Facebook ಬಳಸುವ ಮುನ್ನ ಎಚ್ಚರ; ಫೇಸ್ಬುಕ್ ಗೆಳೆಯನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡ ಸೈಬರ್ ತಜ್ಞ
ಮುಂಬೈನ ಸೈಬರ್ ಎಕ್ಸ್ಪರ್ಟ್ ಒಬ್ಬರು ತಮ್ಮ ಫೇಸ್ಬುಕ್ ಫ್ರೆಂಡ್ನನ್ನು ನಂಬಿ ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೀಗಾಗಿ, ಫೇಸ್ಬುಕ್ ಸ್ನೇಹಿತರ ಬಳಿ ಹಣದ ವ್ಯವಹಾರ ಮಾಡುವ ಮುನ್ನ ಎಚ್ಚರ!
ಈಗಿನ ಟೆಕ್ನಾಲಜಿ ಯುಗದಲ್ಲಿ ಫೇಸ್ಬುಕ್(Facebook), ಟ್ವಿಟ್ಟರ್ (Twitter), ವಾಟ್ಸಾಪ್(Whatsapp), ಇನ್ಸ್ಟಾಗ್ರಾಂ (Instagram) ಬಳಸದಿರುವವರೇ ಕಡಿಮೆ ಎನ್ನಬಹುದು. ಸೋಷಿಯಲ್ ಮೀಡಿಯಾಗಳ (Social Media) ಮಾಯೆಯೇ ಅಂಥದು. ಎಲ್ಲೋ ಇರುವವರು ಇನ್ನೆಲ್ಲೋ ಇರುವವರ ಸಂಪೂರ್ಣ ಮಾಹಿತಿಯನ್ನು ಈ ಸಾಮಾಜಿಕ ಜಾಲತಾಣಗಳ ಆ್ಯಪ್ಗಳ ಮೂಲಕ ಪಡೆದುಕೊಳ್ಳಬೇಕು. ಕೊಂಚ ಖತರ್ನಾಕ್ಗಳಾಗಿದ್ದರೆ ಬೇರೊಬ್ಬರ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಕೂಡ ಸೋಷಿಯಲ್ ಮೀಡಿಯಾ ಮೂಲಕ ಸುಲಭವಾಗಿ ಹ್ಯಾಕ್ ಮಾಡಬಹುದು. ಹೀಗಾಗಿ, ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತಿತರ ಸೋಷಿಯಲ್ ಮೀಡಿಯಾ ಆ್ಯಪ್ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಾಕುವ ಮುನ್ನ ಎಚ್ಚರ. ಏಕೆಂದರೆ ಖುದ್ದು ಸೈಬರ್ ಎಕ್ಸ್ಪರ್ಟ್ (Cyber Expert) ಒಬ್ಬರು ತಮ್ಮ ಫೇಸ್ಬುಕ್ ಫ್ರೆಂಡ್ನಿಂದಾಗಿ ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಇತ್ತೀಚೆಗೆ ನಕಲಿ ಅಕೌಂಟ್ಗಳ ಹಾವಳಿ ಹೆಚ್ಚಾಗಿದೆ. ಯಾರದ್ದೋ ಒಬ್ಬರ ಫೋಟೋ, ಮಾಹಿತಿಗಳನ್ನು ಹಾಕಿಕೊಂಡು ನಕಲಿ ಫೇಸ್ಬುಕ್ ಖಾತೆ ಕ್ರಿಯೇಟ್ ಮಾಡಿ, ಅಸಲಿ ವ್ಯಕ್ತಿಯ ಸ್ನೇಹಿತರ ಬಳಿ ಹಣ ಕೇಳುವುದು ಒಂದು ದಂಧೆಯಾಗಿಬಿಟ್ಟಿದೆ. ಹೇಗೂ ನನಗೆ ಪರಿಚಯದವರೇ ಅಲ್ಲವಾ ಎಂದು ಯಾಮಾರಿ ಹಣ ಕೊಟ್ಟರೆ ಅದರ ಆಸೆ ಬಿಟ್ಟಂತೆಯೇ. ಯಾಕೆಂದರೆ ಆ ಫೇಸ್ಬುಕ್ ಅಕೌಂಟ್ ಯಾರದ್ದು ಎಂಬುದು ಕೂಡ ನಿಮಗೆ ಗೊತ್ತಾಗುವುದಿಲ್ಲ. ಕೆಲವು ದಿನಗಳ ಬಳಿಕ ಆ ಅಕೌಂಟ್ ಡಿಲೀಟ್ ಆಗಿಬಿಡುತ್ತದೆ.
