರ ಪಾಯಿಂಟ್ಸ್ ಗಡಿ ದಾಟಿದೆ. ಮಧ್ಯಾಹ್ನ 2.23ರ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್ 357.26 ಪಾಯಿಂಟ್ಸ್ ಮೇಲೇರಿ 59,080.46 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸಿತ್ತು. ಇನ್ನು ನಿಫ್ಟಿ 90.65 ಪಾಯಿಂಟ್ಸ್ ಮೇಲೇರಿ 17,610.10 ಪಾಯಿಂಟ್ಸ್ನಲ್ಲಿ ವ್ಯವಹಾರ ನಡೆಸುತ್ತಿತ್ತು. ಸೆನ್ಸೆಕ್ಸ್ ಬುಧವಾರ 58,723.20 ಪಾಯಿಂಟ್ಸ್ನಲ್ಲಿ ಮುಕ್ತಾಯ ಆಗಿತ್ತು. ಗುರುವಾರದಂದು ಬೆಳಗ್ಗೆ 58,881.04 ಪಾಯಿಂಟ್ಸ್ನೊಂದಿಗೆ ಆರಂಭವಾಗಿತ್ತು. 30 ಷೇರುಗಳ ಗುಚ್ಛದಲ್ಲಿ 15 ಷೇರುಗಳು ಏರಿಕೆಯನ್ನು ಕಂಡಿದ್ದವು, ಉಳಿದ 15 ಇಳಿಕೆಯಲ್ಲಿತ್ತು.
ಇಂಡಸ್ಇಂಡ್ ಬ್ಯಾಂಕ್, ಐಟಿಸಿ, ಎಸ್ಬಿಐ, ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳು ಈ ಮಾರುಕಟ್ಟೆ ಏರಿಕೆಯಲ್ಲಿ ಅತಿ ಹೆಚ್ಚಿನ ಗಳಿಕೆ ಕಂಡಿವೆ. ಇನ್ನೊಂದು ಕಡೆಗೆ ಬಿಪಿಸಿಎಲ್, ಗ್ರಾಸಿಮ್, ಟಾಟಾ ಸ್ಟೀಲ್, ಟಿಸಿಎಸ್, ಶ್ರೀ ಸಿಮೆಂಟ್ಸ್ ಇಳಿಕೆ ಪ್ರಮುಖವಾಗಿ ಇಳಿಕೆ ಕಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸೂಚ್ಯಂಕಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಿದೆ. ಇನ್ನು ಸೂಚ್ಯಂಕದ ತೂಕವನ್ನು ಹಿಂದೆ ಎಳೆದಿರುವ ಕಂಪೆನಿಗಳಾಗಿ ಇನ್ಫೋಸಿಸ್, ಟಿಸಿಎಸ್ ಮತ್ತು ಬಜಾಜ್ ಫೈನಾನ್ಸ್ ಕಂಡುಬರುತ್ತವೆ.
ಷೇರು ಮಾರುಕಟ್ಟೆ ಹೀಗೆ ದಾಖಲೆ ಮಟ್ಟಕ್ಕೆ ಏರುತ್ತಾ ಸಾಗಲು ಕಾರಣ ಏನು? ಕೊವಿಡ್ 19 ಕಾರಣಕ್ಕೆ ಕುಸಿದು ಹೋಗಿದ್ದ ಗ್ರಾಹಕರ ಬೇಡಿಕೆಯಲ್ಲಿ ಮತ್ತೆ ಚೇತರಿಕೆ ಕಂಡಿದೆ. ದೇಶದ ನಾನಾ ಭಾಗಗಳಲ್ಲಿನ ಕೊವಿಡ್ ನಿರ್ಬಂಧವನ್ನು ಹಂತಹಂತವಾಗಿ ಸಡಿಲ ಮಾಡಲಾಗುತ್ತಿದೆ. ಇನ್ನು ಸಾಲದ ಮೇಲಿನ ಬಡ್ಡಿ ದರವು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಉತ್ಪಾದನಾ ವಲಯಕ್ಕೆ ಚೈತನ್ಯ ಸಿಕ್ಕಿದ್ದು, ಆ ಮೂಲಕ ಭಾರತೀಯ ಷೇರು ಮಾರುಕಟ್ಟೆ ಏರಿಕೆಗೆ ಇನ್ನಷ್ಟು ಬಲ ಬಂದಿದೆ. ಆದರೆ ಈ ಪರಿಯ ವೇಗದಲ್ಲಿ ಏರಿಕೆ ಕಾಣುತ್ತಿರುವುದರಿಂದ ಆರ್ಥಿಕತೆಗೆ ಅಪಾಯದಂತೆ ಕಂಡುಬಂದಿದೆ.