ಮಹಾರಾಷ್ಟ್ರದ ಮುಂಬೈನ 35 ವರ್ಷದ ಸೈಬರ್ ತಜ್ಞರೊಬ್ಬರು ತಮ್ಮ ಫೇಸ್ಬುಕ್ ಸ್ನೇಹಿತನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸೈಬರ್ ಸೆಕ್ಯುರಿಟಿ ಬಗ್ಗೆ ಕೆಲಸ ಮಾಡುತ್ತಿರುವ ಈ ವ್ಯಕ್ತಿ 2018ರಿಂದಲೂ ಫೇಸ್ಬುಕ್ನಲ್ಲಿ ಸ್ನೇಹಿತರೊಬ್ಬರೊಂದಿಗೆ ಚಾಟ್ ಮಾಡುತ್ತಿದ್ದರು. ತಾನು ದುಬೈನ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿರುವುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದ. ಹೀಗಾಗಿ, ಮುಂಬೈನ ವ್ಯಕ್ತಿ ಕೂಡ ತನಗೆ ದುಬೈನಲ್ಲಿ ಒಂದು ಒಳ್ಳೆಯ ಕೆಲಸವಿದ್ದರೆ ಹೇಳುವಂತೆ ಮನವಿ ಮಾಡಿದ್ದರು.
ಅದಕ್ಕೆ ಒಪ್ಪಿದ್ದ ಆತ ಬಹಳ ಬೇಗ ಜಾಸ್ತಿ ಹಣ ಸಂಪಾದಿಸಲು ನನ್ನ ಬಳಿ ಒಂದೆರಡು ಪ್ಲಾನ್ಗಳಿವೆ ಎಂದು ಹೇಳಿದ್ದ. ಸಾಫ್ಟ್ವೇರ್ ಕಂಪನಿಯಲ್ಲಿದ್ದರೂ ಇನ್ನೂ ಹೆಚ್ಚು ಹಣ ಸಂಪಾದಿಸಬೇಕೆಂಬ ಆಸೆಯಿಂದ ಮುಂಬೈನ ಸೈಬರ್ ಎಕ್ಸ್ಪರ್ಟ್ ತನ್ನ ಫೇಸ್ಬುಕ್ ಫ್ರೆಂಡ್ನ ಪ್ಲಾನ್ ಬಗ್ಗೆ ಕೇಳಿದ್ದರು. ಅದಕ್ಕೆ ಹೊಸ ಕತೆ ಕಟ್ಟಿದ್ದ ಆತ, ‘ದುಬೈನಲ್ಲಿರುವ ನಮ್ಮ ಬ್ಯಾಂಕ್ನ ಗ್ರಾಹಕರೊಬ್ಬರ ಬಳಿ ಸುಮಾರು 200 ಕೋಟಿ ರೂ.ಗೂ ಹೆಚ್ಚು ಆಸ್ತಿಯಿದೆ. ಅವರಿಗೆ ಯಾರೂ ಮಕ್ಕಳಿಲ್ಲ. ಅವರು ಇತ್ತೀಚೆಗಷ್ಟೇ ಸಾವನ್ನಪ್ಪಿದರು. ಹೀಗಾಗಿ, ಆ ಹಣಕ್ಕೆ ಯಾರೂ ವಾರಸ್ದಾರರಿಲ್ಲ. ನಮ್ಮ ಬ್ಯಾಂಕ್ನ ಖಾತೆಯಲ್ಲಿರುವ ಆ ಹಣವನ್ನು ನನ್ನ ಖಾತೆಗೆ ಹಾಕಿಕೊಂಡರೆ ಅಪರಾಧವಾಗುತ್ತದೆ. ಅದನ್ನು ಕಾನೂನುಬದ್ಧವಾಗಿ ನಿನ್ನ ಖಾತೆಗೆ ವರ್ಗಾಯಿಸುತ್ತೇನೆ. ನಂತರ ಆ ಹಣವನ್ನು ನಾವಿಬ್ಬರೂ ಹಂಚಿಕೊಳ್ಳೋಣ’ ಎಂಬ ಐಡಿಯಾ ಕೊಟ್ಟಿದ್ದ.