ಬ್ಲೂಮ್ಬರ್ಗ್ ಸಂಶೋಧನೆಯ ಪ್ರಕಾರ, 2020ರ ಮಾರ್ಚ್ನಲ್ಲಿ ಎನ್ಎಸ್ಇ ತಲುಪಿದ್ದ ತಳಮಟ್ಟದಿಂದ ಶೇ 130ರಷ್ಟು ಏರಿಕೆಯನ್ನು ಕಂಡಿದೆ. ಇದಕ್ಕೆ ಕೇಂದ್ರ ಬ್ಯಾಂಕ್ನ ನಗದು ಪೂರೈಕೆಯ ಬೆಂಬಲವೂ ಸಿಕ್ಕಿದೆ. ಷೇರು ಮಾರುಕಟ್ಟೆಯ ಈ ಏರಿಕೆಯು ಅಕ್ಟೋಬರ್ನಿಂದ ಡಿಸೆಂಬರ್ ತ್ರೈಮಾಸಿಕದಿಂದ ಈಚೆಗೆ ಪ್ರತಿ ತ್ರೈಮಾಸಿಕದಲ್ಲೂ ಜಿಡಿಪಿ ಬೆಳವಣಿಗೆಗೆ ಹತ್ತಿರ ಹತ್ತಿರ ಶೇ 1ರಷ್ಟು ಕೊಡುಗೆ ನೀಡುತ್ತಿದೆ. “ಭಾರತದ ಈಕ್ವಿಟಿ ಮಾರ್ಕೆಟ್ ರಚನಾತ್ಮಕವಾಗಿ ಸಕಾರಾತ್ಮಕವಾಗಿದೆ. ಗ್ರಾಹಕ ಬೇಡಿಕೆಯಲ್ಲಿ ಚೇತರಿಕೆ, ನಿಯಂತ್ರಕ ಸಂಶ್ಥೆಗಳಲ್ಲಿನ ಬದಲಾವಣೆ, ಹಣಕಾಸು ಮತ್ತು ಆರ್ಥಿ ನೀತಿಯ ಹಾದಿ ಇವೆಲ್ಲವೂ ಈ ಬೆಳವಣಿಗೆಗೆ ಕಾರಣವಾಗಿವೆ,” ಎನ್ನುತ್ತಾರೆ ವಿಶ್ಲೇಷಕರು.
ಆದರೆ, ಈ ಪರಿ ವೇಗದಲ್ಲಿ ಗಳಿಕೆ ಕಾಣುತ್ತಿರುವುದರಿಂದ ಮಾರುಕಟ್ಟೆ ಹಿನ್ನೆಲೆಗೆ ಆರ್ಥಿಕತೆಯ ದೌರ್ಬಲ್ಯ ಕಾರಣ ಆಗಲಿದೆ. ನಿಫ್ಟಿಯು ಈಗ ಅಂದಾಜು 12 ತಿಂಗಳ ಗಳಿಕೆಯ 22.2 ಪಟ್ಟು ವಹಿವಾಟು ನಡೆಸುತ್ತಿದೆ, 5 ವರ್ಷಗಳ ಸರಾಸರಿಯ 18.5ರ ಮೇಲಿದೆ. ಬೆಳವಣಿಗೆ ಮಾರುಕಟ್ಟೆಗಳ ಸೂಚ್ಯಂಕವು 12.7ರ ಗುಣಕದಲ್ಲಿ ವಹಿವಾಟಾಗುತ್ತಿದೆ. ಎತ್ತರಕ್ಕೆ ಷೇರುಗಳು ಏರಿದಂತೆ ಅವುಗಳು ಕುಸಿತ ಕಂಡಾಗ ಆರ್ಥಿಕತೆಗೆ ಅಪಾಯ ಎನ್ನುತ್ತಾರೆ ವಿಷಯ ತಜ್ಞರು.
ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?
(This Is The First Time Sensex Crossed 59000 Points Mark Here Are The Factors Influence Rally)