ತನಗೆ ಅಯಾಚಿತವಾಗಿ 100 ಕೋಟಿ ರೂ. ಸಿಗುತ್ತದೆ ಎಂಬುದನ್ನು ಕಲ್ಪನೆ ಮಾಡಿಕೊಂಡೇ ಆಕಾಶದಲ್ಲಿ ತೇಲಾಡುತ್ತಿದ್ದ ಸೈಬರ್ ಎಕ್ಸ್ಪರ್ಟ್ ಈ ಪ್ಲಾನ್ಗೆ ಓಕೆ ಎಂದಿದ್ದರು. ಆ ಹಣವನ್ನು ತನಗೆ ವರ್ಗಾಯಿಸಲು ಮುಂಗಡವಾಗಿ ಸೈಬರ್ ಎಕ್ಸ್ಪರ್ಟ್ ತನ್ನ ಫೇಸ್ಬುಕ್ ಗೆಳೆಯನಿಗೆ 2 ಲಕ್ಷ ರೂ. ಹಣವನ್ನು ನೀಡಿದ್ದ. ನಂತರ ದುಬೈನಲ್ಲಿದ್ದ ಸ್ನೇಹಿತ ಮೇಲ್ ಮೂಲಕ ಹಲವು ದಾಖಲೆಗಳನ್ನು ಕಳುಹಿಸಿ, ಸಹಿ ಮಾಡಿ ವಾಪಾಸ್ ಕಳುಹಿಸಲು ಹೇಳಿದ್ದ. ಆದರೂ ಅನುಮಾನಗೊಂಡ ಸೈಬರ್ ಎಕ್ಸ್ಪರ್ಟ್ ಆ ದಾಖಲೆಗಳನ್ನು ತನಗೆ ಪರಿಚಯವಿರುವ ವಕೀಲರೊಬ್ಬರಿಗೆ ತೋರಿಸಿದ್ದರು. ಆ ವಕೀಲ ಕೂಡ ಆ ದಾಖಲೆಗಳೆಲ್ಲವೂ ಒರಿಜಿನಲ್ ಎಂದು ಹೇಳಿದ್ದರಿಂದ ಆತನಿಗೆ ಯಾವುದೇ ಅನುಮಾನವಿರಲಿಲ್ಲ. ಆ ಪೇಪರ್ಗಳನ್ನು ರೆಡಿ ಮಾಡಿಸಿ, 200 ಕೋಟಿ ರೂ.ಗಳನ್ನು ತನ್ನ ಹೆಸರಿಗೆ ವರ್ಗಾಯಿಸಲು ತಗುಲುವ ವೆಚ್ಚಕ್ಕಾಗಿ ಆತ 2019ರ ವೇಳೆಗೆ ದುಬೈನ ಗೆಳೆಯನಿಗೆ 12 ಲಕ್ಷ ರೂ. ವರ್ಗಾಯಿಸಿದ್ದರು.
ಅದಾದ ಬಳಿಕ ಹಲವು ದಿನಗಳಾದರೂ ದುಬೈನ ಫೇಸ್ಬುಕ್ ಗೆಳೆಯನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮುಂಬೈನ ವ್ಯಕ್ತಿ ಚಾರ್ಟರ್ಟ್ ಅಕೌಂಟೆಂಟ್ ಬಳಿ ನಡೆದ ವಿಷಯವನ್ನೆಲ್ಲ ಹೇಳಿದ್ದರು. ಆದರೆ, ಆ ದಾಖಲೆಗಳಲ್ಲಿ ಯಾವುದೇ ತಪ್ಪುಗಳಿಲ್ಲ, ಎಲ್ಲವೂ ಕಾನೂನುಬದ್ಧವಾಗಿದೆ ಎಂದು ಸಿಎ ಹೇಳಿದ್ದರಿಂದ ಮುಂಬೈನ ವ್ಯಕ್ತಿ ಕೊಂಚ ನಿರಾಳವಾಗಿದ್ದರು. ಸೈಬರ್ ಎಕ್ಸ್ಪರ್ಟ್ ಆಗಿದ್ದ ಆತ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಆ ಫೇಸ್ಬುಕ್ ಫ್ರೆಂಡ್ ಬಗ್ಗೆ ಮಾಹಿತಿ ಹೊರಗೆ ತೆಗೆಯಲು ಪ್ರಯತ್ನಿಸಿದ್ದರು. ಆ ಫೇಸ್ಬುಕ್ ಖಾತೆಯನ್ನು ದುಬೈ ಮತ್ತು ಟರ್ಕಿಯಿಂದ ಆಪರೇಟ್ ಮಾಡಲಾಗುತ್ತಿದೆ ಎಂಬುದು ಆತನಿಗೆ ಗೊತ್ತಾಗಿತ್ತು. ಇಲ್ಲೇನೋ ಗೋಲ್ಮಾಲ್ ನಡೆಯುತ್ತಿದೆ ಎಂದು ಅನುಮಾನಗೊಂಡ ಆತ ಬಿಕೆಸಿ ಸೈಬರ್ ಪೊಲೀಸ್ಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Crime News: ನಾಲ್ಕು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ; ಬೆಂಗಳೂರಿನಲ್ಲಿ ಘಟನೆ
(Crime News: Mumbai Cyber expert falls for Facebook friends plot loses Rs 12 lakh in Cyber Fraud)